ಈ ಅಮ್ಮಂದಿರೇ ಹೀಗೆ!!!! ಎಲ್ಲರಿಗೂ ಅರ್ಥವಾಗುವಷ್ಟು ಸರಳ, ಅವರಿಗಷ್ಟೆ ಅರ್ಥವಾಗುವ ವಿರಳ ವಿಶಿಷ್ಟ. ಈ ಸಲ ನನ್ನ ಅಮ್ಮಳ ಬಗ್ಗೆ ಬರೆಯಬೇಕೆಂದೆನಿಸಿದಾಗ ತಲೆಗೆ ಬಂದದ್ದು ನನ್ನ ಮಾತೃಭಾಷೆ, ಕಾರಣ ಈ ಅಮ್ಮಂದಿರಿಗು ಮಾತೃಭಾಷೆಗು ಇರುವ ವಿಶೇಷ ನಂಟು. ಅರಿವಿಲ್ಲದೇ ಆದ ನೋವಿಗೆ ಮೊದಲು ಬರುವ ಶಬ್ದವೇ "ಅಮ್ಮ" ಅದು ನಮ್ಮ ಮಾತೃಭಾಷೆಯಲ್ಲಿ ಮಾತ್ರ.
ನಾನು ಓದಿಗಾಗಿ ಮನೆ ಬಿಟ್ಟಿದ್ದು ೬ ನೇ ತರಗತಿಯಲ್ಲಿ ನಂತರ ಸೇರಿದ್ದು ತುಮಕೂರು ಜಿಲ್ಲೆಯ ನವೋದಯ ವಿದ್ಯಾಲಯ ಶಾಲೆಗೆ. ವರ್ಷಕ್ಕೆರಡು ಸಲ ಶಾಲೆಯಿಂದ ಮನೆಗೆ ಬರಲು ಅವಕಾಶವಿದ್ದ ನನಗೆ ಮನೆಗೆ ಬಂದಾಗ ಅಮ್ಮನ ವಿಶೇಷ ಪ್ರೀತಿ. ಈಗೀಗ ಸಮಯ ಸಿಕ್ಕಾಗ ಅಮ್ಮಳನ್ನು ನೋಡಲು ಊರಿಗೆ ಬರುವುದು, ಅವಳ ಜೊತೆ ಸಣ್ಣ ಪುಟ್ಟ ಜಗಳ , ಮತ್ತದೇ ಪ್ರೀತಿ, ಅವಳ ಅನುಕಂಪ, ಷರತ್ತುಗಳೇ ಇಲ್ಲದ ಆ ಭಾವನೆಗಳನ್ನು ನೋಡಿದಾಗ ನಾಸ್ತಿಕನಾಗುವ ಯೋಚನೆ ಮಾಡುವ ನನಗೆ ದೇವರಿದ್ದಾನೆ ಎಂಬುವ ನಂಬಿಕೆ ಇನ್ನಷ್ಟು ಬಲವಾಗುತ್ತದೆ.
ಅವಳಿಗೆ ಏನೂ ಬೇಡ !! ಆದರೆ ತನ್ನ ಮಕ್ಕಳು, ಪತಿಗೆ ಎಲ್ಲವೂ ಬೇಕೆನ್ನುವ ಈ ಅಮ್ಮನನ್ನು ನೋಡಿದಾಗಲೇ ನನಗನಿಸಿದ್ದು ಜಗತ್ತಿನಲ್ಲಿರುವ ಯಾರಿಗೂ ಅರ್ಥವಾಗದ ಅಚ್ಚರಿ ಇವಳೇ ನನ್ನಮ್ಮ.. ಊಟ ಮಾಡಲು ಕುಳಿತಾಗ ಅಲ್ಲಿಯೂ ಅವಳ ಮೋಡಿ! ನಾನು ಒಂದು ಚಪಾತಿ ಕೇಳಿದರೆ ಅವಳು ಕೊಡುವುದು ಯಾವಗಲು ಎರಡೇ. ಇದನ್ನು ನೋಡಿದಾಗ ತಟ್ಟನೆ ಹೊಳೆದಿದ್ದು ನನ್ನ ಸ್ನೇಹಿತರೊಬ್ಬರು ಇಲ್ಲೇ ಬರೆದಿದ್ಡ ಒಂದು ಮಾತು "ಈ ಅಮ್ಮನಿಗೆ ಗಣಿತವೇ ಬರುವುದಿಲ್ಲ".
ಹೀಗೆ ಬೆಳ್ಳಂಬೆಳಗ್ಗೆ ಎದ್ದು ಬರೆಯುತ್ತಿದ್ದ ನನಗೆ ಮತ್ತೊಂದು ಸಲ ಎಚ್ಚರವಾಗಿದ್ದು ಅವಳ ಕೂಗು ಕೇಳಿದಾಗಲೇ "ಲೋ, ಆ ಫೋನ್ ಯಾವಾಗ್ಲು ನೋಡಿದ್ರೆ ಕಣ್ಣು ಹೋಗುತ್ತಂತೆ, ಮೊನ್ನೆ ಟಿ ವಿ ನಲ್ಲಿ ತೋರಿಸ್ತಾ ಇದ್ರು. ತಿಂಡಿ ಏನ್ ಮಾಡ್ಲಿ ಹೇಳು ಮಗ". ಈ ಅಮ್ಮಂದಿರೇ ಹೀಗೆ ಎಲ್ಲರಿಗೂ ಅರ್ಥವಾಗುವಷ್ಟು ಸುಂದರ, ಯಾರಿಗೂ ಅರ್ಥವಾಗದಷ್ಟು ಅದ್ಬುತ !!!!ಅಮ್ಮ ಈ ತಿಂಗಳಿಗೆ ಐವತ್ತು ವರ್ಷ ಮುಗಿಸುವ ಈ ಹೊತ್ತಿನಲ್ಲಿ ಅವಳಿಗೆ ನನ್ನದೊಂದು ನಮನ :) :)

No comments:
Post a Comment