Monday, 1 September 2014

ಹನುಮಾನ್ ಬಸ್ ಹಿಂದಿನ ಹಳ್ಳಿ ಚೇಷ್ಟೆಗಳು


(ಪೀಠಿಕೆ: ಈ ಹನುಮಾನ್ ಬಸ್ ಎಂದೊಡನೆ ಗೊತ್ತಿಲ್ಲದವರು ಗಾಬರಿಯಾಗುವುದು ಬೇಡ. ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸೌಲಭ್ಯಗಳಿಲ್ಲದ ಕಾರಣ ಖಾಸಗಿ ಬಸ್ಗಳದ್ದೇ ಕಾರುಬಾರು. ಅಲ್ಲಿಗೆ ಬರುವ ಎಲ್ಲ ಬಸ್ಗಳನ್ನು ಒಂದೊಂದು ಹೆಸರುಗಳಿಂದ ಗುರುತಿಸುತ್ತಾರೆ. ನಮ್ಮೂರಿಗೆ  ಬರುತ್ತಿದ್ದ ಕೆಲವು ಬಸ್ ಗಳ ಹೆಸರು ಹೀಗಿದೆ ನೋಡಿ. ಗುರಾಜ ಬಸ್ಸು (ಗುರುರಾಜ), ಕಪ್ಪಲ್ ನರಿ ಬಸ್ಸು (ಕಾರಣ ಆ ಬಸ್ ಹಿಂದಿದ್ದ ನರಿಯ ಚಿತ್ರ), ಪ್ರಸಾದ ಬಸ್ಸು, ಕಡಬ ಬಸ್ಸು, ಇತ್ಯಾದಿ. ಸರಿ ಇಲ್ಲಿಂದ ಶುರು ಮಾಡೋಣ ನಮ್ಮ ಈ ಚೇಷ್ಟೆಯ ಕಥೆಯನ್ನ!!!)

ನಾಲ್ಕರವರೆಗೂ ಇಂಗ್ಲೀಷ್ ಭಾಷೆಯ ಸುದ್ದಿಗೆ ಹೋಗದ ನಾನು ಐದನೇ ತರಗತಿಯಿಂದ ಇಂಗ್ಲೀಷ್ ಕಡ್ಡಾಯವಾಗಿ ಕಲಿಯಲೆಬೇಕಿತ್ತು. ಅಲ್ಲಿಯವರೆಗೂ ಎ ಬಿ ಸಿ ಡಿ ಬಿಟ್ಟು ಬೇರೇನೂ ಗೊತ್ತಿಲ್ಲದ ಸರ್ಕಾರಿ ಶಾಲೆಯ ಮಕ್ಕಳಾದ ನಮಗೆ ಇಂಗ್ಲೀಷ್ ಕಲಿಸುವ  ಜವಬ್ದಾರಿ ಕಲ್ಲಪ್ಪ  ಮಾಸ್ಟರ್ ಮೇಲಿತ್ತು. ಮಾಸ್ಟರ್ ಬಹಳ ಶಿಸ್ತಿನ ಮನುಷ್ಯರಾಗಿದ್ದರು. ಕಲಿಯದೇ ಹೊರಹೋಗಲು ಅವಕಾಶವನ್ನೇ ಕೊಡುತ್ತಿರಲಿಲ್ಲ. ಮೊದಲ ವರ್ಷದಲ್ಲೇ ನಮಗೆ ಬಹಳ ಚೆನ್ನಾಗಿ ಭಾಷೆಯ ಮೂಲ ವ್ಯಾಕರಣ ಮತ್ತು ವಾಕ್ಯಗಳನ್ನು ರಚಿಸುವ ವಿಷಯಗಳ ಮೇಲೆ ಹಿಡಿತ ಸಾಧಿಸುವ ಕಲೆಯನ್ನು ರೂಢಿಸಿದ್ದರು. ಹೀಗೆ ನಾ ಕಂಡ ಅತ್ತ್ಯುತ್ತಮ ಗುರುಗಳಲ್ಲಿ ಕಲ್ಲಪ್ಪ ಮಾಸ್ಟರ್ ಕೂಡ ಒಬ್ಬರು. ಒಂದು ವರ್ಷ ಅವರು ತಿಳಿ ಹೇಳಿದ ನಂತರ ಆರನೇ ತರಗತಿಗೆ ಉತ್ತಮ ಅಂಕಗಳನ್ನೇ ಪಡೆದು ತೇರ್ಗಡೆಗೊಂಡಿದ್ದೆವು. ಆರನೇ ತರಗತಿಯ ಮೊದಲ ಇಂಗ್ಲೀಷ್ ಪರೀಕ್ಷೆಯದು. ನಾ ಬೇರೆ ಆರನೇ ಕ್ಲಾಸಿಗೆ ಮಾನಿಟರ್ ಆದ್ದರಿಂದ ಬೇಗ ಬರೆದು ಮುಗಿಸಿ ಎಲ್ಲರಿಂದಲೂ ಉತ್ತರ ಪತ್ರಿಕೆಗಳನ್ನು ವಾಪಸ್ ಪಡೆಯುತ್ತಿದ್ದ್ದೆ. ಶಾಲೆ ಮುಗಿಸಿ ಮನೆಗೆ ಹೊರಡುವ ಸಮಯವಾಗಿತ್ತು . "ಲೇ ಓಡ್ರೋ, ಹನುಮಾನ್ ಬಸ್ ಅವಾಗ್ಲೇ ಬಸ್ಟಾಂಡ್ ಬಿಟ್ನಂತೆ" ಕೂಗಿದ್ದ ಸಿದ್ದ. 
 ನಮ್ಮೂರಿನ ಶಾಲೆ ಬರೀ ನಾಲ್ಕರವರೆಗೆ ಇದ್ದಿದ್ದರಿಂದ ಅಪ್ಪ ನನ್ನನ್ನು ಐದನೇ ತರಗತಿಗೆ ನಮ್ಮ ಪಕ್ಕದ ಊರಿನ ಶಾಲೆಗೆ ಸೇರಿಸಿದ್ದರು. ಆದ್ದರಿಂದ ನಮ್ಮದು ಪ್ರತಿದಿನ ಓಡಾಟ, ಬೆಳಿಗ್ಗೆ ಎದ್ದರೆ ಮನೆಯಿಂದ  ಎರಡು ಕಿಲೋಮೀಟರ್  ನಡೆದು ಶಾಲೆಗೆ  ತಲುಪುತ್ತಿದ್ದೆವು. ಪಟ್ಟಣದ ಮಕ್ಕಳಂತೆ ಅಂದು ನಮಗೆಲ್ಲ ಸೈಕಲ್ ಕೊಡಿಸುತ್ತಿರಲ್ಲಿಲ್ಲ ಬಿಡಿ, ಸೈಕಲ್ ಏನಿದ್ದರು ಹೈಸ್ಕ್ಕೂಲ್ಗೆ ಹೋಗುವಾಗ ಮಾತ್ರ ಆದ್ದರಿಂದ ಪ್ರತಿದಿನ ಶಾಲೆ ಬಿಡುವ ಸಮಯದಲ್ಲೇ ಬರುತ್ತಿದ್ದ  ಹನುಮಾನ್  ಬಸ್ ಸಿಕ್ಕರೆ ಹಣ ಕೊಡದೆ ಪುಕ್ಕಟೆ ಪ್ರಯಾಣ ಮಾಡುವುದು ಇಲ್ಲದಿದ್ದರೆ ಅದರ ಹಿಂದೆ ಓಡುವುದು ಸಾಮಾನ್ಯವಾಗಿತ್ತು. ಅಂದು ಎಲ್ಲರ ಉತ್ತರ ಪತ್ರಿಕೆಗಳನ್ನು ವಾಪಸ್ ಪಡೆದು ಕಲ್ಲಪ್ಪ ಮಾಸ್ಟರ್ ಕೈಗೆ ಒಪ್ಪಿಸಿ ಬರುವಷ್ಟರಲ್ಲಿ ಬಸ್ಸು ತಪ್ಪಿಹೋಗಿತ್ತು. ಹಳ್ಳಿಯ ಮಕ್ಕಳಿಗೆ ಓದುವುದಕ್ಕಿಂತ ಓಡುವುದೆಂದರೆ ಬಲು ಆಸಕ್ತಿ , ಬಸ್ ತಪ್ಪಿದರೇನು ಅದರ ಹಿಂದೆಯೇ ಓಡಿ ನಮ್ಮೂರು ತಲುಪುವಷ್ಟರಲ್ಲಿ ಮುಟ್ಟಲೇ ಬೇಕು ಎಂಬ ಛಲ ಮಕ್ಕಳಲ್ಲಿ.
                     ಈ ಛಲ ಎಂದಾಗ ನೆನಪಾಯ್ತು ನೋಡಿ, ನಿಮಗೆ ಮಕ್ಕಳನ್ನು ಹಳ್ಳಿಗಳಲ್ಲಿ ಬೆಳೆಸುವುದರಿಂದ ಬಹಳ ಉಪಯೋಗಗಳಿವೆ. ಹಳ್ಳಿ ಜೀವನ ಸಾಕಷ್ಷ್ಟು ಪಾಠ ಕಲಿಸಿಕೊಡುತ್ತದೆ. ಇಲ್ಲಿನ ತರ ಅಲ್ಲಿ ಯಾವುದೂ ಸುಲಭವಲ್ಲ, ಎಲ್ಲವನ್ನೂ ಕಷ್ಟ ಪಟ್ಟೇ ಕಲಿಯಬೇಕು. ನೀವು ಯಾವ ವಿದ್ಯೆಯನ್ನಾದರೂ ತೆಗೆದುಕೊಳ್ಳಿ ಅಲ್ಲಿ ಕಲಿತಿದ್ದು ಕೊನೆವರೆಗೆ ಆದರೆ ಇಲ್ಲಿ ಕಲಿಯುವುದು ಅವಶ್ಯಕತೆಗೆ. ಉದಾಹರಣೆಗೆ ಅಲ್ಲಿ ಈಜು ಕಲಿಯಲು ಯಾವ ಸ್ವಿಮ್ಮಿಂಗ್ ಪೂಲ್ಗಳಿರುವುದಿಲ್ಲ , ಕಲಿಯಲು ಬೀಳುವುದು ಆಳವಾದ ಬಾವಿಗಳಿಗೆ!!. ಅಲ್ಲಿ ನೀವು ಕಲಿತರೆ ಎಲ್ಲಿಯಾದರೂ ಈಜಿ ದಡ ಸೇರುವುದು ಬಹಳ ಸುಲಭ. ಹಾಗೆಯೇ ಎಲ್ಲವೂ ಕೂಡ, ಎಂತ ಕಷ್ಟ ಬಂದರೂ ಬದುಕಿ ಬರುವ ಮಾನಸಿಕ ಸಾಮರ್ಥ್ಯ ಕೂಡ ನಿಮಗೆ ಚಿಕ್ಕಂದಿನಿಂದಲೇ ಬರುವುದು ಸಹಜ. ಆದ್ದರಿಂದ ನಿಮಗೆ ಮಕ್ಕಳಿದ್ದರೆ ರಜೆಗಳಲ್ಲಾದರೂ ಅವರಿಗೆ ಹಳ್ಳಿ ಜೀವನ ತೋರಿಸಿಕೊಡಿ ಎನ್ನುವುದು ನನ್ನ ಅಭಿಪ್ರಾಯ.ಸರಿ ಬಿಡಿ ನೀವು ನನ್ನನ್ನು ಯಾಕಪ್ಪ ಇವ್ನು ಈ ತರ ಎಲ್ಲಾ ಪುಕ್ಕಟೆ ಉಪದೇಶ ಕೊಡ್ತಾ ಇದಾನೆ ಅನ್ನೋ ಅಷ್ಟರಲ್ಲಿ ಮತ್ತೆ ನಮ್ಮ ಹನುಮಾನ್ ಬಸ್ ಕಡೆ ಬರೋಣ.  
                                                  ಆಗಿನ ಸಮಯದಲ್ಲಿ ರಸ್ತೆಗಳಿಗಿಂತ ಕಾಲು ದಾರಿಗಳೇ ಲೇಸಾಗಿರುತ್ತಿದ್ದವು. ಕಾರಣ ನಮಗೆ ಆಗಲೇ  ಗುಂಡಿಗಳಲ್ಲಿ  ರಸ್ತೆಯನ್ನು ಹುಡುಕಿದ ಅನುಭವ. ಮಣ್ಣಿನ ರಸ್ತೆ , ರಸ್ತೆ ತುಂಬ ಗುಂಡಿಗಳು ಇವೆಲ್ಲ ಸೇರಿ ಆ ಡ್ರೈವರ್ಗೆ ನಿಧಾನವಾಗಿ ಓಡಿಸದೆ ಬೇರೆ ಅವಕಾಶವೇ ಇರಲಿಲ್ಲ. ಇದೆಲ್ಲ ಯೋಚಿಸೆಯೇ ಶುರು ಮಾಡಿದೆ ಬಸ್ ಹಿಂದೆ ಓಡಲು, ಬಸ್ನಲ್ಲಿದ್ದ ನನ್ನ ಸ್ನೇಹಿತರು ಕೂಗಿ ಕರೆಯುತ್ತಿದ್ದರು, ಇದರಿಂದ ನನ್ನ ಗತಿ ಮತ್ತಷ್ಟು ಹೆಚ್ಚಿಸಿಕೊಂಡು ಓಡಿದ್ದೆ. ಬಸ್ಸು ನಮ್ಮೂರಿಗೆ ತಲುಪಿ ಬಸ್ಟ್ಯಾಂಡ್ ನಲ್ಲಿ ನಿಂತಿರುವುದು ನನಗೆ ಕಾಣಿಸುತ್ತಿತ್ತು. ನನ್ನ ಸ್ನೇಹಿತರೆಲ್ಲಾ ಬಸ್ ಇಳಿದು ನನಗೆ ಹುರಿದುಂಬಿಸುತ್ತಿದ್ದರು. ಅದರಲ್ಲೂ ಸಿದ್ದ ಕೂಗುತ್ತಿದ್ದಿದ್ದು ಇಂದಿಗೂ ನೆನಪಿದೆ. "ಓಡು ಓಡು ಆರಾಧ್ಯಾ!, ಮುಂದುಕ್ಕೊಗ್ತಾವ್ನೆ ಆಗ್ಲೇ!! ಇವತ್ ಬಿಟ್ರೆ ಇನ್ನೊಂದಿನ ಕಷ್ಟ". ಕೊನೆಗೂ ಓಡಿ ಬಸ್ ಹಿಂದಿನ ಏಣಿಗಳನ್ನು ಮುಟ್ಟಿದ್ದೆ. ಅಲ್ಲಿಗೆ ನನಗೆ ಜೀವಮಾನದ ಸಾಧನೆ ಮಾಡಿದಷ್ಟು ಸಂತಸವಾಗಿತ್ತು. ದಿನ ಇಂತಹ ಒಂದು ಸಾಹಸ ಮಾಡದೆ ಜೀವನ ಕಳೆಯುವುದು ಅಪರೂಪದ ಮಾತು. ಹೀಗೆ ಒಂದು ದಿನ ಹನುಮಾನ್ ಬಸ್ ನ ಕಂಡಕ್ಟರ್ ಪೂಜಾರಣ್ಣ ಶಾಲೆಯ ಮಕ್ಕಳನ್ನು ಹತ್ತಿಸಲು ಹಿಂದೆ ಮುಂದೆ ನೋಡಿದ್ದ ಕೊನೆಗೆ ಹತ್ತಿಸದೆ ಹಾಗೆಯೇ ಹೋಗಿದ್ದ. ಇದರಿಂದ ನಮ್ಮ ಕೋಪ ಮುಗಿಲು ಮುಟ್ಟಿತ್ತು.ಏನಾದರೂ ಒಂದು ಮಾಡಲೇಬೇಕೆಂದು ಯೋಚಿಸಿ ಸರಿಯಾದ ಸಮಯ ಕಾದು ಶಾಲೆ ಬೇಗ ಮುಗಿಸಿ ನಮ್ಮೂರಿನ ಅರ್ಧ ದಾರಿಯವರೆಗೂ ಒಂದೇ ಉಸಿರಿನಲ್ಲಿ ಓಡಿದ್ದೆವು. 
                                 ರಸ್ತೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ರಸ್ತೆ ಬದಿಯಲ್ಲಿದ್ದ ಎಲ್ಲ ಕಲ್ಲುಗಳನ್ನು ಅಡ್ಡವಾಗಿ ಜೋಡಿಸಿ ಅಲ್ಲೇ ಮರದ ಹಿಂದೆ ಬಚ್ಚಿಟ್ಟುಕೊಂಡು ಕಾಯುತ್ತ ನಿಂತಿದ್ದಾಗ ಹತ್ತು ನಿಮಿಷ ಕಳೆದು ಬಸ್ ಬರುವುದು ಕಾಣಿಸಿತು. ಹೇಗಾದರಾಗಲಿ ಎಂದು ಮೊದಲೇ ಅನಾಹುತವನ್ನು ಅರಿತು ಅಲ್ಲಿಂದ ಕಾಲ್ಕೀಳಲು ತಯಾರಾಗಿ ನಿಂತಿದ್ದೆವು. ಹನುಮಾನ್ ಬಂದು ಮುಂದೆ ಹೋಗಲು ಜಾಗವಿಲ್ಲದೆ ಅಲ್ಲಿ ನಿಂತಿತು. ಈ ಪೂಜಾರಣ್ಣ ಬೇರೆ ಸಾಮಾನ್ಯದವನಲ್ಲ,ಇಳಿದವನೇ ಜಾಗ ಮಾಡುವ ಬದಲು ಯಾರು ಮಾಡಿದ್ದು ಎಂದು ಹುಡುಕಲು ಶುರು ಮಾಡಿದ್ದ , ಆಗ ಸಿದ್ದ ಮತ್ತೆ ಕೂಗಿದ " ಅಯ್ಯಯ್ಯೋ ಓಡ್ರಲೇ ಪೂಜಾರಿ ಬರ್ತಾವ್ನೆ" ಎಂದು. ಅವನನ್ನು ನೋಡಿ ಮತ್ತೆ ಓಡಲು ಶುರು. ಅಂದು ಎಲ್ಲಿಂದ ಎಲ್ಲಿಯವರೆಗೂ ಓಡಿದ್ದೆವೋ ಯಾರಿಗೂ ತಿಳಿದಿರಲಿಲ್ಲ. ಇದೆಲ್ಲಾ ಮಾಡಿ ಸ್ವಲ್ಪ ತಡವಾಗಿ ಮನೆಗೆ ತಲುಪಿದಾಗ ಅಮ್ಮ ಬಹಳ ಸಮಾಧಾನದಿಂದ ಕುಳಿತು ಏನೋ ಯೋಚಿಸುತ್ತಿದ್ದಳು. ನನ್ನ ನೋಡಿದ ತಕ್ಷಣ ಅವಳ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಈ ಹಠಾತ್ ಭಾವೋದ್ರೇಕವನ್ನು ನೋಡಿ ಒಂದು ಕ್ಷಣ ವಿಚಲಿತಗೊಂಡಿದ್ದೆ. ಆದರೆ ಅಮ್ಮ ಸಮಾಧಾನದಿಂದಲೇ  ನನ್ನನ್ನು ದೇವರ ಮನೆಗೆ ಕರೆದು ತೋರಿಸಿದ್ದು ನವೋದಯ ಶಾಲೆಗೆ ಸೇರಿಕೊಳ್ಳಲು ಬಂದ ಅನುಮತಿ ಪತ್ರ!! 
                                                                        ನಾ ಹಿಂದಿನ ಬರಹಗಳಲ್ಲಿ ಹೇಳಿರುವುದು ನಿಮಗೆ ನೆನಪಿದೆಯೆಂದು ತಿಳಿದಿರುತ್ತೇನೆ, ಈ ಅಮ್ಮಂದಿರೇ ಹೀಗೆ, ಅವಳ ಮಕ್ಕಳಿಗೆ ಶಾಲೆಯಲ್ಲಿ ಸಾಮಾನ್ಯವಾಗಿ ನಡೆದ ಆಟೋಟದಲ್ಲಿ ೧೦೦ ಮೀಟರ್ ಓಡುವಾಗ ಪ್ರಶಸ್ತಿ ಬಂದರೆ ಅವಳಿಗೆ  ತನ್ನ ಮಗು ಒಲಿಂಪಿಕ್ಸ್ ಪದಕ ಗೆದ್ದಂತೆಯೇ ಸರಿ. ಅಂದು ಅವಳಿಗೆ ನಾ ಏನೋ ಬಹಳ ದೊಡ್ಡ ಕೆಲಸ ಮಾಡಿದ ಅನುಭವವಾಗಿತ್ತು. ನವೋದಯ ಶಾಲೆಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದು ಬೆಳಗಾಗುವಷ್ಟರಲ್ಲಿ ಇಡೀ ಊರಿಗೆ ಹಬ್ಬಿಸಿಬಿಟ್ಟಿದ್ದಳು. ಆದರೆ ನನಗೆ ಅದರ ಮಹತ್ವವೇನೆಂಬುದು ನವೋದಯ ವಿದ್ಯಾಲಯ ಶಾಲೆಯ ವ್ಯಾಸಾಂಗ ಮುಗಿದ ಮೇಲೆ ಮಾತ್ರ ತಿಳಿದಿದ್ದು ಆ ಪರೀಕ್ಷೆಯಲ್ಲಿ ನಾ ಪಾಸಾಗಿದ್ದು ನನಗೆ ಬಹಳ ಉಪಯೋಗವಾಗುತ್ತದೆಂದು. ಅಲ್ಲಿಂದ ನನ್ನ ಹಳ್ಳಿ ಜೀವನಕ್ಕೊಂದು ತೆರೆ ಎಳೆದಂತಾಯ್ತು ಆದರೇನಂತೆ ಅಲ್ಲಿ ಕಳೆದ ನನ್ನ ಬಾಲ್ಯದ ದಿನಗಳಲ್ಲಿ ಜೀವನಕ್ಕಾಗುವಷ್ಟು ಪಾಠಗಳು, ಸಂಗತಿಗಳು, ನಕ್ಕು ನಲಿದ ಸಂಧರ್ಭಗಳು, ಚೇಷ್ಟೆ ಮಾಡಿದ ನೆನಪುಗಳು ಇಂದಿಗೂ ನನ್ನಲ್ಲಿವೆ. ಸಾಧ್ಯಾವಾದಾಗ ಕೆಲವನ್ನು ಆಯ್ದು ಇಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ.

ನಿಮಗೆ ಈ ಬರಹ ಇಷ್ಟವಾದಲ್ಲಿ ಮುಂದಿನ ಬರಹಗಳಿಗೆ ಈ ಫೇಸ್ಬುಕ್ ಪೇಜ್ ಲೈಕ್ ಮಾಡಿ> https://www.facebook.com/LifeAndLeisureBlog 

No comments:

Post a Comment