Monday, 11 February 2019

ವಿಂಡ್ ಮಿಲ್ ಮೋಕ್ಷ

ಈ ವರ್ಷದ ನನ್ನೆರಡನೆಯ  ಬರಹ: ವಿಂಡ್ ಮಿಲ್ ಮೋಕ್ಷ
ಮುನ್ನುಡಿ :  ಕಾರಂತಜ್ಜಾರ ಬೆಟ್ಟದ ಜೀವ ಓದಿ ಮೂರ್ನಾಲ್ಕು ದಿನ ಬೆಟ್ಟದ ಜೀವವನ್ನು ನೆನೆಯುತ್ತಾ,
ನಂತರ ಮರಳಿ ಮಣ್ಣಿಗೆ ಓದಿ ಅಜ್ಜಾರ ಬರಹದ
ಸವಿಯನ್ನುಂಡಿದ್ದೆ. ಇಂತಹ ಕಡಲ ಜೀವಗಳು, ಬೆಟ್ಟದ ಜೀವಗಳು ನೂರಾರು ಇವೆ ಎಂದು ಅನಿಸಿದ್ದು  ೨೦೧೦ ರ ಆಸುಪಾಸಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಬೈಫ್ ಸಂಸ್ಥೆಯ ವಾಲಂಟೀರ್ ಆಗಿ ಸೇರಿದ್ದಾಗ. ಸುವರ್ಣ ಸಂಕಲ್ಪ ಯೋಜನೆಯ ಕುಟುಂಬಗಳನ್ನು ಭೇಟಿ ಮಾಡಿ ವರದಿ ಮಾಡುವ ಅವಕಾಶ ಸಿಕ್ಕಾಗ ಚಿತ್ರದುರ್ಗ, ತುಮಕೂರು, ಮೈಸೂರು, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳನ್ನು ಸುತ್ತಿ ನೂರಾರು ರೈತ ಕುಟುಂಬಗಳನ್ನು ಭೇಟಿ ಮಾಡಿದ್ದೆ. ಇಂತಹ ಅನೇಕ ರೈತ ಕುಟುಂಬಗಳು ತೋರಿದ ಪ್ರೀತಿ ಬಲು ಮಧುರ .  ಹಾಗೆ ಅಲೆಯುತ್ತಿದ್ದಾಗ ಚಿತ್ರದುರ್ಗದ ಆಸುಪಾಸಿನಲ್ಲಿ ಭೇಟಿ ಮಾಡಿದ ಮಂಜಪ್ಪನವರು , ಪದ್ಮಕ್ಕಾ ಮತ್ತು ನಿಂಗಜ್ಜಿಯರನ್ನೆಲ್ಲ ಸೇರಿಸಿ ಬರೆದದ್ದೆ "ವಿಂಡ್ ಮಿಲ್ ಮೋಕ್ಷ" . ಇದು ಪೂರ್ತಿ ಸತ್ಯವೂ ಅಲ್ಲದ ಹಾಗೆಯೇ ಪೂರ್ತಿ ಕಥೆಯೂ ಅಲ್ಲದ ಒಂದು ಸಣ್ಣ ಬರಹ.
                                          ವಿಂಡ್ ಮಿಲ್ ಮೋಕ್ಷ
_________________೦೧___________________
ಡಿಸೆಂಬರ್ ತಿಂಗಳು, ಮಧ್ಯಾನ. ಬುದ್ಧನೇ ಮೈ ಮೇಲೆ ಬಂದಾಂತಾಗಿ ಎದ್ದ ಆನಂದ ತನ್ನ ಹಳೆಯ ಬುಲೆಟ್ ಎತ್ತಿಕೊಂಡು ಬ್ಯಾಕ್ ಪ್ಯಾಕ್ ಹಾಕಿ ಹೊರಟದ್ದು ಗೊತ್ತು ಗುರಿಯಿಲ್ಲದ ಊರ ಕಡೆಗೆ.ಬುದ್ದನಾಗಲು ಹೊರಟಿದ್ದವನಿಗೆ ಚಹಾದ ಹುಚ್ಚು ಇನ್ನೂ ಹೋಗಿರಲಿಲ್ಲ.  ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು  ಮುನ್ನೂರು ಕಿಲೋಮೀಟರ್ ಬಂದಿದ್ದಿರಬಹುದು, ಚಹಾ ಕುಡಿಯಲು ಗಾಡಿ ರಸ್ತೆ ಬದಿಗೊತ್ತಿಸಿದ,  ಚಿತ್ರದುರ್ಗದ ಆಸುಪಾಸಿರಬೇಕು.  ಚಹಾ ಕುಡಿಯುತ್ತಾ ಎಡಕ್ಕೆ ತಿರುಗಿದವನಿಗೆ ದೂರದಲ್ಲಿ ಕಂಡದ್ದು ವಿಂಡ್ ಮಿಲ್ ನ ಬೃಹತ್ ಗಾತ್ರದ ರೆಕ್ಕೆಗಳು. ದಾರಿ ಗೊತ್ತಿಲ್ಲದೆ ಬಂದವನಿಗೆ ಗುರಿಯೇನಿದೆ!?,  ಸರಿ ಎಂದು ಗುಡ್ಡದ ಕಡೆ ಬೈಕ್ ಚಲಾಯಿಸಿದ. ಗಂಟೆ ಗಟ್ಟಲೆ ಸಾಗಿದರೂ ಹತ್ತಿರ ಬಂದಂತಾಗಲಿಲ್ಲ. ರಸ್ತೆಯಲ್ಲಿ ಒಂದು ನರಪಿಳ್ಳೆಯೂ ಕಾಣದೆ ಗಾಡಿ ಮುನ್ನಡೆಸಿದ. ಸ್ವಲ್ಪ ದೂರವಾದ ಮೇಲೆ ಟಾರ್ ರಸ್ತೆ ಮುಗಿದು ಮಣ್ಣು ರಸ್ತೆ ಕಂಡಿತು. ಗುರಿಯಿಲ್ಲದೆ ಹೊರಟವನಿಗೆ ರಸ್ತೆಯಾದರೇನು ಮಣ್ಣಾದರೇನು ! ಹಾಗೆಯೇ ಮುಂದೆ ಹೋಗುತ್ತಾ ವಿಂಡ್ ಮಿಲ್ ಹತ್ತಿರವಾಗತೊಡಗಿತು. ಮತ್ತೊಂದಿಷ್ಟು ದೂರ ಹೋದ ಮೇಲೆ ಕಂಡದ್ದು ಮಾಮೂಲಿ ರಸ್ತೆ ಹೋಗಿ ಕಲ್ಲಿನಿಂದ ತುಂಬಿ ಹೋಗಿದ್ದ ಸೀಳುದಾರಿ. ಬುಲೆಟ್ ಆದ್ದರಿಂದ ಬೈಕ್ ಚಲಾಯಿಸಲು ಇವನಿಗೇನು ಕಷ್ಟವೆನಿಸಿರಲಿಲ್ಲ. ಸೂರ್ಯ ಪಶ್ಚಿಮಕ್ಕೆ ಮುಳುಗಿ ಬೆಟ್ಟದ ಹಿಂದೆ ಹೋದದ್ದರಿಂದ ಕತ್ತಲು ಆವರಿಸುತ್ತಿತ್ತು. ಗಾಡಿಯ ಬೆಳಕು ಹೊತ್ತಿಸಿ ಮುನ್ನೆಡದವನಿಗೆ ಇನ್ನ ಮುಂದೆ ದಾರಿ ಕಾಣಿಸಲಿಲ್ಲ, ಬೈಕ್ ನಿಲ್ಲಿಸಿ ಸುತ್ತಲೂ ನೋಡಿದ. ಅಲ್ಲಿಯೇ ಬಲಕ್ಕೆ ಸ್ವಲ್ಪ ದೂರದಲ್ಲಿ ದೀಪ ಉರಿಯುತ್ತಿತ್ತು , ಇದ ಕಂಡು ಆನಂದನಿಗೆ ಸ್ವಲ್ಪ ನಿರಾಳವಾಗತೊಡಗಿತು. ಅದೊಂದು ಸಣ್ಣ ದೇವಸ್ಥಾನ , ಇವನು ಎಂದು ನೋಡಿರದ ದೇವರ ಮೂರ್ತಿ ಅಲ್ಲಿತ್ತು. ಜನ ತುಂಬಿರುವ ದೇವಸ್ಥಾನಗಳನ್ನು ಆನಂದ ಎಂದೂ ಇಷ್ಟ ಪಟ್ಟವನಲ್ಲ.  ಆದರೆ ಅಲ್ಲೇಕೊ ಬಹಳ ಶಾಂತವೆನೆಸಿತು. ಬೈಕ್ ಇಳಿದು ಹತ್ತಿರ ಹೋದವನಿಗೆ ಕಂಡದ್ದು, ಬಾಳೆಹಣ್ಣಿನ ರಸಾಯನ, ಕಡುಬು ಮತ್ತು ಹಿಡಿ ಮೊಸರನ್ನ. ಸುತ್ತಲೂ ನೋಡಿದ , ಸ್ವಲ್ಪ ದಣಿದಿದ್ದರಿಂದ ಹೊಟ್ಟೆ ಹಸಿವಾಗಿತ್ತು ಆದ್ದರಿಂದ ಸುತ್ತಲೂ ನೋಡಿ ಯಾರು ಕಾಣದೆ ದೇವರ ಪ್ರಸಾದವೆಂದು ತಿಳಿದು ಹೊಟ್ಟೆ ತುಂಬಾ ತಿಂದು ಮುಗಿಸಿದ. ಅಲ್ಲಿಯೇ ನೀರಿನ ಸರ ಹರಿಯುತ್ತಿತ್ತು. ಚಂದಿರನ ಬೆಳಕಿಗೆ ನೀರು ಹೊಳೆಯುತ್ತಿದ್ದರಿಂದ ಸರಾಗವಾಗಿ ನೀರಿನಲ್ಲಿ ಕೈತೊಳೆದು ಬಾಯಿಗೆ ತುಂಬಿಕೊಂಡು ಚೆಂದವೆನಿಸಿ ಮನಸೋ ಇಚ್ಛೆ ನೀರು ಕುಡಿದ. ನಂತರ ಎದ್ದವನೇ ದೇವಸ್ತಾನದ ಹಿಂದೆ ನೋಡಿ, ಸುಮ್ಮನೆ ಯೋಚಿಸುತ್ತಾ ಮುನ್ನಡೆದ ಶಂಕರನಿಗೆ ದೂರದಲ್ಲೇನೋ ಎರಡು ಬೆಳಕು ಕಂಡು ಅಲ್ಲಿಯೇ ನಿಂತ. ಯಾರೋ ಮನುಷ್ಯ ಎಂದು ತಿಳಿದು ಹಾಗೆಯೇ ನಿಂತವನಿಗೆ ಕಂಡದ್ದು ಬೆಳಕು ಇವನ ಕಡೆ ಚಲಿಸುತ್ತ್ತಿರುವುದು. ಬರು ಬರುತ್ತಾ ಬೆಳಕು ವೇಗವಾಗಿ ಚಲಿಸ ತೊಡಗಿತ್ತು , ಗೊತ್ತಾಗದೆ ನಿಂತಿದ್ದವನಿಗೆ ಅದೇ ಬೆಳಕು ಬಂದು ಹಠಾತ್ತನೆ ಗುದ್ದಿತ್ತು.  ನೋವಿಗೆ ಆನಂದ ಜೋರಾಗಿ ಅರಚಿದ್ದ. ಆಗ ಅಲ್ಲಿಯೇ ಎಲ್ಲೋ ಇದ್ದ ವ್ಯಕ್ತಿಯೋರ್ವರು ಓಡಿ ಆನಂದನ ಕಡೆಗೆ ಬಂದಿದ್ದರು. ದೇವಸ್ತಾನದ ಪೂಜೆ ಮುಗಿಸಿ, ತೋಟ ಸುತ್ತುತ್ತಿದ್ದ ಮಂಜಪ್ಪನವರು ಆನಂದನನ್ನು ಮೇಲಕ್ಕೆತ್ತಿ ನೋಡಿ ಮಾತನಾಡಿಸಿದಾಗ ತಿಳಿದಿದ್ದು ಅದು ಕಾಡ  ಹಂದಿಯೆಂದು. ಅಷ್ಟೇನೂ ಪೆಟ್ಟು ಬೀಳದ ಕಾರಣ ಆನಂದ ಸ್ವಲ್ಪ ಸುಧಾರಿಸಿಕೊಂಡು ಮಂಜಪ್ಪನವರ ಜೊತೆ ನಡೆಯ ತೊಡಗಿದ. ಹಾಗೆ ಹೋದವನಿಗೆ ಹತ್ತಾರು ಮನೆಗಳು ಕಂಡು ಯಾವುದೋ ಹಳ್ಳಿಯೊಳಗೆ ಬಂದಿರುವುದು ಖಚಿತವಾಯಿತು. ಆದದ್ದೆಲ್ಲ ಆಯಿತು , ಬೈಕ್ ದೇವಸ್ತಾನದ ಬಳಿಯೇ ಇರಲಿ ಎಂದು ತಿಳಿಸಿ ಆನಂದನಿಗೆ ಅಲ್ಲಿಯೇ ತಂಗಿದ್ದು ಬೆಳಿಗ್ಗೆ ಹೊರಡಲು ಮಂಜಪ್ಪನವರು ಕೇಳಿಕೊಂಡಾಗ ಆನಂದನ ಬಳಿ ದಾರಿಯೇ ಉಳಿದಿರಲಿಲ್ಲ. ಮನೆ ತಲುಪಿ ಮಂಜಪ್ಪನವರ ಪತ್ನಿ ಪದ್ಮಕ್ಕನವರ ಪರಿಚಯವಾಗಿ ಹಠಾತ್ತನೆ ಬಂದ ಅತಿಥಿಯ ಜೊತೆ ತಡರಾತ್ರಿಯವರೆಗೆ ಮಾತುಕತೆ ಮುಂದುವರೆದಿತ್ತು.
_________________೦೩___________________
ಬೆಚ್ಚನೆ ಹೊದಿಕೆಯಲಿ ಕಣ್ಮುಚ್ಚಿ ಕಣ್ತೆಗೆದು ಕೊರೆವ ಚಳಿಯೊಂದಿಗೆ ಕಣ್ಣು ಮುಚ್ಚಾಲೆ ಆಡುತ್ತಿದ್ದ ಆನಂದನಿಗೆ ಪೂರ್ಣ ಎಚ್ಚರವಾದದ್ದು ಪದ್ಮಕ್ಕ ಮನೆಯಲ್ಲೆ ತಡ ಹೊತ್ತಿನವರೆಗೂ ಮಲಗಿದ್ದ ಅವಳ ಗಂಡನಿಗೆ ಪ್ರೀತಿಯಿಂದ ಮಂಜು-ಮರಿ ಅಂತ ಅಲ್ಲೇ ಪಡಸಾಲೆಯಲ್ಲಿ ಮಲಗಿರುವವರಿಗೆಲ್ಲರಿಗೂ ಕೇಳಿಸೋ ಹಾಗೆ ಕೂಗಿದಾಗ ! ಯಾರೆಳಿದ್ದು ಹಳ್ಳಿಗಳಲ್ಲಿ ಗಂಡ ಹೆಂಡತಿಯರು ಪ್ರೀತಿ ತೋರ್ಪಡಿಸೋದು ಕಡಿಮೆಯೆಂದು. ಮಂಜಪ್ಪನವರ ಹೆಸರು ಹೆಂಡತಿಯ ಬಾಯಿಯಿಂದ ಮಂಜುಮರಿ ಎಂದು ಕೇಳಿದಾಗ ಆದ ಪ್ರೀತಿಯ ದರ್ಶನ,  ಕೋಟಿಕೋಟಿ ಸುರಿದು ಮಾಡಿದ  ಸಿನಿಮಾಗಳಲ್ಲೂ  ಇವ ಕಂಡಿರಲಿಲ್ಲ. ಇನ್ನೂ ಅರಿಯದ ನಿದ್ದೆಯ ಮಂಪರಿನ ಆಕಳಿಕೆಯ ನೆಪದಲ್ಲಿ ಲೀಟರ್ ಗಟ್ಟಲೆ ಗಾಳಿಯ ಒಳ ಎಳೆದು, ಹೊರ ದಬ್ಬಿ ಹೊರ ನಡೆದವನಿಗೆ ಕಂಡದ್ದು ಪದ್ಮಕ್ಕನ ಮನೆ ಮುಂದಿರುವ ಅಂದದ ರಂಗೋಲಿ. ಬಾಗಿಲು ಸಾರಿಸಿ,ಮನೆ ಮುಂದೆ ಇರೋ ಹೂಗಿಡಗಳಲೆರೆಡು ಹೂ ಕಿತ್ತು ರಂಗೋಲಿಗೆ ಮುಡಿಸಿ, ಹೊಸಲಿಗೆ ಅರಿಶಿನ ಕುಂಕುಮ ಅಲಂಕರಿಸಿ,  ಅಲ್ಲೇ ದೂರದಲ್ಲಿದ್ದ ಆಕಳುಗಳ ಬಳಿ ಹೊರಡುವ ತವಕದಲ್ಲಿದ್ದ ಪದ್ಮಕ್ಕ ನನ್ನ ಕಂಡೊಡನೆ ಇಲ್ಲೇ ಕೂತಿರು ಮಗ ಹಿಂಗ್ ಹೋಗಿ ಹಂಗ್  ಬಂದ್ಬಿಡ್ತಿನಿ ಅಂದವಳೇ ಮುಗುಳ್ನಕ್ಕು ಹೊರಟು ಹೋದಳು.  ಒಣ ಮಣ್ಣಿಗೆ ಹಸಿ ನೀರು ತಗುಲಿದ್ದರಿಂದ ಸುವಾಸನೆ ಮೂಗಿಗೆ ಗಮ್ಮೆಂದು ಬಡಿದಿತ್ತು. ಅಲ್ಲಿಯೇ ಜಗುಲಿಯ ಮೇಲೆ ಕುಳಿತ. ಪದ್ಮಕ್ಕ ಒಂದಲ್ಲ ಎರಡಲ್ಲಾ , ಸಾಕಿ ಉಳಿಸಿರೋ ಆಕಳಿನ ಸಂಖ್ಯೆಯ ಇಂದಿಗೂ ಹತ್ತಾರು. ಹೆತ್ತ ಮಕ್ಕಳೂಂದು ಕಡೆಯಾದರೆ ಅವಳಿಗೆ ಇವು ಒಂದು ಕಡೆ. ಆಕಳಿಗೊಂದಂದು ಹೆಸರು, ಒಂದೊಂದರ ಹೆಸರು ಕರೆದಾಗಲೂ ತಲೆಯೆತ್ತಿ ನೋಡುವ ಆಕಳುಗಳು.  ಒಣ ಮೇವಿದ್ದರೂ , ಎಲ್ಲಿಂದಲಾದರೂ ಹಸಿ ಮೇವು ತಂದು ಹಾಕಬೇಕೆಂದು ಹಂಬಲಿಸುವ ಇವಳ ಮನಸ್ಸು ವಿಶಾಲ. ಮನೆ ಒಳಗೆ ಕೂತು ಒಲೆ ಉರಿಸುವುದಕ್ಕಿಂತ ಕಾಡು ಸುತ್ತಿ ಈ ಆಕಳುಗಳ ಹೊಟ್ಟೆ ತುಂಬಿಸುವದರಲ್ಲೇ ಇವಳಿಗೆ ಹೆಚ್ಚು ಸಮಾಧಾನ ಮತ್ತು ಖುಷಿ. ದಿನ ಕಳೆದಂತೆ ವಯಸ್ಸೇನು ಬರುವುದೇ, ಹಾಗಾಗಿ ಮನಸಲ್ಲಿ ಉತ್ಸಾಹವಿದೆ ಆದರೆ ಮುಖದಲ್ಲಿ ವಯಸ್ಸಿನ ಗೆರೆಗಳು. ಯೆಚ್ ಯೆಫ್ ಜೆರ್ಸಿ ಹಸುಗಳ ಹಾವಳಿಯಲ್ಲಿ,  ಇಲ್ಲಿ ಎಲ್ಲವೂ ನಾಟಿ ಆಕಳುಗಳೆ ಆದ್ದರಿಂದ ಇರುವುದರಲ್ಲಿ ಕೆಲಸ ಸುಲಭವೇ. ಅವಳ ಕೊಟ್ಟಿಗೆಯಲ್ಲಿರುವ ಎರಡು ಎಮ್ಮೆಗಳಿಗೆ ಸಾಟಿಯಾವುದಿಲ್ಲ. ಮನೆ ಮಂದಿಯೆಲ್ಲ ಕುಡಿದು ಸಾಕಾಗುವಷ್ಟು ಹಾಲು ಮೊಸರು ತುಪ್ಪ ಬೆಣ್ಣೆ ಎಲ್ಲವೂ . ಮಿಕ್ಕಿದ್ದು ನಂದಿನಿ ಡೈರಿಗೆ ಸೇರಿ ತಿಂಗಳ ಕೊನೆಯಲ್ಲಿ ಮುಂದಾಗುವ ಮೊಮ್ಮಕ್ಕಳ ಕೈಗಿಡಲು ಎರಡು ಬಿಡಿಗಾಸು. ನಂಬಿಕೆ ಇದ್ದರೂ ಮನೆಯಲಿ ಕೈ ಮುಗಿಯುವುದು ಅಷ್ಟಕ್ಕಷ್ಟೇ, ದಾರಿಯಲಿ ಕಂಡ ದೇವಸ್ಥಾನಗಳಿಗೆ ಕೈ ಮುಗಿಯುತ್ತಾ ಕಾಯಕವೇ ಕೈಲಾಸ ಎಂದು ನಂಬಿ ತನಗಿರುವ ಎರಡು ಹೆಣ್ಣು ಮಕ್ಕಳಿಗೆ ಯಾವುದೇ ಕಾಯಿಲೆ ಕಸಾಲೆ ಬರದೇ ಸುಖವಾಗಿದ್ದರೆ ಸಾಕೆನ್ನುವಷ್ಟು ಸರಳ .
__________________೦೩__________________
ಮಂಜಪ್ಪನವರು ಸರಿ ಸುಮಾರು ಅರವತ್ತರ ಆಸುಪಾಸಿನ ಅಪ್ಪಟ ರೈತ. ದೊಡ್ಡ ಕುಟುಂಬ , ಆರೇಳು ಅಣ್ಣ ತಮ್ಮಂದಿರು.  ಅಣ್ಣ ತಮ್ಮಂದಿರು ಕೆಲಸಕ್ಕೆಂದು ಪಟ್ಟಣ ಸೇರಿದರೆ ಇವರೊಬ್ಬರು ಮಾತ್ರ ಊರಿನಲ್ಲಿಯೇ ಉಳಿದು ವ್ಯವಸಾಯದ ಹಾದಿ ಹಿಡಿದವರು. ಭೂಮಿಯ ಬೆಲೆಯು ಇನ್ನೂ ಸಾವಿರ ಗಳಲ್ಲಿದಾಗಲೇ ಪೈಪೋಟಿಯ ಮೇಲೆ ಹತ್ತಾರು ಎಕರೆ  ಆಸ್ತಿ ಕೊಂಡು ಅಷ್ಟು ಜಮೀನಿನಲ್ಲಿ ನೆಲ ಗುದ್ದಿ ನೀರು ತೆಗೆದಿದ್ದ ಸಾಹಸಿ ರೈತ. ವರುಷಾಗಳಾದಂತೆ ಇವರಿಗೆ ಅತ್ಯಮೂಲ್ಯವಾದ ಕೃಷಿ ಇವರ ಅಣ್ಣ ತಮ್ಮಂದಿರಿಗೆ ಬೇಡವೇನಿಸಿದ್ದು  ನಗರದಲ್ಲಿ ಅವರಿಗಿದ್ದ ಉತ್ತಮ ಹಣಕಾಸಿನ ವ್ಯವಹಾರವೇ ಸರಿ. ಮಳೆ ಕಡಿಮೆಯಾದಂತೆ ತೋಟಗಳು ಒಣಗಿ ಮಂಜಪ್ಪನವರ ಆತ್ಮ ವಿಶ್ವಾಸವೇ  ಕುಗ್ಗಿ ಹೋದಂತಾಗಿ ಬಂದದ್ದು ಬರಲಿ ಎಂದು ಬೆಳಿಗ್ಗೆ ಎದ್ದವರೇ ಶಿವನಿಗೆ ನಮಸ್ಕಾರ ಮಾಡಿ ಹೊಲದ ಕಡೆ ಹೋಗುವುದು ಅಭ್ಯಾಸವಾಗಿ ಹೋಗಿದೆ. ನನ್ನೆರಡೂ ಹೆಣ್ಮಕ್ಕಳ ಮದುವೆಯಾದರೆ, ನನಗೆ ಬೇಕಾದದ್ದಾರು ಏನಿದೆ ಎಂಬ ತಾಷ್ಚಾರ ಮನೋಭಾವನೆ ಮೂಡಿರುವುದು ಸುಳ್ಳಲ್ಲ.  ಬೇರೆಯವರು ಇವರ ಮೆಚ್ಚಿ ಇವರ ಕೈ ಜೋಡಿಸಿ ಸಹಾಯ ಮಾಡಿದರೂ,  ಅಣ್ಣ ತಮ್ಮಂದಿರ ಸಹಾಯ ಸಿಗಲಿಲ್ಲವಲ್ಲ ಎಂದು ಚಿಂತಿಸಿದ್ದೆ ಹೆಚ್ಚೇನೂ. ಇಂದಿಗೂ ಮಂಜಪ್ಪನವರು ಪಟ್ಟಣದಿಂದ ವಸ್ತುಗಳ ಕೊಳ್ಳುವುದು ಅಷ್ಟಕ್ಕಷ್ಟೇ. ಬೇಕಾದದ್ದನ್ನು ತೋಟದಲ್ಲಿಯೇ ಬೆಳೆದು ರೂಡಿ. ಅಕ್ಕಿ, ರಾಗಿ, ಬೇಳೆ,ಕಾಯಿ ಹೀಗೆ ಹತ್ತಿಪ್ಪತ್ತು ತರಕಾರಿಗಳು ಸದಾ ತೋಟದಲ್ಲಿರುತ್ತವೆ.  ಕಡೆಗೆ ಅಡುಗೆ ಎಣ್ಣೆಯನ್ನು ಮನೆಯಲ್ಲೇ ಇರುವ ಕೋಲ್ಡ್ ಪ್ರೆಸ್ ನಿಂದ ತಯಾರಿಸಿಕೊಳ್ಳುವುದು ಅಭ್ಯಾಸವಾಗಿ ಹೋಗಿದೆ. ಹಣವಿದ್ದಾಗ ಹತ್ತಿರದ ಪಟ್ಟಣಕ್ಕೋಗಿ ಬೆಣ್ಣೆ ದೋಸೆ ತಿಂದದ್ದಕ್ಕಿಂತ  ಅಲ್ಲಿರುವ ತಹಶೀಲ್ದಾರರ , ಸೆಕ್ರೆಟರಿ ಗಳ ಜೇಬು ತುಂಬಿಸಿದ್ದೆ ಹೆಚ್ಚು.  ಅಂದಿನ ಆಸ್ತಿಯ ವಿವರಗಳು ಸರಿಯಿಲ್ಲದೆ ಅವುಗಳನ್ನ ಸರಿ ಮಾಡಿಸಲು ಪಟ್ಟಣಕ್ಕೆ ಅಲೆದಿದ್ದೆ ಜಾಸ್ತಿ. ಇವರ ಗೋಳು ನೋಡಿ ಪದ್ಮಕ್ಕ,  ಗಂಡು ಮಕ್ಕಳಿಲ್ಲದ ಮನೆಗೆ ಆಸ್ತಿಯ ಚಿಂತೆಯೇಕೆ ಎಂದಾಗ , ಕಾಳಿ ಮೈ ಮೇಲೆ ಬಂದವರಂತೆ, ಗಂಡು ಮಕ್ಕಳು ಯಾಕೆ ಬೇಕು , ಈ ನನ್ನೆರಡೂ ಹೆಣ್ಮಕ್ಕಳೇ ಸಾಕು ಎಂದು ಎದೆ ತಟ್ಟಿ ಹೇಳುವಾಗ ಅನಿಸಿದ್ದು ಹೆಣ್ಮಕ್ಕಳಿಗೆ ಅಪ್ಪನೇ ಮೊದಲ ಹೀರೋ ಎಂದು. ಇಬ್ಬರೂ ಮಕ್ಕಳು ಓದುತ್ತಿರುವ ಕಾರಣ ವಾರಾಂತ್ಯದಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಮನೆಗೆ ಬಂದಾಗ ಮತ್ತೆ ಜೀವ ಚಿಗುರೊಡೆದು , ಮಕ್ಕಳ ಮುಂದಿನ ಸುಖವ ನೋಡುವ ಬಯಕೆಯಿಂದ ಮತ್ತಿಪ್ಪತ್ತು ವರ್ಷ ಬದುಕುವ ಆಸೆಯಾಗಿ ತೋಟದಲ್ಲಿ ಎರಡು ಗಂಟೆ ಹೆಚ್ಚು ಕೆಲಸ ಮಾಡಿ ಹಳೆ ಮನೆಯ ಕೆಡವಿ ಹೊಸ ಮನೆಯ ಕಟ್ಟುವಾಸೆಯಾಗಿ ತಡ ರಾತ್ರಿಯವರೆಗೂ ಸವಿ ಮಾತನಾಡುತ್ತಾ ನೆಮ್ಮದಿಯ ನಿದ್ದೆ ಮಾಡುವ ಮಂಜಪ್ಪನ ವರ ನೆನೆದರೆ ಬರುವುದು ಕುಷ್ವಂತ್ ಸಿಂಗ್ ರವರು ಉಲ್ಲೇಖಿಸಿರುವ "ದ ಬುಲ್ ಬಿನಿತ್ ದ ಅರ್ತ್ " ಎಂಬ ಕತೆಯ ನಾಯಕ.
___________________೦೪_________________
ಜಗುಲಿಯ ಮೇಲೆ ಕೂತು ಯೋಚಿಸುತ್ತಿದ್ದ ಆನಂದನಿಗೆ ಕಂಡದ್ದು ಮಂಜಪ್ಪನವರ ತಾಯಿ. ನಿಂದು ಯಾವೂರು ಮಗ ಎಂದು ಪ್ರೀತಿಯಿಂದ ಅಜ್ಜಿ ಕೇಳಿದ್ದು,  ಅವನಿಗೆ ಅಮ್ಮನ ನೆನಪಾಯಿತು. ಅಜ್ಜಿಗೆ ವಯಸ್ಸು ಎಂಭತ್ತೈದಾದರು ಇಂದಿಗೂ ಅದೇ ಗಟ್ಟಿತನ. ಕೈ ಕಾಲು ಸರಿ ಇದ್ದರೆ ಯಾರ ಹಂಗಿಲ್ಲದೆ ಬದುಕಿ ತೋರಿಸುತ್ತೇನೆ ಎನ್ನುವ ಅಚಲ ಮನೋಭಾವ. ಮಂಜಪ್ಪನವರ ತಾಯಿ ಅಸಾಮಾನ್ಯ ಸ್ವಾಭಿಮಾನಿ. ನನ್ನ ಕೈ ಕಾಲು ನಿಲ್ಲುವವರೆಗೂ ನನ್ನ ಕೆಲಸ ಕಾರ್ಯ ನಾನೇ ಮಾಡುವೆ ಎಂದು ಮಗನಿಗೆ ತಾಕೀತು ಮಾಡಿ ಮನೆಯ ಸ್ವಲ್ಪ ದೂರದಲ್ಲೇ ತೋಟದ ಒಳಗೆ ಅವಳ ಗುಡಿಸಲು ಮಾಡಿಸಿಕೊಂಡು ಬದುಕು.  ಅವಳಿಗೊಂದು ನಾಟಿ ಆಕಳು ಮಾತನಾಡಲು. ಮಂಜಪ್ಪನವರು ಇದಕ್ಕೆ ಅಭ್ಯಂತರ ಮಾಡಿದವರಲ್ಲ,  ಬೇಜಾರಾದಾಗ ಅಮ್ಮನ ಗುಡಿಸಲಿಗೆ ಹೋಗಿ ಊಟ ಮಾಡಿ ಗುಡಿಸಲ ಮುಂದಿನ ಜಗುಲಿಯ ಮೇಲೆ ಮಲಗುವುದೂ ಉಂಟು. ಪದ್ಮಕ್ಕನು ಆಗಾಗ್ಗೆ ಹೋಗಿ ಅತ್ತೆಗೆ ಸಹಾಯ ಮಾಡುವುದು ಉಂಟು. ಆನಂದನು ಉತ್ತರಿಸುವ ಮೊದಲೇ, ಇಲ್ಲಿ ಬಾ ಎಂದು ಗುಡಿಸಲಿನ ಬಳಿ ಕರೆದೊಯ್ದ ಅಜ್ಜಿ ತೋರಿದ್ದು ಬಚ್ಚಲನ್ನ. ಸ್ನಾನ ಮಾಡದೆ ಇರುವುದನ್ನು ಗಮನಿಸಿದ ಅಜ್ಜಿ, ಒತ್ತಾಯ ಮಾಡಿ ಗುಡಿಸಿಲಿನ ಹಿಂದೆ ಇರುವ ಬಚ್ಚಲಿಗೆ ನೂಕಿ ಸುಟ್ಟು ಸುಡುವ ನೀರನ್ನು ಒಂದು ತಾಮ್ರದ ಗುಂಡಿಗೆ ಸುರಿದು ಸೀಗೆಕಾಯಿ ಬಟ್ಟಲ ನೂಕಿ, ಬೇಗ ಬಂದು ಬಿಡು, ರೊಟ್ಟಿ ಹಾಕಿರುವೆ ಎಂದು ಹೋದಾಗ ಅವನಿಗನ್ನಿಸಿದ್ದು ಹೋದ ಜನ್ಮದಲ್ಲೇನಾದರು  ನಾನು   ಇವರ  ಮಗನಾಗಿದ್ದೆನೆ ಎಂದು. ಮೈ ಒರೆಸಿ ಬಿಸಿಲಿಗೆ ಮುಖ ಮಾಡಿ ಕೂತವನಿಗೆ ಹಿಂದೆ ಇಂದ ಬಂದ ಅಜ್ಜಿ ಮತ್ತೊಂದು ವಸ್ತ್ರದಿಂದ ತಲೆ ಒರೆಸಿ ಹಣೆಗೆ ವಿಭೂತಿ ಬಳಿದು ಸಾಕ್ಷಾತ್ ಬಸವಣ್ಣನೇ ನೀನು ಎಂದು ಬೆರಳು ಮುರಿದು ದೃಷ್ಟಿ ತೆಗೆದಾಗ ಮೂಕ ವಿಸ್ಮಿತನಾಗಿ ಅವಳ ಮುಖವನ್ನೇ ನೋಡಿದ. ಅಷ್ಟರಲ್ಲಿ ಪದ್ಮಕ್ಕ ಮತ್ತು ಮಂಜಪ್ಪನವರ ಆಗಮನ ವಾಗಿದ್ದನ್ನ ಕಂಡು ಎಚ್ಚರಗೊಂಡ ಆನಂದ ಮುಗುಳ್ನಕ್ಕ.  ನಗುತ್ತಲೇ ಮಂಜಪ್ಪನವರು ಅವರಮ್ಮನ ಗತವೈಭವವನ್ನು  ನೆನೆಯುತ್ತಾ ಚಾಪೆ ಹಾಸಿ ಕುಳಿತರು. ಅವರೇ ಬೆಳೆದಿದ್ದ ರಾಗಿಯಿಂದ ಮಾಡಿದ ರಾಗಿ ರೊಟ್ಟಿ  ಮತ್ತು ಆಗ ತಾನೇ ಕಿತ್ತು ಎಣ್ಣೆಗಾಯಿ ಮಾಡಿದ್ದ ಬದನೆಕಾಯಿ ಪಲ್ಯವ ನೋಡಿದ ತಕ್ಷಣವೇ ಅವನಿಗೆ ಬಾಯಲ್ಲಿ ನೀರೂರಿತು. ಅದರ ಜೊತೆ ಪದ್ಮಕ್ಕ ಬಟ್ಟಲಲ್ಲಿ ತಂದಿದ್ದ ಗಟ್ಟಿ ಎಮ್ಮೆ ಮೊಸರು ಬಡಿಸಿ  ಅದಕ್ಕೆ ಶೇಂಗಾ ಚಟ್ನಿ ಪುಡಿ ಹಾಕಿ ಕೊಟ್ಟಾಗ ಆದದ್ದು ಅಮೃತ. ಒಂದು ಕ್ಷಣಕ್ಕೆ ಅವನು ಸ್ವರ್ಗ ನೋಡಿದ್ದಂತು ಸತ್ಯ. ಹೊಟ್ಟೆ ತುಂಬಾ ತಿಂದು ಅಲ್ಲಿನ ಜಗುಲಿಯ ಮೇಲೆ ಮಲಗಿದ ಅವನಿಗೆ ಆದದ್ದು ಜೀವನದ ಅತ್ಯುನ್ನತ ಕ್ಷಣಗಳೊಲ್ಲೊಂದಾದ ಅನುಭವ. ಮಗುವಿನ ಮನಸ್ಸಿನ ಪದ್ಮಕ್ಕ, ಸಾಹಸಿ ಮಂಜಪ್ಪನವರು, ಸ್ವಾಭಿಮಾನಿ ಮಹಾತಾಯಿ ನಿಂಗಜ್ಜಿಯ ನೆನಪುಗಳನ್ನ ಹೊತ್ತು ವಾಪಸ್ ಹೊರಟಾಗ ಬಯಸಿದ್ದು ಅವರ ಜೀವನದ ಕಾಲು ಭಾಗವನ್ನಾದರೂ ಜೀವಿಸೋಣವೆಂದು. ಬುದ್ಧನಾಗುವ ಯೋಚನೆಯಲ್ಲಿ ನೂರಾರು ಮೈಲಿ ಬಂದು, ಮೋಕ್ಷದ ಹುಡುಕಾಟದಲ್ಲಿ ವಿಂಡ್ ಮಿಲ್ ಅಳವಡಿಸಿದ್ದ ಬೆಟ್ಟದ ಬುಡಕ್ಕೆ ಬಂದಿದ್ದ. ಎಲ್ಲಿಂದಲೋ ಬಂದ ಕಾಡು ಹಂದಿಯು ಇವನ ದೇವಾರಾಗಿ ಹೋಗಿತ್ತು. ಜೀವನದಲ್ಲಿ ಎಲ್ಲರಿಗೂ ಅಂತಹ ಒಂದು ರಾತ್ರಿಯ ಅನುಭವ ಮತ್ತೆ ಬೆಳಗಿನ ಬದುಕು ಸಿಗಲಿ ಎಂದು ಆಶಿಸಿದ.  ಬುದ್ಧನಾಗುವ ಯೋಚನೆ ಬಿಟ್ಟು ಜೀವನವನ್ನ ಸವಿಯಲು ಸಾಧ್ಯವಾದರೆ ಮತ್ತೊಮ್ಮೆ ಬದುಕಲು ಬೈಕ್ ಸ್ಟಾರ್ಟ್ ಮಾಡಿದ.
___________________೦೦_________________

Tuesday, 12 June 2018

ಇದೇನು ರಾಜಕಾರಣವೋ ಅಥವಾ ರಾಕ್ಷಸಕಾರಣವೋ !!

ಈಗಿನ ಕಾಲದ ಶಿಕ್ಷಣವೇ ಒಂದು ದೊಡ್ಡ ವ್ಯಾಪಾರ ಮಾಡಿ ಕೊಂಡಿರೋ ಕಾಲೇಜುಗಳಲ್ಲಿ ಓದಿ ಮುಂದೆ ಕಷ್ಟ ಪಟ್ಟು ಕೆಲ್ಸ ಮಾಡಿ ಯಾವನೋ ಹುಟ್ಟಾಕಿರೋ ಕಂಪನೀಲಿ ಕೆಲ್ಸ ಮಾಡಿ ತಿಂಗಳ ಕೊನೆಯಲ್ಲಿ ಆ ಓನರ್ ಕೊಡೋ ಸಂಬಳ ಎಣಿಸಿ ಅದ್ರಲ್ಲಿ 20 % ಟ್ಯಾಕ್ಸ್ ಸರ್ಕಾರಕ್ಕೆ ಕಟ್ಟಿ ಮಿಕ್ಕಿದ್ರಲ್ಲಿ ಏನಾದ್ರು ತಗೊಳೋಣ ಅಂತ ಹೋದ್ರೆ ಅದಕ್ಕೂ 10 % ಟ್ಯಾಕ್ಸ್ ಮತ್ತೆ ಸರ್ಕಾರಕ್ಕೆ ಕಟ್ಟಿ , ಬೇಕಾಗಿರೋದನ್ನ ತಗೊಳೋಕೋ ಆಗ್ದೇ, ಇರೋದ್ರಲ್ಲೇ ಅಡ್ಜಸ್ಟ್ ಮಾಡ್ಕೊಂಡು ಆಮೇಲೆ ಆರೋಗ್ಯ ಕೆಟ್ಟೋದ್ರೆ ಸಾಲ ಮಾಡಿನಾದ್ರು ಹಣ ಕಟ್ಟಿ ಆಸ್ಪತ್ರೆ ಮಾಲೀಕರನ್ನ ಉದ್ದಾರ ಮಾಡಿ , ಬದುಕಿದೆಯಾ ಬಡ ಜೀವವೇ ಅಂತ ಸಮಾಧಾನ ಪಟ್ಕೊಳ್ತಾ , ಅವ್ನು ಏನ್ ಮಾಡಿಲ್ಲ ಅಂದ್ರು ಪರ್ವಾಗಿಲ್ಲ ಆದ್ರೆ ನಮ್ ಜಾತಿಯವನೆ ಗೆಲ್ಬೇಕು ಅಂತ ಅಂದ್ಕೊಂಡು ವೋಟ್ ಮಾಡ್ತಿರಲ್ಲ ಅದಕ್ಕೆ  ನಮ್ಮ ರಾಜಕಾರಣಿಗಳು ಜನರನ್ನ ಲೂಟಿ ಮಾಡೋಕೆ ಪ್ರಜಾಪ್ರಭ್ಭುತ್ವ ಅನ್ನೋ ಆಯುಧನ ರೈತನ ನೇಗಿಲ ತರ ಉಪಯೋಗಿಸದೆ ರೌಡಿಗಳ ಲಾಂಗ್ ತರ ಉಪಯೋಗಿಸ್ತಾ ಜನರ ನೆತ್ತರ ಹರಿಸುತ್ತಿರೋದು.

ಇವತ್ತು ಓದಿಲ್ದೆ ಇರೋವರಿಗಿಂತ ಓದಿ ಬುದ್ದಿ ಬೆಳೆಸ್ಕೊಂಡಿರೋರು ಫೇಸ್ಬುಕ್ ವಾಟ್ಸಾಪ್ ಉಪಯೋಗ್ಸೋಕೆ ಬರುತ್ತೆ ಅಂತ ಜಾತಿ ರಾಜಕಾರಣವನ್ನ ಹರಡುತ್ತಿರುವುದು ಎಲ್ರಿಗೂ ಗೊತ್ತಾಗ್ತಾನೆ ಇದೆ ಅಂದ್ರೂ ಯಾವುದೇ ಭಯ ಇಲ್ದೆ ಈ ಕೆಲಸ ಮುಂದುವರೆಸುತ್ತ ಮುಂದಿನ ಭವಿಷ್ಯಕ್ಕೆ ಏನು ಮಾರ್ಗದರ್ಶಿಯನ್ನ ತಯಾರಿಸ್ತಾ ಇದಾರೆ ಅಂತ ನೋಡಿದ್ರೆ ಭಯ ಆಗುತ್ತೆ. ಹಳ್ಳಿ ಕಡೆ ಇನ್ನು ಜಾತಿ ಅನ್ನೋದೇ ಅತಿ ಹೆಚ್ಚಿನ ಮಾನದಂಡ ಆಗಿರೋದು ಯಾರು ಅಲ್ಲೆಗೆಳೆಯುವಂತಿಲ್ಲ, ಯಾರ್ಯಾರೋ ಬೇಡ ಸ್ವಂತ ನಮ್ಮನೆಯಲ್ಲೇ ನಾ ಇನ್ನು ಅದನ್ನ ತೊಡೆದುಹಾಕೋಕೆ ಶತ ಪ್ರಯತ್ನ ಮಾಡ್ತಾ ಇದೀನಿ, ಹಾಗೆ ಎಲ್ರು ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಿದಾಗ ತಮ್ಮ ಮನೆಗಳಲ್ಲಿ ಜಾತಿ ಅನ್ನೋ ಮಾನದಂಡವನ್ನ ಹೊಡೆದುಹಾಕಲು ಯತ್ನಿಸಲೇಬೇಕು. ಜಾತಿ ರಾಜಕಾರಣ ಈ ಸಲ ನಡೆದ ಚುನಾವಣೆಯಲ್ಲಿ ಅನಂತ ರೀತಿಯಲ್ಲಿ ಪ್ರಭಾವ ಬೀರಿದ್ದನ್ನ ಕಣ್ಣಾರೆ ಕಂಡು ಇನ್ನು ಅದನ್ನೇ ಮುಂದುವರೆಸಿದರೆ ನಾವು ಮೂರ್ಖರಿಂದ ಶತ ಮೂರ್ಖರಾಗುವುದರಲ್ಲಿ ಯಾವದೇ ಸಂದೇಹವಿಲ್ಲ. ಗೌಡ್ರು ಎಲ್ಲ ಕುಮಾರ ಸ್ವಾಮಿಗೆ ವೋಟ್ ಹಾಕಿ, ಲಿಂಗಾಯಿತರೆಲ್ಲ ಯಡಿಯೂರಪ್ಪನವರಿಗೆ ವೋಟ್ ಹಾಕಿ, ಅಹಿಂದ ದವರೆಲ್ಲ ಕಾಂಗ್ರೆಸ್ ಗೆ ವೋಟ್ ಹಾಕಿ ಅಂತ ರಾಜಕಾರಣಿಗಳೇ ಬೀಸಿದ ಗಾಳದಲ್ಲಿ ಬಲಿಯಾಗಿ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯಕ್ಕೆ ನಾವೇ ಹೊಣೆ.

ಇನ್ನು ಜಾತಿ ವಿಷಯ ಬಿಡೋಣ, ನೂರರಲ್ಲಿ ಮೂರು ರಾಜಕಾರಣಿ ಹೊರತು ಪಡಿಸಿ ಮಿಕ್ಕವರಲ್ಲಿ ಒಬ್ಬನನ್ನು ಜನಸೇವೆ ಮಾಡಲು ಬಂದಿರುವ ರಾಜಕಾರಣಿಯ ತೋರಿಸಿ ನೋಡೋಣ. ತೊಂಬತ್ತೇಳು ಜನ ರಾಜಕಾರಣಿಗಳು ಅಧಿಕಾರ ಹಣದ ದಾಹದಿಂದ ರಾಜಕಾರಣಕ್ಕೆ ಬಂದ್ರೆ ಮಿಕ್ಕ ಮೂವರು ಸೇರಿ ಸಮಾಜ ಉದ್ದಾರ ಮಾಡಲು ಸಾಧ್ಯವೇ , ಒಮ್ಮೆ ಯೋಚಿಸಿ. ನಮ್ಮ ಕಾಲಕ್ಕೆ ಬಿಡಿ , ನಮ್ಮ ಹಣೆಬರಹವೆ ಇಷ್ಟು. ರಾಜಕಾರಣಿಗಳು ದೂರ ದೃಷ್ಟಿಯಿಂದ(ಕೆಟ್ಟ ದೃಷ್ಟಿ) ಹೆಣೆದ ಬಲೆಯಲ್ಲಿ ಸಿಕ್ಕಿ ನರಳುವುದು ಬಹುತೇಕ ಖಚಿತ, ಕೊನೆ ಪಕ್ಷ ನಮ್ಮ ಮುಂದಿನ ಪೀಳಿಗೆಗಾದರು ಸತ್ಯ ರಾಜಕಾರಣ ಮಾಡುವ ವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದಲ್ಲವೇ. ರಾಜಕಾರಣಿಗಳು ಪದೇ ಪದೇ ಎಸೆಯುತ್ತಿರುವ ಗಾಳಕ್ಕೆ ಇನ್ನೆಷ್ಟು ವರ್ಷ ಬಲಿಯಾಗುವುದು. ಸಾಲ ಮನ್ನಾ ವಿಷಯಕ್ಕೆ ಬರೋಣ. ಮೊನ್ನೆ ಒಂದು ಅಂಕಣ ಓದಿದೆ ಗಣಿತ ವಿವರಗಳು ಹೀಗೆವೆ. ಈಗ ಸದ್ಯಕ್ಕೆ ಸಾಲ ಮನ್ನಾ ಮಾಡಲು 55 ಸಾವಿರ ಕೋಟಿ ಹಣ. ಹಣಕಾಸಿನ ಲೆಕ್ಕಾಚಾರದಲ್ಲೇ ಸರ್ಕಾರದ ಬೊಕ್ಕಸದಲ್ಲಿ ಅಷ್ಟು ಹಣವೇ ಉಳಿದಿರುವುದಿಲ್ಲ ಇನ್ನು ಮಿಕ್ಕ ಹಣವನ್ನ ಮತ್ತೆ ಜನ ಸಾಮಾನ್ಯರ ಮೇಲೆ ತೆರಿಗೆಗಳನ್ನ ಹಾಕಿ ಹಣ ವಸೂಲಿ ಮಾಡಿ ಸಾಲ ಮನ್ನಾ ಮಾಡಬಹುದೇ ಹೊರತು ಮತ್ಯಾವ ದಾರಿಯಿದ್ದಂತೆ ಕಾಣುವುದಿಲ್ಲ. ಆಕಾಸ್ಮಾತ್ ಸಲ ಮನ್ನಾ ಮಾಡಿದರೆ ತೆರಿಗೆ ರೂಪದಲ್ಲಿ ತರ ತರವಾಗಿ ಸರ್ಕಾರಕ್ಕೆ ಹಣ ನೀಡಲು ಸಿದ್ಧರಾಗಿ. ( ಕಾಮೆಂಟ್ ನಲ್ಲಿ ಅಂಕಣ ಲಗತ್ತಿಸಿದ್ದೇನೆ, ಒಮ್ಮೆ ಓದಿ) . ಇದೆಲ್ಲ ಇದ್ದ ಮೇಲೆ ಕುಮಾರಸ್ವಾಮಿ ಯವರು ಯಾವ ಆಧಾರದ ಮೇಲೆ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದ್ದರು ?? ಬರೀ ಆಮಿಷವೊಡ್ಡಿ ಯಾಕೆ ರೈತರನ್ನ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಯೋಚಿಸಿ.ಸಾಲ ಮನ್ನಾ ಮಾಡಿದರು ಅದರಿಂದ ನಷ್ಟವಿದೆ ಎಂಬುದು ಅರಿವಾದರೆ ಮಾತ್ರ ಇದನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ. ಯಡಿಯೂರಪ್ಪನವರು ಒಂದೇ ದಿನ ಮುಖ್ಯ ಮಂತ್ರಿಯಾಗಿದ್ದಾಗ ಘೋಷಿಸಿದ್ದು ನೋಡಿದರೆ ಕುಮಾರಸ್ವಾಮಿಯ ಮೇಲೆ ಒತ್ತಡ ಹೇರುವದಷ್ಟೇ ಉದ್ದೇಶವಾಗಿತ್ತು ಎಂಬುದು ಎದ್ದು ಕಾಣುತ್ತದೆ.

ನಿಜವಾದ ರೈತರ ಸಮಸ್ಯೆ ಬಗೆಹರಿಸವುದು ಯಾರಿಗೂ ಬೇಡವಾದ ವಿಷಯ. ನಿಜವಾದ ಸಮಸ್ಯೆ ಬಗೆಹರಿಸುವವರಾಗಿದ್ದರೆ ಮಂಡಿಯಲ್ಲಿ ಬೆಳಿಗ್ಗೆ ಇಂದ ಸಂಜೆವರೆಗೂ ನಿಂತು ಕಮಿಷನ್ ಏಜೆನ್ಟ್ ಗಳ ಬಾಯಲ್ಲಿ ಮಾತು ಕೇಳಿ ಅವನು ಕೊಟ್ಟ ಪುಡಿ ಹಣವ ಮನೆಗೂ ತೆಗೆದುಕೊಂಡು ಹೋಗಲಾಗದೆ ಸರ್ಕಾರಗಳೇ MRP ದರದಲ್ಲಿ ಸ್ಥಾಪನೆ ಮಾಡಿರುವ ಮಧ್ಯಪಾನ ಅಂಗಡಿಯಲ್ಲಿ ಎರಡು 90 ಹಾಕಿ ಹೆಂಡತಿ ಮಕ್ಕಳನ್ನ ಹಾಳುಗೆಡುವುತ್ತಿರುವುದನ್ನ ತಪ್ಪಿಸಲು ಒಂದೈದು ಸಾವಿರ ಕೋಟಿ ಕೊಟ್ಟು  ವ್ಯವಸ್ಥಿತವಾದ e ಮಂಡಿಯನ್ನ ಸ್ಥಾಪಿಸಿದ್ದರೆ ಸಾಕಾಗಿತ್ತು. ಮತ್ತೆ ಕೆಮಿಕಲ್ ಗೊಬ್ಬರಗಳ ಬಳಸುವುದನ್ನ ನಿಲ್ಲಿಸಿ ಸಾವಯವ ಕೃಷಿಗೆ ಉತ್ತೇಜನ ನೀಡಿ ಸಾವಯವ ಮಾರುಕಟ್ಟೆಯನ್ನ ಹುಟ್ಟಿಹಾಕಬಹುದಿತ್ತು. ಮತ್ತೊಂದೈದು ಸಾವಿರ ಕೋಟಿ ಖರ್ಚು ಮಾಡಿ ಅಂತರ್ ರಾಷ್ಟ್ರಿಯ ಮಾರುಕಟ್ಟೆ ಲಿಂಕೇಜ್ ಮಾಡಿಕೊಡಬಹುದಿತ್ತು, ಫುಡ್ ಪ್ರೊಸೆಸಿಂಗ್ ಅನ್ನು ಉತ್ತೇಜನಗೊಳಿಸಿ ಹೆಚ್ಚುವರಿ ಉತ್ಪಾದನೆಯನ್ನ ಫೈನಲ್ ಪ್ರಾಡಕ್ಟ್ ಮಾಡಿಸಿ ರಫ್ತ್ತು ಮಾಡುವಲ್ಲಿ ಸಹಾಕಾರಿಯಾಗಬಹುದಿತ್ತು .  ಇವೆಲ್ಲ ಮಾಡುವುದಕ್ಕೆ ಸಮಯ ಬೇಕು ಜೊತೆಗೆ ಮನಸ್ಸು ಬೇಕು ಆದರೆ ನಮ್ಮ ರಾಜಕಾರಣಿಗಳಿಗೆ ಸಮಯವೂ ಮನಸ್ಸೂ ಇದ್ದಂತೆ ಕಾಣುವುದಿಲ್ಲ. ಇಲ್ಲಿ ಯಾರೂ ನಮ್ಮವರಿಲ್ಲ ಎಂದು ಮತ್ತೊಮ್ಮೆ ಹೇಳುವೆ.  ರೈತನೇ ದೇಶದ ಬೆನ್ನೆಲುಬು ಎಂದು ಖಾಲಿ ಘೋಷಣೆ ಮಾಡುತ್ತಾ ಆಮಿಷಗಳನ್ನೊಡ್ಡಿ ಅವನ ಬೆನ್ನೆಲುಬನ್ನೇ ಮುರಿದಿರುವ ರಾಜಕಾರಣಿಗಳ ಬಗ್ಗೆ ಒಮ್ಮೆ ಯೋಚಿಸಿ.

ಕೃಷಿ ಹೋಗಲಿ, ಶಿಕ್ಷಣ, ಮಹಿಳಾ ಅಭಿವೃದ್ಧಿ , ಪರಿಸರ, ಸ್ವಚ್ಛತೆ, ಕುಡಿಯುವ ನೀರು, ಕಾಡಿನ ರಕ್ಷಣೆ ಜೊತೆ ನೂರಾರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕರ್ನಾಟಕದಲ್ಲಿ  ಪ್ರಾಮಾಣಿಕ ಪ್ರಯತ್ನ ಮಾಡಿದ ಒಂದು ಸರ್ಕಾರಗಳು ಇಲ್ಲ. ಯೋಜನೆಗಳು ಬರುತ್ತಿವೆ ಹಾಗೆಯೇ ಸರ್ಕಾರದ ಜೊತೆ ಮುಳುಗುತ್ತಿವೆ. ನನ್ನ ಹತ್ತಿರದ ವಿಷಯವನ್ನೇ ಹೇಳುವೆ. ನನ್ನ ತಾಯಿ ಅಂಗನವಾಡಿ ಕಾರ್ಯಕರ್ತೆ. ಚೂರೋ ಪಾರೋ ಅವಳಿಗೆ ನೀಡಿದ ಗೌರವಧನ ನಮ್ಮನ್ನ ಸಾಕಿದೆ ನಿಜ ಆದರೆ ಅವಳ ಗೌರವಧನ ಇಂದಿಗೂ ಸಂಬಳವಾಗಿ ಪರಿವರ್ತನೆಯಾಗಲೇ ಇಲ್ಲ. ಅವಳ ಕೆಲಸ ನೋಡಿದರೆ ಬೆಟ್ಟದಷ್ಟು ಆದರೆ ಅವರಿಗೆ ಇಂದಿಗೂ ನ್ಯಾಯ ದೊರೆತೆ ಇಲ್ಲ. ಇವರಿಗೆ ಸರ್ಕಾರದ ಅಧಿಕಾರಿಗಳೆಂಬ ಮಾನ್ಯತೆಯಿಲ್ಲ. ಸಂಬಳ ಬರುವುದು ಇವತ್ತಿಗೂ ಚೂರು ಪಾರೇ.  ಇದನ್ನ ಉಪಯೋಗಿಸಿ ಈ ಕಮ್ಯುನಿಸ್ಟ್ ಪಕ್ಷಗಳು ಲೇಬರ್ ಯೂನಿಯನ್ ಹೆಸರಿನಲ್ಲಿ ಪ್ರತಿ ವರ್ಷ ಅವರಿಂದ ಯೂನಿಯನ್  ಸದಸ್ಯತ್ವ ಪಡೆದು ಎರಡು ಮೂರು ವರ್ಷಕ್ಕೊಮ್ಮೆ ಲಕ್ಷಾಂತರ ಹೆಂಗಳೆಯರನ್ನ ಬೀದಿಗಳಿದು ಪ್ರತಿಭಟನೆ ಮಾಡಿಸಿ ಇನ್ನೇನು ನ್ಯಾಯ ದೊರಕಿತು ಎನ್ನುವಷ್ಟರಲ್ಲಿ ಸರ್ಕಾರಗಳ ಜೊತೆ ಒಪ್ಪಂದಗಳ ನಡೆಸಿ ಪ್ರತಿಭಟನೆಯನ್ನ ಅರ್ಧಕ್ಕೆ ನಿಲ್ಲಿಸಿ ಬರೀ ಎರಡು ಸಾವಿರದ ಆಸೆಯೊಂದಿಗೆ ವಾಪಸ್ ಕಳಿಸಿಬಿಡುವುದುಂಟು. ಇಂದಿಗೂ ನೀವು ಅಥವಾ ನಿಮ್ಮ ಮಕ್ಕಳು ಪೋಲಿಯೋ ಮುಕ್ತರಾಗಿದ್ದೀರಿ ಅಥವಾ ಮತ್ತೊಂದು ಕಾಯಿಲೆಗಳು ಬಂದಿಲ್ಲವೆಂದರೆ ಅಂಗನವಾಡಿಗಳೇ ಕಾರಣ ನೆನಪಿರಲಿ. ಮತ್ತೆ ಮತ್ತೆ ಅವರು ಬೀದಿಗೆ ಬರುವುದನ್ನು ನೀವು ಮುಂದೆಯೂ ನೋಡುವಿರಿ. ಮತ್ತೊಂದು ಸಲ ಅವರು ಬೀದಿಗೆ ಬಂದರೆ ದಯಮಾಡಿ ಅವರ ಜೊತೆ ಸೇರಿ ಅವರಿಗೆ ಶಾಶ್ವತ ನ್ಯಾಯ ಸಿಗುವಂತೆ ಮಾಡುವುದು ನನ್ನ ತಾಯಿಯಂತೆ ಸಾವಿರಾರು ತಾಯಂದಿರ ಋಣ ತೀರಿಸಿದಂತೆ.

ಕ್ರೀಡೆಯನ್ನ ಮರೆತೇಬಿಡಿ, ಈ ಹರ್ಯಾಣ ಸರ್ಕಾರ ಇತ್ತೀಚೆಗೆ ಹೊರಡಿಸಿದ ನೋಟಿಸ್ ನೋಡಿ ನನಗೆ ಆಶ್ಚರ್ಯವೇ ತಂದಿತ್ತು. ಕ್ರೀಡಾಪಟುಗಳು ಅವರಿಗೆ ಬಂದ ಆದಾಯದಲ್ಲಿ 30 % ಹಣವನ್ನ  ವಾಪಸ್ ಸರ್ಕಾರಕ್ಕೆ ಪಾವತಿಸಬೇಕೆಂದು ದಿಕ್ತತ್ ನೀಡಿದ್ದು ಆಘಾತಕಾರಿ ವಿಷಯವೇ ಸರಿ , (ವ್ಯಾಪಕವಾಗಿ ದಿಕ್ಕರವಾಗಿದ್ದನ್ನ ಕಂಡು ಈ ನಿರ್ಣಯ ವಾಪಸ್ ಪಡೆದಿದೆ ಎಂದು ಓದಿದೆ, ಇನ್ನು ಸರಿಯಾಗಿ ತಿಳಿದಿಲ್ಲ) ಇಂತಹ ಘೋರ ನಿರ್ಣಯಗಳನ್ನೂ ನೋಡಿ  ಒಲಿಂಪಿಕ್ ಪದಕವನ್ನ ಕೇಳುವುದು ಕ್ರೀಡಾಪಟುಗಳಿಗೆ ಅವಮಾನ ಮಾಡಿದಂತೆಯೇ ಸರಿ. ಇಂತ ಕೆಲಸಗಳ ಮಾಡುವವರನ್ನ ಇಟ್ಟುಕೊಂಡು ಒಬ್ಬ  ನಾಯಕ ತಾನೇ ಏನು ಮಾಡಲು ಸಾಧ್ಯ ಎನ್ನುವುದ ಯೋಚಿಸಿ. ಇಷ್ಟು ದೊಡ್ಡ ದೇಶ ನಡೆಸಲು ಒಬ್ಬ ನಾಯಕನ ಜೊತೆ ನಾವು ಆರಿಸಿ ಕಳಿಸುವ ಪ್ರತಿಯೊಂದು ವ್ಯಕ್ತಿಯು ಕೆಲಸ ಮಾಡಿದಾಗ ಮಾತ್ರ ಸುವರ್ಣ ಭಾರತವಾಗಲು ಸಾಧ್ಯ. ಚುನಾವಣೆ ಗೆಲ್ಲಲೇ ಬೇಕು ಎಂಬ ಹಠದಲ್ಲಿ ಮತ್ತದೇ ಮುಖಗಳನ್ನ ತಂದು ನಿಲ್ಲಿಸಿ ವೋಟ್ ಹಾಕಿ  ಎಂದು  ಕೇಳಿದರೆ ಹಾಕುವುದಕ್ಕೆ ನಮಗೂ ಅಸಹ್ಯವಾಗುವದರಲ್ಲಿ ಸಂದೇಹವಿಲ್ಲ. ಆದರೆ ತಪ್ಪು ಅವರ ಜೊತೆ ನಮ್ಮದು ಇದೆ ಎಂದು ತಿಳಿದಾಗ ಮಾತ್ರ ಈ ಕ್ಲಿಷ್ಟ ಸಮಸ್ಯೆಗೆ ಪರಿಹಾರ ಸಾಧ್ಯ. ಅಪ್ಪ ಹಾಕಿದ ಆಲದ ಮರದಂತೆ ಅದೇ ಹಳೆಯ ರಾಜಕಾರಣಿಗಳ ಮುಖ ನೋಡಿ ಜಾತಿಯನ್ನ ಮಾನದಂಡ ಹಿಡಿದು ಮತ  ಹಾಕದೆ ಒಳ್ಳೆಯ ರಾಜಕಾರಣಿಗಳನ್ನ ಆರಿಸಿ ತಂದು ನಿಲ್ಲಿಸುವಂತೆ ಪಕ್ಷದ ನಾಯಕರಿಗೆ ತಾಕೀತು  ಮಾಡುವುದು ಜನರ ಕೈಲಿದೆ. ಇದನ್ನ ಹಳ್ಳಿಗಳಲ್ಲಿ ಮನದಟ್ಟು ಮಾಡಬೇಕಾಗಿರುವುದು ಇದನ್ನ ಓದುತ್ತಿರುವ ವಿದ್ಯಾವಂತರಾದ ನಿಮ್ಮಂತವರಿಂದ ಮಾತ್ರ ಸಾಧ್ಯ.

ಈಗೆಲ್ಲಾ ಸಾಮಾಜಿಕ ತಾಣದಲ್ಲಿ ಸುಲಭವಾಗಿ ಜನರ ಮಾತನ್ನು ರಾಜಕೀಯ ಪಕ್ಷ ಗಳಿಗೆ ತಿಳಿಸಬಹುದು. ನಿಮ್ಮ ಅಭ್ಯರ್ಥಿ ಹೇಗಿರಬೇಕೆಂದು ನೀವೇ ಅನುಸರಿಸುವ ಪಕ್ಷಗಳಿಗೆ ತಾಕೀತು ಮಾಡಬೇಕಾದ ಅನಿವಾರ್ಯವೂ ಇದೆ. ಬಿಜೆಪಿ ಯಾಗಲಿ,  ಕಾಂಗ್ರೆಸ್ ಆಗಲಿ , ಮತ್ತೊಂದಾಗಲಿ ನಿಮ್ಮ ನಿಮ್ಮ ಅಭ್ಯರ್ಥಿಗಳು ಹೀಗಿರಬೇಕೆಂದು ಖಡಾ ಖಂಡಿತವಾಗಿ ಮೊದಲೇ ನಿಮ್ಮ ದನಿಯನ್ನು ತಿಳಿಸಲು ಒಂದು ಮಾಧ್ಯಮದ ಅವಶ್ಯಕತೆಯಿದೆ. ಅಂದರೆ ಜನ ಸಾಮಾನ್ಯರ ದನಿಯಾಗಿ ಈ ಅಭಿಪ್ರಾಯಗಳನ್ನ ಸಂಗ್ರಹಿಸಲು ಮತ್ತು ಪಾರದರ್ಶಕತೆಯಿಂದ ಅಭಿಪ್ರಾಯವನ್ನ ಬಿತ್ತರಿಸಿ ಜನರೇ ಆರಿಸಿದ ಅಭ್ಯರ್ಥಿಯನ್ನ ಪಕ್ಷಗಳು ನೇಮಿಸುವ ಒಂದು ವ್ಯವಸ್ಥೆ ಇಲ್ಲಿ ಬೇಕಾಗಿದೆ. ಅಲ್ಲೆಲ್ಲೋ ದಿಲ್ಲಿಯಲ್ಲಿ ಕೂತ ರಾಹುಲ್ ಗಾಂಧಿಗಾಗಲಿ, ಅಮಿತ್ ಶಾಗಾಗಲಿ, ಮಂಡ್ಯದಲ್ಲಿ ಕೂತ ಗೌಡರಿಗಾಗಲಿ ನಮ್ಮ ಮಧುಗಿರಿಯಲ್ಲಿ ಯಾರು ಶಾಸಕ ಅಥವಾ ಸಂಸತ್ ಸದಸ್ಯ  ಅಭ್ಯರ್ಥಿ ಎಂದು ಹೇಗೆ ನಿರ್ಣಯಿಸುತ್ತಾರೆ ಹೇಳಿ. ಉದಾಹರಣೆಗೆ ಮಧುಗಿರಿಯ ಜನರ ಮುಂದೆ ಪಕ್ಷಗಳೇ ಮುಂದೆ ಬಂದು ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ಅವರನ್ನ ಅಭ್ಯರ್ಥಿಯನ್ನಾಗಿ ನೇಮಿಸಬೇಕಾಗಿರುವುದು ಅತ್ಯವಶ್ಯಕ. ಹೀಗೆ ಆಯಾ ಶಾಸಕ ಮತ್ತು ಸಂಸತ್ ಕ್ಷೇತ್ರಗಳಲ್ಲಿ ಜನರೇ ಆರಿಸಿದ ಅಭ್ಯರ್ಥಿಯನ್ನ ನೇಮಿಸಿ ನಂತರ ಅವರು ಚುನಾಯಿತರಾಗಿ ಬಂದರೆ ಸರಿಯಾಗಬಹುದೇನೋ. ಇದನ್ನೆಲ್ಲ ಸರ್ಕಾರಗಳು ಮಾಡುವುದಲ್ಲ, ಪಕ್ಷಗಳು ನಿಜವಾಗಿಯೂ ಜನಸೇವೆ ಮಾಡುವ ಆಸೆಯಿದ್ದರೆ ಇಂತಹ ಒಂದು ಸರ್ವೆಗಳನ್ನ ಮಾಡುವುದು ಅವಶ್ಯಕ ಆದರೆ ಜನಗಳು ಅದಕ್ಕೆ ಸ್ಪಂದಿಸಬೇಕಾದ ಅವಶ್ಯಕತೆಯಿದೆ ಮತ್ತೆ ಆಮಿಷಕ್ಕೆ ಒಳಗಾಗಿ,ಜಾತಿ ಎಂಬ ಕೀಳು ವ್ಯವಸ್ಥೆಗೆ ಬಲಿಯಾಗಿ ಮೂರ್ಖತನ ಪ್ರದರ್ಶಿಸಿದರೆ ಇಂತಹ ನೂರು ವ್ಯವಸ್ಥೆಗಳು ಬಂದರೂ ಏನು ಬದಲಾವಣೆಗಳಾಗುವುದಿಲ್ಲ.  ಇಂತಹ ಒಂದು ಮಾಧ್ಯಮ ಕಟ್ಟಲು ಶಕ್ತಿಯಿರುವ ನಾಲ್ಕಾರು
ಆಸಕ್ತರು ಮುಂದೆ ಬರಬೇಕು. ನಾನು ಪ್ರಯತ್ನಿಸುವೆ. 

ರಾಜಕೀಯ ಪಕ್ಷಗಳೇ ನಮ್ಮ ಮುಂದೆ ನಿಂತು ನಮ್ಮ ಮಾತನ್ನು ಆಲಿಸುವಂತೆ ಮಾಡಿಕೊಳ್ಳುವ ಒಂದು ಹೊಸ ವಿಧಾನ ಹುಡುಕುವ ಪ್ರಯತ್ನ ಮಾಡಬೇಕಾಗಿರುವುದು ಅನಿವಾರ್ಯ ಮತ್ತು ಅತ್ಯವಶ್ಯಕ. ಇರುವ ಪಕ್ಷಗಳಿರಲಿ, ಇರುವ ನಾಯಕರುಗಳಿರಲಿ ಆದರೆ ಜನರು ಯಾರು ತಮ್ಮ ಸೇವೆ ಮಾಡಬೇಕು ಎಂದು ಆರಿಸಿಕೊಳ್ಳುವ ವ್ಯವಸ್ಥೆ ಬರಲಿ,  ನಮ್ಮಿ ಗುಲಾಮತನ ಹೋಗಿ ಪ್ರಜಾಪ್ರಭುತ್ವದ ನಿಜ ಸ್ವರೂಪ ಬಾಳಿ ಬೆಳಗಲಿ , ರಾಜಕಾರಣಿಗಳನ್ನ ಅವಶ್ಯಕತೆಗಿಂತ ಹೆಚ್ಚು ಮೆರೆಸದಿರದ ಪ್ರಜೆಗಳು ನಾವಾಗಲಿ, ಪ್ರಜೆ ರಾಜನಾಗಲಿ, ರಾಜಕಾರಣಿಗಳು ಸೇವಕರಾಗಲಿ ಎಂದು ಆಶಿಸುತ್ತಾ ... !

- ಪುಟ್ಟಾರಾಧ್ಯ ಸಿದ್ದರಾಜ್

Friday, 8 June 2018

ಸಿಲ್ಕ್ ಬೋರ್ಡ್ ಸಿಗ್ನಲ್ !!

ತಿಳಿ ಸಂಜೆ , ಸಮಯ ಸಂಜೆ ಐದಾಗಿದ್ದಿರಬೇಕು ಬಿಟಿಎಂ ಲೇ  ಔಟ್ ನಿಂದ ಮನೆಗೆ ಹೋಗುತ್ತಿರುವಾಗ  ಸಿಲ್ಕ್ ಬೋರ್ಡ್ ಸಿಗ್ನಲ್ ನಲ್ಲಿ ನಿಂತೋನಿಗೆ ಮೊನ್ನೆ ತಾನೆ ನಮ್ ಹುಡ್ಗ  ತ್ರಿಲೋಕ್  ಬರ್ದಿದ್ದ ಡೈರಿಸ್ ಆಫ್ ದಾಳಿ ಪಾಪಣ್ಣ ಓದಿದ್ದು ಇನ್ನು ತಲೇಲಿ ಗುಯ್ಯಂತಿತ್ತು. ಮುಂದೆ ಹೇಗೆ ನಿರೂಪಿಸುತ್ತಾನೋ ಅಂತ ಯೋಚನೆ ಮಾಡ್ತಾ ಇದ್ದೋನಿಗೆ ಎಚ್ಚರ ಆಗಿದ್ದು ಇಡೀ ಸಿಗ್ನಲ್ ಪೂರ್ತಿ ಸ್ತಬ್ಧ ಆಗಿರೋ ಸಿಗ್ನಲ್ ನಲ್ಲಿ ಕಿವಿಲೀ ರಕ್ತ ಬರೋ ಹಾಗೆ ಹಾರ್ನ್ ಕೇಳ್ಸಿದ್ದರಿಂದ, ಹಿಂದೆ ತಿರುಗಿ ನೋಡಿದೆ. ಕಾರ್ ನಲ್ಲಿದ್ದೋವ್ರಿಗೆ ಸುಮಾರು ವಯಸ್ಸು ಮೂವತ್ತರ ಆಸುಪಾಸು, ಕೈನಲ್ಲಿ ಒಂದು ಬೆಳ್ಳಿ ಕಡಗ ಮತ್ತೆ ಹಣೆ ಮೇಲೆ ಕುಂಕುಮ ಜೊತೆಗೆ ಸಿಗ್ನಲ್ ದೀಪಕ್ಕಿಂತ ಸ್ವಲ್ಪ ಹೆಚ್ಚಾಗಿ ಕೆಂಪಾಗಿದ್ದ ಎರಡು ಕಣ್ಣು. (ಗಾಡಿ ಒಡ್ಸಿ ಬಾಡಿ ಹೀಟ್ ಆಗಿದ್ದಿರಬೇಕು).   ಮನಸ್ಸಲ್ಲಿ ಇವ್ನು ಪಕ್ಕ ದಾಳಿ ಪಾಪಣ್ಣನ ಮಗನೇ ಇರ್ಬೇಕು ಅಂದ್ಕೊಂಡು ಮತ್ತೆ ಮುಂದೆ ಬಗ್ಗಿ ಸಿಗ್ನಲ್ ನೋಡಿದ್ರೆ ಇನ್ನು ಕೆಂಪು ದೀಪ ಹತ್ತಿ ಉರಿಯುತ್ತಿತ್ತು. ಕಿಟಕಿ ಗಾಜಿಳಿಸಿ ಮುಂದೆ ಜಾಗ ಇಲ್ಲ ಎಂದು ಸನ್ನೆ ಮಾಡಿದೆ. ಆದ್ರೂ ಕ್ಯಾಬ್ ಡ್ರೈವರ್ ಗಳಿಗೆ ಸಿಲ್ಕ್ ಬೋರ್ಡ್ ಅಪ್ಪನಂತ ಸಿಗ್ನಲ್ ಇದ್ರು ಹೆಂಗಾದ್ರು ಮಾಡಿ ಜಾಗ ಹುಡುಕೋದು ಸಾಮಾನ್ಯ ಜನ ಬಿಡಿಸಲಾರದ ಒಗಟು. ಕಾರನ್ನ ಸ್ವಲ್ಪ ಎಡಕ್ಕೆ ತಿರುಗಿಸಿ ಮತ್ತೊಂದೆರಡು ಬಾರಿ ಹಾರ್ನ್ ಒತ್ತಿ ಜಾಗ ಮಾಡ್ಕೊಂಡು ನಂಗಿಂತ ಸ್ವಲ್ಪ ಮುಂದೆ ತಗೊಂಡೋಗಿ ನಿಲ್ಸೇಬಿಟ್ರು ನಮ್ ಗೌಡ್ರು. ಹಿಂದೆ ಜೋರಾಗಿ ಬರ್ದಿತ್ತು "ಗೌಡ್ರು ಗತ್ತು ದಿಲ್ಲಿಗೂ ಗೊತ್ತು". ಅಯ್ಯೋ ದಿಲ್ಲಿನೆ ಹೆದ್ರುಸಿರೋರ್ಗೆ ಸೈಡ್ ಕೊಡೋಕಾಗ್ಲಿಲ್ವಾಲ್ಲ ಅಂತ ಮನಸಲ್ಲೇ ಬೇಜಾರಾಯ್ತು.   ಇಷ್ಟೆಲ್ಲ ಆದ್ರೂ ಆ ಮನುಷ್ಯ ಹಾರ್ನ್ ಮಾಡೋದನ್ನ ಇನ್ನು ನಿಲ್ಸಿರಲಿಲ್ಲ. ಎಷ್ಟೋ ಜನ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳೊಕೆ ಅಂತ ಬಂದೋವ್ರು ವಾಪಸ್ ಊರಿಗೆ ಹೋಗೋಕೆ ಸಾಧ್ಯ ಆಗ್ದೆ ಕಾರ್ ತಗೊಂಡ್ರೆ ಫ್ರೀ ಆಗಿ ಕೊಡೋ ಹಾರ್ನ್ ಮೇಲೆ ಸೇಡು ತಿರ್ಸ್ಕೊಳ್ಳೋ ಅಷ್ಟು ಯಾರ್ ಮೇಲು ತೀರ್ಸ್ಕೊಳಲ್ಲ ಅನ್ನಿಸ್ತು.

ದಾಳಿ ಪಾಪಣ್ಣನ ಮಗ ಮಿನಿ ಪಾಪಣ್ಣನ ಮೇಲೆ ಪಾಪ ಅನ್ನಿಸಿ ಬಲ ಬಾಗದ ಮಿರರ್ ಗಮನಿಸಿದೆ. ಸಂಜೆ ಬೇರೆ ಸೋನೆ ಮಳೆ ಉದುರುತ್ತಿತ್ತು,  ಬಹಳ ಖುಷಿಯಿಂದ ನಗು ನಗುತ್ತಾ  ಸ್ಕೂಟಿಯಲ್ಲಿ ಹಿಂದೆಯಿಂದ ತೇವಳಿ ಬರುತ್ತಿದ್ದ ಜೋಡಿಯೊಂದು ನಮ್ಮ ಗೌಡ್ರು ಶಕ್ತಿ ಬಿಟ್ಟು ಒತ್ತುತ್ತಿದ್ದ ಹಾರ್ನಿನ ಅರಿವಾಗಲಿ, ತುಂತುರು ಮಳೆಯ ತೇವವಾಗಲಿ ಎಲ್ಲವನ್ನು ಮರೆತು ಅವರದೇ ಲೋಕದಲ್ಲಿ ಮುಳುಗಿದ್ದಂತೆ ಕಂಡಿತು. ಬಂದವರೇ ನನ್ನ ಗಾಡಿಯ ಮುಂದೆ ನಿಲ್ಲಿಸಿದರು. ಗಾಡಿ ಚಿಕ್ಕದು, ಸೀಟು ಇನ್ನು ಚಿಕ್ಕದು ಅದರಲ್ಲೇ ಇಬ್ಬರು ಕುಳಿತುಕೊಳ್ಳಲು ಕಿತ್ತಾಡುತ್ತ ಸರಸವಾಡುತ್ತಿದ್ದ ಕಂಡು ಬೆರಗಾದೆ. ಇಡೀ ಪ್ರಪಂಚವೇ ಸಿಗ್ನಲ್ ದೀಪ ಹಸಿರಾದರೆ ಸಾಕು ಎಂದು ಕಾಯುತ್ತಿದ್ದರೆ ಈ ಜೋಡಿಗೆ ಮಾತ್ರ ಮತ್ತೆರಡು ನಿಮಿಷ ಪ್ರಪಂಚ ನಿಂತರೆ ಒಳಿತೆಂಬಂತೆ ಸರಸ ಸಲ್ಲಾಪ ಮುಂದುವರೆಸಿದ್ದರು.ಇದೆಲ್ಲ ನೋಡಿ  ಚಿಂತೆ ಇಲ್ಲದವರಿಗೆ ಸಂತೇಲಿ ನಿದ್ದೆ ಬಂತಂತೆ ಇವರಿಬ್ಬರಿಗೆ ಎಂದು ಯೋಚಿಸಿದ ನನ್ನ ದರಿದ್ರ ಅರಸಿಕ ಮನಸ್ಸು ನನ್ನ ಗಮನವನ್ನು ನನ್ನ ಗಾಡಿಯ ಬಲಕ್ಕೆ ಹರಿಸಿತು.

ಮೊನ್ನೆ ತಾನೆ ರಿಲೀಸ್ ಆಗಿರೋ 110cc ಪ್ಯಾಷನ್ ಪ್ರೊ ಗಾಡಿಲಿ ಒಂದು ಮಧ್ಯ ವಯಸ್ಸಿನ ಕುಟುಂಬ ಕುಳಿತಿತ್ತು. (ಅಪ್ಪ ಅಮ್ಮ ಮತ್ತೆರಡು ಮಕ್ಳು )ಎರಡೇ ಗಾಲಿ ಇರೋ ಆ ಗಾಡಿ ಮೇಲೆ ಅಂದಾಜು ಒಂದು ಎತ್ತಿನಗಾಡಿಲಿ ಆಗೋ ಅಷ್ಟು ಸಾಮಾನು ಹೊತ್ಕೊಂಡು ಬೊಮ್ಮನಹಳ್ಳಿ ಕಡೆ ಸಿಗ್ನಲ್ ಹಾಕಿ ಗಾಡಿ ತಿರುಗಿಸಿದ್ದನ್ನ ನೋಡಿದ್ರೆ ಅರ್ಥ ಆಗಿದ್ದು, ಬೆಂಗಳೂರಲ್ಲಿ ಸಾಮಾನು ಕೊಳ್ಳೋದು ದುಬಾರಿ ನೋಡಿ, ಹೆಂಗೂ ಹೊಸದಾಗಿ ತಗೊಂಡಿರೋ ಗಾಡಿ ಇದೆ, ಊರೆಲ್ಲ ಸುತ್ತಾಡ್ಕೊಂಡು ವಾಪಸ್ ಬರ್ಬೇಕಾದ್ರೆ ಕಡಿಮೆ ಬೆಲೆಯಲ್ಲಿ ಸಾಮಾನು ಖರೀದಿ ಮಾಡಿ ಬೆಂಗಳೂರಿಗೆ ಬಂದು ಜೀವನ ಮಾಡೋ ತಯಾರಿಲಿದ್ದಾರೆ ಅಂತ ಅನ್ನಿಸಿದ್ದು ಇಷ್ಟು ವರ್ಷ ಇಂತಹ ಎಷ್ಟೋಂದು ಕುಟುಂಬಗಳ ಪರಿಚಯವಿದ್ದ ಕಾರಣವಿರಬೇಕು. ಹೊಟ್ಟೆಪಾಡು,  ಬೆಂಗ್ಳುರ್ ಜೀವ್ನ ಎಲ್ಲ ನೀಗಿಸ್ಕೊಬೇಕು ಅಂದ್ರೆ ಇದೆಲ್ಲ ಮಾಡೋದು ಅಷ್ಟೇ ಅವಶ್ಯಕವಾಗಿಬಿಟ್ಟಿದೆ. ವ್ಯವಸಾಯ ಮಾಡೋಕೋಗಿ ಕೈ ಸುಟ್ಕೊಂಡು, ಸರ್ಕಾರಗಳ ಬೊಗಳೆ ಆಶ್ವಾಸನೆಗಳಿಂದ ಬೇಸತ್ತು ಬೆಂಗಳೂರಲ್ಲಿ ಬಂದು ಬೇಕರಿಯಲ್ಲಿ ಕೆಲಸ ಮಾಡಿದ್ರು ಪರ್ವಾಗಿಲ್ಲ ಅನ್ನೋರು ಈಗಿನ ಕಾಲದಲ್ಲಿ ಜಾಸ್ತಿ ಆಗಿರೋದನ್ನ ನಾವೆಲ್ಲ ಒಪ್ಪಲೇಬೇಕಾದ ವಿಷಾದದ ಸಂಗತಿ. ಬಂಡವಾಳಶಾಹಿಗಳೂ ರಾಜಕಾರಣಿಗಳೂ ಇದನ್ನೇ ಆಸ್ತಿ ಮಾಡಿಕೊಂಡು ರೈತಾಪಿ ಜನರ ಜೀವನ ಮತ್ತು ವರ್ಚಸ್ಸನ್ನ ಹಾಳುಗೆಡವಿ ಬೆಂಗಳೂರೆಂಬ ಬಣ್ಣದ ನಕಲಿ ಪ್ರಪಂಚ ಸೃಷ್ಟಿಸಿರುವುದು ನನ್ನ ಪಕ್ಕದಲ್ಲೇ ನಿಂತಿದ್ದ ಕುಟುಂಬದ ಆ ಗಂಡಸಿನ ಮುಖದ ಮೇಲೆ ಎದ್ದು ಕಾಣುತ್ತಿತ್ತು.

ಮತ್ತೆ ತಲೆ ಹಾಳಾದಂತಾಗಿ ತಲೆ ತಗ್ಗಿಸಿ ಕುಳಿತು ಎರಡು ನಿಮಿಷ ಮೌನಾಚಾರಣೆ ಮಾಡಿ ಮತ್ತೆ ತಲೆ ಎತ್ತಿದೆ. ಮುಂದೆಯೇ ಒಂದು i10 ಕಾರು ನಿಂತಿತ್ತು. ಬ್ರೇಕ್ ಹಾಕಿದ್ದರಿಂದ ಕಾರಿನ ಹಿಂದಿನ ಪಾರ್ಕಿಂಗ್ ಲೈಟರಡು ಹತ್ತಿದ್ದವು. ಹಿಂದಿನ ಕಿಟಕಿಗಳಿಂದ ಕಾರಿನಲ್ಲಿದ್ದ ಮನುಷ್ಯರು ನೆರಳಿನಂತೆ ಕಾಣುತ್ತಿದ್ದರು. ಕಾರಿನಲ್ಲೊಂದು ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ದಂಪತಿ ಮತ್ತವರ ಒಂದು ಚಿಕ್ಕ ಮಗು ಆಟವಾಡುತ್ತಿದ್ದಿದು ಕಾಣುತ್ತಿತ್ತು. ನಮ್ಮೂರಲ್ಲಿ ಇಲ್ಲಿ ಸಿಗುವ ಟೆಡ್ಡಿ ಬೇರ್ ದುಡ್ಡಿನಲ್ಲಿ ನಾಲ್ಕೈದು ಸಂಸಾರದ ದಿನದೂಟವೇ ಆಗಿ ಬಿಡುತ್ತದೆನೋ ಅನಿಸುವ ಟೆಡ್ಡಿ ಬೇರ್ ಹಿಡಿದು ಅಪ್ಪನ ತಲೆ ಮೇಲೆ ಬಡಿಯುತ್ತಿದ್ದ ಮಗು ಅತೀವ ಖುಷಿಯಿಂದ ಬೀಗುತ್ತಿದ್ದಿದು ಎದ್ದು ಕಾಣುತ್ತಿತ್ತು. ಅಪ್ಪನೂ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಮಗುವಿಗೆ ಫ್ಲೈಯಿಂಗ್ ಕಿಸ್ ಗಳನ್ನ ಹಾರಿಸುತ್ತಿದ್ದಿದು ನೋಡಲು ಅತೀವ ಚೆಂದವೇನೋ ಅನಿಸಿದ್ದು ನಿಜ. ಇಷ್ಟು ಖುಷಿಯಾಗಿರುವ ಗಂಡನ ನೋಡಿ ಹೆಂಡತಿಗೆ ತಡೆಯಲಾಗದೆ ಗಂಡನ ಕೆನ್ನೆಯ ಗಿಂಟಿದ್ದನ್ನು ನೋಡಿ ಕಣ್ಮುಚ್ಚಿದೆ. ಕಾರಲ್ಲಿ ಕಂಡ ತಕ್ಷಣ ಅವರು ಖುಷಿಯಾಗಿರುವವರೆಂದು ತಿಳಿದರೆ ಅದು ಮೂರ್ಖತನವೇ ಸರಿ ಆದರೆ ಆ ಸಕ್ಷಣದಲ್ಲಿ ಅವರ ಖುಷಿ ಮಾತ್ರ ಸತ್ಯಾ ಸತ್ಯದ್ದೇ ಸರಿ.

ಸಿಲ್ಕ್ ಬೋರ್ಡ್ ಸಿಗ್ನಲ್ ಎಂತವರ ಸದ್ದನ್ನು ಸಹ ಕಿತ್ತುಕೊಳ್ಳುವುದು ಸಹಜ, ದಿಲ್ಲಿಯನ್ನೇ ನಡುಗಿಸಿರೋ ಗೌಡರು ಕೂಡ ಸಿಲ್ಕ್ ಬೋರ್ಡ್ ಸಿಗ್ನಲ್ ನ ಕೆಂಪು ದೀಪದ ತಾಳ್ಮೆಗೆ ತಗ್ಗಿ ತಣ್ಣಗಾಗಿದ್ದರು.  ಎಂತವರು ಬಂದರೂ ಈ ಸಿಗ್ನಲ್ ಗೆ ಬೆಲೆ ಕೊಡಬೇಕೆಂಬುದು ಅಲಿಖಿತ ಶಾಸನ. ಮತ್ತೆರಡು ನಿಮಿಷದ ನಂತರ ಸಿಗ್ನಲ್ ಹಸಿರಾಗಿದ್ದು ಕಾಣಿಸಿತು. ಸ್ಮಶಾನ ಮೌನದಂತಿದ್ದ ಸಿಲ್ಕ್ ಬೋರ್ಡ್ ಇದ್ದಕಿದ್ದಂತೆ ಹಾರ್ನ್ ಗಳಿಂದ ಹತ್ತಿ ಉರಿದಿದ್ದನ್ನ ಕಂಡು ಬೆರಗಾಗಿ ಬ್ರೇಕ್ ಇಳಿಸಿ ಕ್ಲಚ್ ತುಳಿದು ಆಕ್ಸಿಲರೇಟರ್ ಒತ್ತಿದೆ. ಹೀಗೆ ಬೆಂಗಳೂರು ನಾನಾ ಕಾರಣಗಳಿಂದ ನಾನಾ ಜನರನ್ನ ತನ್ನ ಹೊಟ್ಟೆಯೊಳಗಾಕಿಕೊಂಡು ಸಾಕುತ್ತಿದೆ ಹಾಗೆಯೇ ಸಿಲ್ಕ್ ಬೋರ್ಡಿನಂತಹ ಸಿಗ್ನಲ್ ಗಳು ನಾನಾ ಜನರ ನೂರಾರು ಕಥೆಗಳನ್ನ ಕೂಗಿ ಹೇಳುತ್ತಿವೆ. ಇದೊಂದು ಮುಗಿಯದ ಕಥೆ, ನನ್ನಂತೆಯೇ ಮತ್ತೊಬ್ಬ ಕಥೆಗಾರ ನನ್ನ ವ್ಯತೆಯನ್ನ ಎಲ್ಲಿ ಕಥೆಯಾಗಿಸಿರುವನೋ ಎಂದು ಬಗೆಯುತ್ತಾ ಸದ್ಯಕ್ಕಿಲ್ಲಿಗೀಕಥೆ ಮುಗಿಸುವೆ. ಮತ್ತೆ ಸಿಗೋಣ !!

- ಪುಟ್ಟರಾಧ್ಯ ಸಿದ್ದರಾಜ್

Thursday, 25 January 2018

ರಕ್ತ ಕುದೀತಾ ಇದೀಯಾ ? ಏನ್ ಮಾಡ್ಬೇಕು ಅಂತಿದೀರಿ !?

ಹೇಳ್ತಿನ್ ಕೇಳಿ!
ಇಡೀ 30 ವರ್ಷ ದ ಈ ಪಯಣದಲ್ಲಿ ಒಂದೂ ಧರಣಿ ಕೂರದೇ, ಯಾವುದೇ ರಾಜಕೀಯ ಪಕ್ಷಗಳತ್ತ ಒಲವು ತೋರದೆ, ಒಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡದೆ, ಒಂದಿಂಚೂ ರಕ್ತ ಹಾರಿಸದೇ ಇಲ್ಲಿರುವ ವ್ಯವಸ್ಥೆಗೆ ಸವಾಲಾಗುವಂತೆ “ ಪ್ರಜೆ” ಎಂಬ ಸರ್ವೋತ್ತಮನ ಹಕ್ಕುಗಳನ್ನು ಉಪಯೋಗಿಸಿಕೊಂಡು, ಒಂದು ಸಂಸ್ಥೆ ಕಟ್ಕೊಂಡು ಒಂದು ನಯಾ ಪೈಸೆ ದುಡ್ಡು ತೆಗೆದುಕೊಳ್ದೆ 36000 ಕ್ಕಿಂತ ಹೆಚ್ಚು ಜನ ಸಾಮಾನ್ಯರ ಕೇಸ್ ಗಳನ್ನ, (ಕೇಸ್ ಗಳಂದ್ರೆ ಭಾರತ ಸರ್ಕಾರವೂ ಆಲಸ್ಯ ಮಾಡಿದ ಕೇಸ್ ಗಳು, ಕರ್ನಾಟಕ ಸರ್ಕಾರದ ಅಧಿಕಾರಿಗಳು ಮಾಡಿದ ಮೂರ್ಖತನದಿಂದ ಜನಿಸಿದವುಗಳು. ಕೋರ್ಟ್ ಕಟಕಟೆ ಹತ್ತದೆ ಬರೀ ಜನಾಭಿಪ್ರಾಯ ( ಪಬ್ಳಿಕ್ ಒಪಿನಿಯನ್) ಮೂಡಿಸಿ ಅಧಿಕಾರಿಗಳಿಗೆ ಜನ ಸಾಮಾನ್ಯರಿಂದ ಛಿಮಾರಿ ಮಾಡಿಸಿ ಬಗೆಹರಿಸಿಕೊಂಡ ಕೇಸ್ ಗಳು. ಇವರ ಪ್ರತಿಯೊಂದು ಸಮಸ್ಯೆ ಬಗೆಹರಿಸಿರುವ ರೀತಿಯನ್ನು ಒಂದೊಂದು ಡಾಕ್ಯುಮೆಂಟರಿ ಮಾಡಿ ಜನರಿಗೆ ತೋರಿಸಿದರೆ ಅಲ್ಲಾಗುವ ಒಂದು ಕ್ರಾಂತಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.
ಈ ಮಹಾನುಭಾವರ ಬಗ್ಗೆ ಹೇಳ್ತಿನ್ ಕೇಳಿ. !!
1975 ರ ತುರ್ತು ಪರಿಸ್ಥಿತಿ, ಸ್ಥಳ ಉಡುಪಿ.
ಆ ಸಮಯದಲ್ಲಿ ಶಾನುಭಾಗ್ ಸರ್ ಇನ್ನು ಕಾಲೇಜು ಯುವಕ. ತುರ್ತು ಪರಿಸ್ಥಿತಿಯೆಂದರೆ ಎಲ್ಲರಿಗೂ ತಿಳಿದಿದೆ ಎಂದು ಭಾವಿಸಿದ್ದೇನೆ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಮೊದಲು ಸೇರುತ್ತಿದ್ದು ಜೈಲು ನಂತರ ಮಿಕ್ಕ ವಿಚಾರಣೆ. ಹೀಗೆಯೇ ಶಾನುಭಾಗ್ ಸರ್ ಕಾಲೇಜಿನಲ್ಲೂ ಒಂದು ಗಲಾಟೆ ನಡೆದಿತ್ತು ಆದರೆ ಇವರಿಗೆ ಸಂಬಂಧಪಟ್ಟದ್ದಲ್ಲ ಆದರೂ ಪೋಲಿಸಿನವರು ಕಾಲೇಜಿನಲ್ಲಿದ್ದ ಮುಖ್ಯರನ್ನ ಹಿಡಿದು ಮಂಗಳೂರಿನಲ್ಲಿದ್ದ ಪೊಲೀಸ್ ಹಿರಿಯರ ಮುಂದೆ ಹಾಜರು ಪಡಿಸಿದ್ದರು. ಇವರಲ್ಲಿ  ಶಾನುಭಾಗ್ ಸರ್ ಕೂಡ ಒಬ್ಬರು. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಎಲ್ಲರನ್ನು ವಿಚಾರಿಸಿದಾಗ, ಈ ಹುಡುಗರು ಆ ಗಲಾಟೆಗೆ ಸಂಬಂಧವಿಲ್ಲವೆಂದು ತಿಳಿದು ಅಲ್ಲೇ ಇದ್ದ ಕಿರಿಯ ಅಧಿಕಾರಿಗೆ ಒಂದು ಬಾಂಡ್ ಪತ್ರದ ಮೇಲೆ ಸಹಿ ತೆಗದುಕೊಂಡು ಮನೆಗೆ ಕಳುಹಿಸಲು ಆಗ್ರಹಿಸಿದರು. ಎಲ್ಲರೂ ಮರುಮಾತನಾಡದೆ ಸಹಿ ಮಾಡಿ ಹೋದರೆ ಶಾನುಭಾಗ್ ಸರ್ ಸಹಿ ಮಾಡುವ ಮುಂಚೆ ಕೊನೆಯ ಸಾಲನ್ನು ಓದಿ ಸಹಿ ಮಾಡಲು ಒಪ್ಪಲಿಲ್ಲ. ಕೊನೆಯ ಸಾಲು ಹೀಗಿತ್ತು "Henceforth I will not involve in any anti national activities". ಸಹಿ ಮಾಡಿದರೆ ಅದರರ್ಥ ಈ ಮುಂಚೆ ಮಾಡಿದ್ದು "anti national" ಕೃತ್ಯೆಯಾಗುತ್ತದೆಂದು ಇವರು ಸಹಿ ಮಾಡಲು ನಿರಾಕರಿಸಿದ್ದರು. ಇದರಿಂದ ಪೊಲೀಸ್ ಅಧಿಕಾರಿಗಳು ಇವರನ್ನ ನೇರವಾಗಿ ಕಳಿಸಿದ್ದು ಗೆಸ್ಟ್ ಹೌಸ್ ಗೆ ಅಂದರೆ ಜೈಲಿಗೆ.
ಇಲ್ಲಿಂದ ಪ್ರಾರಂಭವಾದ ಸಾಹಸಗಾಥೆಯನ್ನ ಮುಂದಿನ ಪೀಳಿಗೆಗಳಿಗೂ ವರ್ಗಾಯಿಸುವ ಯೋಚನೆ ಇವರದು. ಜೈಲಿನಲ್ಲಿ ಇವರ ಜೊತೆ ಅನೇಕ ರಾಜಕಾರಣಿಗಳು ಇದ್ದರು. ಕಾರಣ, ತುರ್ತುಪರಿಸ್ಥಿತಿ. ಜೈಲಿನಲ್ಲಿ ಬೆಳಿಗ್ಗೆ ಮತ್ತೆ ಸಂಜೆ ಸಿಗುತ್ತಿದ್ದು ಒಂದು ಲೋಟ ಗಂಜಿ ಬಿಟ್ಟರೆ ಮತ್ತೆಂತದ್ದು ಇಲ್ಲ. ಆದ ಕಾರಣ ಕುತೂಹಲಕ್ಕೆಂದು ಅವರು ಅಲ್ಲಿದ್ದ ಜೈಲಿನ ಅಧಿಕಾರಿಯೊಬ್ಬರನ್ನು ಒಬ್ಬರಿಗೆ ಊಟಕ್ಕೆ ಸರ್ಕಾರದಿಂದ ಬರುವ ಹಣವೆಷ್ಟು ಎಂದು ಕೇಳಿದಾಗ ಸಿಕ್ಕ ಉತ್ತರ “ಸಂಬಂಧಪಟ್ಟವರಿಗೆ ತಿಳಿಸುವೆ, ನಿನಗೆ ತಿಳಿಸುವ ಅಗತ್ಯವಿಲ್ಲವೆಂದು”. ಸರಿ, ಆದದ್ದಾಗಲಿ ಎಂದು ನಾಲ್ಕೈದು ಜನರ ಗುಂಪು ಮಾಡಿ ಊಟ ಮಾಡುವುದಿಲ್ಲವೆಂದು ಹಠ ಹಿಡಿದು ಕುಳಿತಾಗ ಸ್ವಲ್ಪ ಸಮಯದ ತಿಕ್ಕಾಟದ ನಂತರ ಜೈಲಿನ ಮುಖ್ಯ ಅಧಿಕಾರಿಯೋರ್ವರು ಬಂದು ಇವರನ್ನು ಮಾತನಾಡಿಸಬೇಕಾಯಿತು. ವಿಷಯ ತಿಳಿದು ಊಟದ ಖರ್ಚನ್ನು ಹೇಳಲು ನಿರಾಕರಿಸಿದ ಅಧಿಕಾರಿ ಕರೆದು ಈ ಕೂಡಲೇ ಖರ್ಚು ವೆಚ್ಚದ ವಿವರ ನೀಡಬೇಕೆಂದು ಆಗ್ರಹಿಸಿದರು. ಅಂದಿಗೆ (1975 ರಲ್ಲಿ)  ಒಬ್ಬರಿಗೆ ಬರುತ್ತಿದ್ದ ಹಣ 16 ರೂಪಾಯಿಗಳು ಎಂದು ತಿಳಿಸಲಾಯಿತು. ಆದರೆ ಇವರಿಗೆ ನೀಡುತ್ತಿದ್ದ ಊಟದ ಖರ್ಚು ಅಂದಾಜು 1 ರೂಪಾಯಿನಷ್ಟಿದ್ದಿರಬೇಕು.  ಅಂದಿನಿಂದಲೇ ಹಿರಿಯ ಅಧಿಕಾರಿಗಳು ಅಲ್ಲಿದ್ದ ನಿರ್ವಹಣಾ ಅಧಿಕಾರಿಗೆ ತರಾಟೆ ತೆಗೆದು ಊಟದ ಕಮಿಟಿ ರಚಿಸಿ ಊಟದ ವ್ಯವಸ್ಥೆಯನ್ನೇ ಬದಲಾಯಿಸಿದರು. ಇಡೀ ಜೈಲಿಗೆ ಸುಖ ಸಂಪನ್ನವಾಗಿ ಒಬ್ಬರಿಗೆ ಬರೀ 8 ರೂಪಾಯಿ ಖರ್ಚು ಮಾಡಿದರೆ ಆಗುತ್ತಿತ್ತು. ಜೈಲಿನಲ್ಲಿದ್ದವರಿಗೆ ಹೊರಗಡೆಯ ತುರ್ತು ಪರಿಸ್ಥಿತಿಗಿಂತ ಒಳಗಿನ ಸುಖ ಸಂಪನ್ನ ಭೋಜನ ಸಿಗುತ್ತಿದ್ದ ಜೈಲೇ ಆರಾಮೆನಿಸತೊಡಗಿತು.
ಹೀಗೆ ಈ ವ್ಯವಸ್ಥೆ ಸರಿಯಾದ ನಂತರ ಮತ್ತದಿನೈದು ದಿನ ಕಳೆದು ಅಷ್ಟರಲ್ಲಿ ಪರಿಚಯವಾಗಿದ್ದ ಜೈಲಿನ ನಿರ್ವಹಣಾ ಅಧಿಕಾರಿಯನ್ನು ಮಾತನಾಡಿಸಿ ತುರ್ತು ಪರಿಸ್ಥಿತಿಗೆ ಸಂಬಂಧವಿಲ್ಲದ ಅಂದರೆ ಅಲ್ಲಿ ನಿಜವಾದ ಖೈದಿಗಳನ್ನ ಭೇಟಿ ಮಾಡುವ ಸಲುವಾಗಿ ಕೇಳಿಕೊಂಡಾಗ, ಅಲ್ಲಿದ್ದವರೆಲ್ಲ ಬಹಳ ಎಚ್ಚರ ಕೊಟ್ಟರು. ಶಾನುಭಾಗರೇ ಒಳಗೆ ಹೋಗಿ ಏಕೆ  ಮೇಲೆ ಮುಳ್ಳು ಎಳೆದುಕೊಳ್ಳುವಿರಿ, ಅಲ್ಲಿರುವವರು ಕ್ರಿಮಿನಲ್ ಗಳು, ನಿಮಗೆ ಹೆಚ್ಚು ಕಡಿಮೆಯಾದರೆ ತೊಂದರೆಯಾದೀತು ಎಂದೆಲ್ಲ ನುಡಿದರು. ಇವರಿಗೆ ಮೊದಲಿನಿಂದಲೂ ಸ್ವಲ್ಪ ಸಂಶೋಧನಾ ಮನೋಭಾವ ಆದ್ದರಿಂದ ಆದದ್ದಾಗಲಿ ಎಂದು ಒಳಗೆ ನುಗ್ಗಿದರು. ಒಳಗೆ ಹೋಗಿ ಇವರು ಎಲ್ಲರಿಗೂ ಕೇಳಿದ್ದು ಒಂದೇ ಪ್ರಶ್ನೆ, ನೀವು ಇಲ್ಲಿಗೆ ಏಕೆ ಬಂದದ್ದು ಎಂದು. ಅವರು ಎಲ್ಲರನ್ನು ಕೇಳಿ ಅಳೆದ ಮೇಲೆ ತಿಳಿದಿದ್ದೇನೆಂದರೆ ಅಲ್ಲಿದ್ದ ಖೈದಿಗಳ ಪೈಕಿ 100 ಕ್ಕೆ 5 ಜನ ಮಾತ್ರ ಹುಟ್ಟು ಅಪರಾಧಿಗಳೆನ್ನಬಹುದು ಮಿಕ್ಕ 95 ಜನ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳಲಾಗದೆ ಮಾಡಿದ ಅಪರಾಧದಿಂದ ಒಳ ಬಂದವರು. ಕಾನೂನು ತಿಳಿಯದೆ, ಅನ್ಯಾಯವನ್ನು ತಡೆಯಲಾಗದೆ ಮತ್ತು ಅವಮಾನವನ್ನು ಸಹಿಸಿಕೊಳ್ಳಲಾಗದೆ, ಪ್ರಸ್ತುತ ವ್ಯವಸ್ಥೆಯಲ್ಲಿ ನ್ಯಾಯ ಪಡೆಯಲಾಗದೆ, ಕೋರ್ಟ್ ಕಛೇರಿಗಳ ಅಲೆಯಲಾಗದೆ ಕಾನೂನನ್ನು ಇವರೇ ಕೈಗೆ ತೆಗೆದುಕೊಂಡು ಖೈದಿಗಳಾದವರು. ಇವರು ಒಳಗೆ ಹೋದಾಗ ಸಾಮಾನ್ಯವಾಗಿ ಎಲ್ಲರೂ ಮಾತನಾಡಿದ್ದರು ಆದರೆ ವಿಠ್ಠಲ (ನನಗೆ ಹೆಸರು ಮರೆತಿದೆ)  ಎಂಬ ವ್ಯಕ್ತಿ ಮಾತ್ರ ಇವರ ಬಳಿ ಮಾತನಾಡಿದ್ದು ಅಷ್ಟಕ್ಕಷ್ಟೇ. ಆದ್ದರಿಂದ ಶಾನುಭಾಗರು ಬೇರೆಯವರನ್ನು ಕೇಳಿ ತಿಳಿದಾಗ ಗೊತ್ತಾದದ್ದು ಅವನು ಸ್ವಲ್ಪ ಹಾಗೆಯೇ ಮೂರ್ನಾಲ್ಕು ದಿನಗಳ ಮೇಲೆ ಸರಿ ಹೋಗುವವನೆಂದು ಎಲ್ಲರೂ ತಿಳಿಸಿದರು. ಹಾಗೆಯೇ ಮೂರ್ನಾಲ್ಕು ದಿನಗಳ ನಂತರ  ವಿಠಲ ಮಾತನಾಡತೊಡಗಿದ. ವಿಠಲ ಜೈಲಿಗೆ ಬಂದು ಎಷ್ಟು ವರ್ಷವಾಯಿತೆಂದು ಅವನಿಗೂ ಮರೆತು ಹೋಗಿತ್ತು ಬೇರೆಯವರಿಗೂ ತಿಳಿದಿರಲಿಲ್ಲ. ವಿಠಲ ಒಂದಿನ ಕಾಸರಗೋಡಿನಿಂದ ರೈಲು ಹತ್ತಿದ್ದ, ಟಿಕೆಟ್ ಪಡೆಯಲು ಕೈಲಿ ಹಣವಿರಲಿಲ್ಲ. ಆಗ ರೈಲ್ವೆ  ಟಿಕೆಟ್ ಕಲೆಕ್ಟರ್ ಬಂದು ಇವನ ಬಳಿ ಹಣ ಇದಿಯೋ ಇಲ್ಲವೋ ತಿಳಿಯದೆಯೇ ಇವನ ಹೆಸರಲ್ಲಿ ಟಿಕೆಟ್ ಹರಿದೆ ಬಿಟ್ಟರು. ಇವನ ಬಳಿ ಒಂದು ಬಿಡಿಗಾಸು ಇಲ್ಲ, ಆದರೆ ಟಿಕೆಟ್ ಹರಿದ್ದದ್ದಾಗಿದೆ ಎಂದು ಇವನನ್ನು ಅಲ್ಲಿಯ ರೈಲ್ವೆ ಪೊಲೀಸ್ ಗೆ ಒಪ್ಪಿಸಿ ಮುನ್ನೆಡೆದರು. ಅಂದಿನ ರೈಲ್ವೆ ಪೊಲೀಸ್ ಗು ಇವನ ಜೊತೆ ಏನು ಮಾಡಬೇಕಂದು ತಿಳಿಯದೆ ಸಿವಿಲ್ ಪೊಲೀಸ್ ಗೆ ಒಪ್ಪಿಸಿದರು. ಸಿವಿಲ್ ಪೊಲೀಸ್ ಗು ಏನು ಮಾಡಬೇಕೆಂದು ತೋಚದೇ ನೇರ ವಿಠಲನನ್ನು ಕಳಿಸಿದ್ದು ಗೆಸ್ಟ್ ಹೌಸ್ ಗೆ (ಜೈಲು). ಅವ ಅಂದು ಜೈಲು ಸೇರಿದ್ದು ಬಿಟ್ಟರೆ, ಯಾವ ಮ್ಯಾಜಿಸ್ಟ್ರೇಟ್ ಎಂದಿಗೂ ಜೈಲಿನ ಖೈದಿಗಳ ವಿಚಾರಿಸಲಿಲ್ಲ, ಯಾವ ಪೊಲೀಸ್ ಅಧಿಕಾರಿಯು ಇವನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಿ ಪಡಿಸಲಿಲ್ಲ , ಅಲ್ಲಿಂದ 8 ವರ್ಷ ಆಯ್ತೋ 10 ವರ್ಷ ಆಯ್ತೋ ಅವನಿಗೂ ಗೊತ್ತಾಗ್ಲಿಲ್ಲ, ಬೆರೆಯವ್ರು ತಲೆ ಕೆಡಿಸ್ಕೊಲಿಲ್ಲ. ಇದನ್ನೆಲ್ಲ ಕೇಳಿ ಶಾನುಭಾಗರು ದಂಗಾದರು. ಸರಿ ಎಂದು ಸ್ವಲ್ಪ ದಿನಗಳ ನಂತರ ಅಲ್ಲಿದ್ದ ತುರ್ತು ಪರಿಸ್ಥಿತಿಗೆಂದು ಅರೆಸ್ಟ್ ಆಗಿದ್ದವರನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಿಪಡಿಸಿದಾಗ ಶಾನುಭಾಗರ ಸರದಿಯೂ ಬಂತು. ಮ್ಯಾಜಿಸ್ಟ್ರೇಟರು "ಏಕಪ್ಪ ನಿ ಯಂತಕ್ಕೆ ಜೈಲಿಗೆ ಬಂದಿದ್ದು" ಎಂದು ಕೇಳಿದಾಗ "ಸಾರ್ ಕಾಲೇಜಿನಲ್ಲಿ ಒಂದು ಗಲಾಟೆಯಾಗಿದೆ. ಆದ್ದರಿಂದ ನನ್ನನ್ನು ಮಂಗಳೂರಿನ ಪೊಲೀಸ್ ಠಾಣೆಗೆ ಕರೆತರಲಾಗಿತ್ತು, ಅದಕ್ಕೆ ನನ್ನ ಸಂಭದವಿಲ್ಲ ಎಂದು ತಿಳಿದ ಮೇಲೆ, ಬಾಂಡ್ ಸಹಿ ಮಾಡಲು ಹೇಳಿದರು. ಅದರಲ್ಲಿ "hence forth I will not involve in anti national activities" ಎಂದಿತ್ತು ಆದ್ದರಿಂದ ಸಹಿ ಮಾಡಲಿಲ್ಲ. ಮ್ಯಾಜಿಸ್ಟ್ರೇಟರು ಪೊಲೀಸರನ್ನೊಮ್ಮೆ ದಿಟ್ಟಿಸಿ, ಇವರನ್ನು ಈ ಕೂಡಲೇ ಬಿಟ್ಟು ಕಳಿಸಿ ಎಂದು ಆಜ್ಞಾಪಿಸಿದರು. ಮತ್ತು ಶಾನುಭಾಗರಿಗೆ ನೀವು ಈ ಕೂಡಲೇ ಹೊರಡಬಹುದು ಎಂದು ತಿಳಿಸಿ ನಿಮಗೆ ಸಂಬಂಧಪಟ್ಟ ವಸ್ತುಗಳು ನಿಮ್ಮ ಮನೆ ತಲುಪುತ್ತವೆ ಎಂದು ತಿಳಿಸಿದರು.
ಶಾನುಭಾಗರು ಹೊರಡುವ ಮುಂಚೆ ಎರಡು ನಿಮಿಷ ಸಮಯ ಕೇಳಿದರು. ಮ್ಯಾಜಿಸ್ಟ್ರೇಟರು ಇವರ ಮುಖವೊನ್ನೊಮ್ಮೆ ನೋಡಿ ಸರಿ ಎಂದರು. " ಸಾರ್ ಇದೆ ಜೈಲಿನಲ್ಲಿ ವಿಠ್ಠಲ ಎಂಬುವನಿದ್ದಾನೆ" ಎಂದು ಶುರು ಮಾಡಿ ಪಟಪಟನೆ ಅವನ ಕಥೆಯನ್ನು ಇವರ ಮುಂದೆ ಹೇಳಿದರು. ಆ ಕೂಡಲೇ ಮ್ಯಾಜಿಸ್ಟ್ರೇಟರು ವಿಠ್ಠಲನನ್ನ ಬಿಡುಗಡೆಗೊಳಿಸಿದರು. ಆದರೆ ಹೊರಡುವ ಮುನ್ನ ಶಾನುಭಾಗರಿಗೆ ಇವರ ಕೊಠಡಿಯಲ್ಲಿ ಕೂರಲು ಹೇಳಿದರು. ಇವರು ಎಲ್ಲ ಸರಿ ಹೋಯಿತೆನ್ನುವಾಗ ಮ್ಯಾಜಿಸ್ಟ್ರೇಟರು ಒಳಗೆ ಬಂದು ಹೇಳಿದ್ದು ಪೊಲೀಸ್ ನಿಮ್ಮ ಮೇಲೆ ಮತ್ತೊಂದು ಕೇಸ್ ಹಾಕುವ ಸಂಭವವಿದೆ, ನಡೆಯಿರಿ ನನ್ನ ಜೊತೆ ಎಂದು ಅವರ ಕಾರಿನಲ್ಲೇ ಹತ್ತಿಸಿಕೊಂಡು ಮಾರು ದೂರ ಕೊಂಡೊಯ್ದು ಶಾನುಭಾಗ್ ಸರ್ ರವರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಾಗ,ಶಾನುಭಾಗ್ ಸರ್ ತೀರ್ಮಾನ ಮಾಡಿದ್ದು ಇಂದಿಗೆ ಇದೆ ಕೊನೆ ನಾನೆಂದಿಗೂ ಈ ಜೈಲು ಮೆಟ್ಟಿಲು ಹತ್ತುವಂತಿಲ್ಲ, ಮತ್ತೆ ನನ್ನಂತ ಸಾವಿರಾರು ಮಂದಿಗೆ ಜೈಲು ಹತ್ತಲು ಬಿಡುವುದಿಲ್ಲ. ಅದು ಕಾನೂನು ಡಿಗ್ರಿ ಪಡೆದಾದರೂ ಸರಿ ಅಥವಾ ಭಾರತದ ಸಂವಿಧಾನದಲ್ಲಿರುವ ಪ್ರಜೆ ಎಂಬ ಅತ್ಯುನ್ನತ ಪದವಿಗಿರುವ ಅರ್ಹತೆಗಳನ್ನು ಉಪಯೋಗಿಸಿಕೊಂಡಾದರು. ಅಲ್ಲಿಂದ ಇವರ ಸಂಸ್ಥೆ ಒಂದು ಪೈಸಾವಿಲ್ಲದೆ ಬಗೆಹರಿಸುವ ಕೇಸುಗಳ ಸಂಖ್ಯೆ ಅಂದಾಜು 36 ಸಾವಿರಕ್ಕಿಂತ ಹೆಚ್ಚು. ಮತ್ತೊಮ್ಮೆ ಓದಿ 36 ಸಾವಿರ !!!! ಅಕ್ಕು ಲೀಲಾ ಕೇಸ್, ಸೌದಿ ಅರೇಬಿಯಾ ಕೇಸ್ಗಳು, ಲೆಬಾನಿಸ್ ಪ್ರೆಸಿಡೆಂಟ್ ಕೇಸ್, ಫಾರೆಸ್ಟ್ ಗಾರ್ಡ್ ಕೇಸ್ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ ಕಾರಣ ಇಂದಿಗೂ 40 ರಿಂದ 50 ಕೇಸ್ ಬರುತ್ತಲೇ ಇವೆ.
ನಾನು ಅಲ್ಲಿ ಕೇಳಿ ಇಲ್ಲಿ ಬರೆಯುತ್ತಿರುವುದರಿಂದ ವಿಷಯವನ್ನ ಅವರಷ್ಟು ತೀವ್ರವಾಗಿ ಮತ್ತು ಖಚಿತವಾಗಿ ಹೇಳಲಾಗುತ್ತಿಲ್ಲ. ಈ ಎಲ್ಲ ಕಥೆಗಳನ್ನ ಹೇಳಿ ಕೊನೆಗೆ ನಮಗೊಂದು ಪ್ರಶ್ನೆ ಕೇಳಿದರು "ಇದೆಲ್ಲಾ ಕೇಳಿ ನಿಮಗೆಲ್ಲ ರಕ್ತ ಕುದಿಯುತ್ತಿದಿಯಾ??" ಅಲ್ಲಿ ಕುಳಿತಿದ್ದವರೆಲ್ಲ ಒಕ್ಕರಲಿನಿಂದ ಹೇಳಿದರು "ಹೌದು ಸರ್" ಶಾನುಭಾಗ್ ಸರ್ ಮತ್ತೆ ಕೇಳಿದ್ರು "ಹಾಗಾದ್ರೆ ಎನ್ ಮಾಡ್ಬೇಕಂತಿದಿರಿ??" ಎನ್ ಮಾಡೋದು ಅಂತ ಎಲ್ಲ ಮುಖ ಮುಖ ನೋಡ್ಕೊಂಡ್ರು. ಶಾನುಭಾಗ್ ಸರ್ ಮತ್ತೆ ಹೇಳಿದ್ರು -"ಎನ್ ಮಾಡ್ಬೇಕುಂತಾ ನಾ ಹೇಳ್ಕೊಡ್ತೀನಿ, ಆದ್ರೆ ನನ್ನ ಆತಿಥ್ಯ ಸ್ವೀಕರಿಸಲು ಉಡುಪಿಗೆ ಬನ್ನಿ. ಇಲ್ಲಿ ನಾ ಯಾರಿಗೂ ಪ್ಲೀಸ್ ಬನ್ನಿ ಅಂತ ಕೇಳೋಲ್ಲ. ನಾವು ಶುರು ಮಾಡಿದಾಗ 32 ಜನರಿದ್ವಿ, 31 ಜನರು ಹೋಗಿ ಆಯ್ತು ಇನ್ನ ನಾ ಒಬ್ಬ ಉಳಿದಿರೋದು. ಕಷ್ಟ ಇದೆ , ಕೆಲವು ರಾಜಕಾರಣಿಗಳು ಎಂಡೋಸಲ್ಫಾನ್ ಕೇಸ್ ನಲ್ಲಿ ನನ್ನ ಗಡಿಪಾರು ಮಾಡ್ತೇನೆ ಅಂತ ಬೆದರಿಕೆ ಒಡ್ಡಿದ್ದುಂಟು ಆದರೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಿದಾಗ ಬರೋ ಸಮಾಧಾನದ ಮುಂದೆ ಯಾವುದೂ ಇಲ್ಲ. I have enjoyed my life and all I wanted is to tell you how I enjoyed it. If you want to experience such an enjoyment , you can join in as a volunteer."  ಅಂತ ಹೇಳಿ ಮತ್ತೆ ನಮ್ಮಲ್ಲಿ vote of thanks , ಸ್ವಾಗತ ಭಾಷಣ ಎಲ್ಲ ಮಾಡೋಲ್ಲ , ಸಾಧ್ಯ ಆದ್ರೆ ಮತ್ತೆ ಸಿಗೋಣ” ಅಂತ ಹೇಳಿ ಮುಗ್ಸಿದ್ರು.
ಇತ್ತೀಚೆಗೆ ವಾರಾಂತ್ಯದಲ್ಲಿ ಊರು ಸೇರಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಕೃಷಿಯಲ್ಲಿ ಸಂತಸವಿರುವುದು ಸಹಜ ಜೊತೆಗೆ ಅದರಲ್ಲಿನ ಕಷ್ಟಗಳ ನೆನೆದರೆ ಮೈ ಬೆವರುತ್ತದೆ. ಆದರೆ 60 ರ ಹರೆಯದ ನನ್ನ ತಂದೆ ಹೊಲದಲ್ಲಿ ಅಂಗಿ ತೆಗೆದು ಮೈ ಬೆವರಿಳಿಸಿ ಕೆಲಸ ಮಾಡುವುದನ್ನ ನೋಡಿದರೆ ಎಂತ ಸೋಮಾರಿಗಳಿಗೂ ಕೆಲಸ ಮಾಡಲು ಮನಸ್ಸಾಗಿ ಬಿಡುವುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲ ಯೋಚಿಸಿದರು ಕಳೆದ ಭಾನುವಾರ ಹೆಂಡತಿಯ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ಉಳಿಯಬೇಕಾಯಿತು. ಅವಳ ಸ್ನೇಹಿತರೊಬ್ಬರು ಭಾನುವಾರ ಸಂಸ್ಕೃತಿ ಭವನದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಹೋಗಲೇಬೇಕೆಂದು ತಿಳಿಸಿದ್ದರಿಂದ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕೆಂಬುದು ಅವಳ ಇಚ್ಛೆಯಾಗಿತ್ತು.
ಇವೆಲ್ಲ ಯೋಚಿಸುತ್ತಾ ರಾತ್ರಿ ಮಲಗಿದ್ದು ತಡವಾದ ಕಾರಣ  ಭಾನುವಾರ ಬೆಳಿಗ್ಗೆ ತಡವಾಗಿ ಎದ್ದು ಗಡಿಬಿಡಿಯಿಂದ ಕಾರು ಚಲಾಯಿಸುತ್ತಾ ಮಲ್ಲೇಶ್ವರಂ ಕಡೆಗೆ ನುಗ್ಗಿದೆವು. ಸಂಸ್ಕೃತಿ ಭವನದ ಮೆಟ್ಟಿಲತ್ತಿದ ಮೊದಲೇ ಕಂಡದ್ದು ಕುಸುಮಬಾಲೆಯವರನ್ನು. ಬಹಳ ದಿನದಿಂದ ಸಹನಾಳ ಮುಖಾಂತರ ಇವರ ಬರಹಗಳನ್ನು ಓದುತ್ತಿದ್ದು ಇಂದಿಗೆ ಅವರ ವಿಜಯ ಕರ್ನಾಟಕದ ಕ್ರಾಸ್ ಕನೆಕ್ಷನ್ ಅಂಕಣದ ರೆಗ್ಯುಲರ್ ಓದಿಗ. ಮೂರ್ನಾಲ್ಕು ಬಾರಿ ಅವರ ಅಂಕಣದ ಕೆಳಗೆ ಕಮೆಂಟಿಸಿ ಅವರೊಡನೆ ಚರ್ಚಿಸಿದ್ದು ಇದೆ. ಸಹನಾ ಹೇಳಿದ್ದು ನಾವು ಡಾ . ರವೀಂದ್ರ ಶಾನುಭಾಗ್ ಅವರ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಎಂದಾದರೂ ನಾ ಬಂದದ್ದು ಕುಸುಮಕ್ಕನ ಜೊತೆ ಎರಡು ಮಾತನಾಡಿ ಹೋಗಲೆಂದು. ಕುಸುಮಕ್ಕನವರ ಜೊತೆ ಮಾತನಾಡಿ ಹೋಗುವುದೇನೋ ಸರಿ ಆದರೆ ನನ್ನ ನಾಚಿಕೆಗೇಡಿನ ಜನ್ಮಕ್ಕಿಷ್ಟು ನನಗೆ ಡಾ. ರವೀಂದ್ರ ಶಾನುಭಾಗ್ ಯಾರೆಂದೇ ಗೊತ್ತಿರಲಿಲ್ಲವೆಂಬುದರ ಕಾರಣ ನಾನಿಂದು ಈ ಮಹಾನುಭವನವರನ್ನು ಕಂಡು ಕೇಳಲು ಬಂದಿರುವ ಅವಕಾಶದ ಮಹತ್ವವೇ ತಿಳಿದಿರಲಿಲ್ಲ. ಸರಿ, ಕುಸುಮಕ್ಕನವರಿಗೇನೋ ಕಂಡು ನಮಸ್ಕರಿಸಿದೆ ಆದರೆ ಅವರ ಜೊತೆ ನಾನು ಸಂವಾದ ಮಾಡಲು ತಂದಿದ್ದ ಮೂರ್ನಾಲ್ಕು ವಿಷಯಗಳನ್ನು ತೆಗಡಿದಲು ಧ್ಯೇರ್ಯವೇ ಬರಲಿಲ್ಲ. ಈ ನನ್ನ ಪುಕ್ಕಲ ಮನಸನ್ನ ಶಪಿಸುತ್ತಾ ಒಳಗಡೆ ಹೋಗಿ ಕುಳಿತೆ. ಸಮಾನ ವಯಸ್ಸಿನವರಾರು ಕಾಣಲಿಲ್ಲ. ಎಲ್ಲ ಹಿರಿಯರು, ಸಾಧನೆಯ ವರ್ಚಸ್ಸು ಮುಖದಲ್ಲಿ ಎದ್ದು ಕಾಣುತ್ತಿತ್ತು ಆದರೂ ಅಲ್ಲಿರುವವರಿಗಿಂತ ಸಾಮಾನ್ಯ ಜನರು ಮತ್ತೆಲ್ಲೂ ಕಾಣುವುದಿಲ್ಲವೇನೋ ಅನ್ನುವಷ್ಟು ಸರಳರು ಅಲ್ಲಿ ಕುಳಿತಿದ್ದರು. ಅಲ್ಲೇ ಇದ್ದ ( ಪಂಚೆ )ಲುಂಗಿಯೊಂದನ್ನು ಗೋಡೆಗೆ ಅಂಟಿಸಿ ಅದನ್ನೇ ಪ್ರೊಜೆಕ್ಟರ್ ಸ್ಕ್ರೀನ್ ಮಾಡಿದ್ದರು. ಇಬ್ಬರು ಹಿರಿಯರು ಕಿಟಕಿಗೆಲ್ಲ ಬಟ್ಟೆ ಮುಚ್ಚಿ ಕತ್ತಲು ಬರಿಸಲು ಪ್ರಯತ್ನಿಸಿದ್ದರು. ಏನೂ ತಿಳಿಯದೆ ಮಂಕು ಬಡಿದು ಕೂತಿದ್ದವನಿಗೆ ಮತ್ತೆ ಏನೋ ಹೊಳೆದಂತಾಗಿ ಆ ಹಿರಿಯರ ಕೈ ಜೋಡಿಸಿ ಏಣಿ ಹತ್ತಿ  ಕಿಟಕಿಗಳನ್ನ ಮುಚ್ಚಿದೆ. 10.30 ಕ್ಕೆ ಕಾರ್ಯಕ್ರಮ ಶುರುವಾಗಬೇಕಿದ್ದು ಎಲ್ಲ ಜನರ ಆಗಮನದಿಂದ ತಡವಾಯಿತು. ಮತ್ತರ್ಧ ಘಂಟೆಯಲ್ಲಿ  ಬರಬೇಕಾದವರೆಲ್ಲ ಬಂದು ಸೇರಿದರು. ಆಗ ಕಂಡೆ ನನ್ನ ವಯಸ್ಸಿನವರು, ನನಗಿಂತ ಚಿಕ್ಕವರು, ರಾಜ್ಯ ಸರ್ಕಾರದ ಕೆಲಸ ಮಾಡಿ ನಿವೃತ್ತ ಹೊಂದಿದವರು, ಗೃಹಿಣಿಯರು, ಪತ್ರಕರ್ತರು, ರಾಜ್ಯ ಪ್ರಶಸ್ತಿ ಕಮಿಟಿಯವರು, ಯುವಕರು, ಯುವತಿಯರು, ಸಿನಿಮಾ ರಂಗದವರು , ವಿದ್ಯಾರ್ಥಿಗಳು ಉತ್ಸಾಹದಿಂದ ಕುಳಿತು ಸುಮಾರು ಅರವತ್ತೈದರ ಪ್ರಾಯದ ಉತ್ಸಾಹಿ ಯುವಕರೊಬ್ಬರನ್ನ ದಿಟ್ಟಿಸುತ್ತಿದ್ದರು. ಎರಡು ಕ್ಷಣದಲ್ಲಿ ಅವರೇ ಡಾ ರವೀಂದ್ರ ಶಾನುಭಾಗ್ ಎಂದು ತಿಳಿದೆ. ಒಂದು ಪ್ಲಾಸ್ಟಿಕ್ ಕುರ್ಚಿ ಒಂದು ಮೈಕು ಮತ್ತೊಂದು ಪ್ರೊಜೆಕ್ಟರ್ ಬಿಟ್ಟರೆ ಸಂಜೆವರೆಗೂ ಮೋಡಿ ಮಾಡಿದ್ದು ಡಾ ರವೀಂದ್ರ ಶಾನುಭೋಗ್ ಅವರ ಮಾತುಗಳು. ಸ್ವಾಗತ ಭಾಷಣವಿಲ್ಲದೆ ಶುರು ಮಾಡಿದ ಅವರು, ಅವರ ಜೀವನವನ್ನ ಹಂಚಿಕೊಂಡಾಗ ಬದುಕಿದರೆ ಇಂಥಹ ಬದುಕು ಬದುಕಬೇಕೆನಿಸಿತು.
ಸಿನಿಮಾಗಳಲ್ಲಿ ನಾಯಕರನ್ನ ನೋಡಿ ಚಪ್ಪಾಳೆ ತಟ್ಟಿದ್ದಿದೆ ಆದರೆ ಶಾನುಭಾಗ್ ಸರ್ ರವರನ್ನ ನೋಡಿ ಚಪ್ಪಾಳೆ ತಟ್ಟುವುದಕ್ಕಿಂತ ಆದದ್ದು ಭಾವನೆಗಳು ಉಕ್ಕಿ ಕಣ್ಣಲ್ಲಿ ನೀರು ಬಂದು ಇವರನ್ನ ನೋಡಿದ ಸಾರ್ಥಕ ಭಾವನೆ ಬಂದಂತ ಅನುಭವ ಮತ್ತೆ ಜೀವನದಲ್ಲಿ ಇಂತಹ ಹತ್ತು ಕೆಲಸವಾದರೂ ಮಾಡಿ ಸಾಯಬೇಕೆಂಬ ನಿಶ್ಚಯ. ಮಾತಿನಲ್ಲಿ ಹೇಳುವುದಕ್ಕಿಂತ ನಾಲ್ಕೈದು ಬಗೆಹರಿಸಿದ ಕೇಸ್ ಗಳನ್ನ ಹೇಳುತ್ತೇನೆ ಎಂದು ಶುರು ಮಾಡಿ ಹೇಳುತ್ತಾ ಹೋದಂತೆ ಶಾನುಭಾಗ್ ಸರ್ ರವರ ಸಾಹಸಕ್ಕೆ ಚಪ್ಪಾಳೆ ತಟ್ಟುವುದೋ ಅಥವಾ ಸರ್ಕಾರದ ಅಧಿಕಾರಿಗಳು ರಾಜಕಾರಣಿಗಳು ಮಾಡಿದ ಆಲಸ್ಯಕ್ಕೆ  ತಲೆ ಚಚ್ಚಿಕೊಳ್ಳುವುದೋ ತಿಳಿಯದೆ ಅವರ ಅನುಭವ ಕಥನ ಕೇಳುತ್ತಾ ನಮ್ಮ ಯೋಚನಾ ಲಹರಿ ಬೇರೆಯೇ ಒಂದು ಲೋಕಕ್ಕೆ ಹರಿದಿತ್ತು. ರಕ್ತ ಕುದ್ದಾಗ ಏನು ಮಾಡಬೇಕೆಂದು ತಿಳಿಯಲು ಡಾ. ರವೀಂದ್ರ ಶಾನುಭಾಗ್ ಸರ್ ರವರು ನಿರೂಪಿಸಿರುವ ಮೆಥಡಾಲಾಜಿ ತಿಳಿಯಬೇಕೆಂಬ ಹಂಬಲವಿದೆ. ಸದ್ಯಕ್ಕೆ ಸ್ವಲ್ಪ ಮುಂಚೆಯೇ ಅಂದುಕೊಂಡಿದ್ದ ಕೆಲಸಗಳಲ್ಲಿ ಸಿಲುಕಿದ್ದೇನೆ. ಸಾಧ್ಯವಾದಷ್ಟು ಬೇಗ ಇವರ ಮಾರ್ಗದರ್ಶನ ಪಡೆದೇ ಪಡೆಯುವೆ ಮತ್ತು ನಿಮ್ಮಲ್ಲರಿಗೂ ಸಾಧ್ಯವಾದರೆ ಅವರ ಇಂತಹ ಒಂದು ಸೆಷನ್ ಗೆ ಹೋಗಿ ಬನ್ನಿ ಎಂದು ವಿನಂತಿಸುತ್ತೇನೆ.  ಇಲ್ಲಿಯವರೆಗೂ ಯಾರಾದರೂ ಓದಿದ್ದರೆ ತಮಗೊಂದು ಧನ್ಯವಾದ. ಮತ್ತೆ ಸಿಗೋಣ.


-ಪುಟ್ಟಾರಾಧ್ಯ ಸಿದ್ದರಾಜ್