ಈ ಚಳಿಗಾಲ ಒಂಥರಾ ಸುಖ ನೋಡಿ ! ಕೊರೆಯುವ ಚಳಿಯಲ್ಲಿ ಬೆಚ್ಚನೆ ಹೊದಿಕೆ ಹೊದ್ದು
ಮುಲುಗುತ್ತಾ ಮಲಗಿದ್ದರೆ ಆ ಪರಮಾತ್ಮನೇ ಬರಬೇಕು ಎದ್ದೇಳಿಸಲು. ಆದರೆ ಈ ವಯಸ್ಸು ಬೇರೆ ಇಪ್ಪತ್ತೆಂಟರ
ಆಸುಪಾಸು, ಮನೆಯಲ್ಲಿ ಮದುವೆಯ ಗೋಳು, ಇಲ್ಲಿಗಾಗಲೇ ಎಂಟತ್ತು ವರ್ಷ ದಂಡಿಸದೆ ಬೆಳೆಸಿದ ದೇಹ, ಈ ಹುಡುಗಿಯರ
ಇಲ್ಲ ಸಲ್ಲದ ಆ ಹುಡುಗರ ಮೇಲಿನ ಆಸೆಗಳು, ಇಂತಹ ಹುಡುಗಿಯರ ಕನಸಿನ ರಾಜಕುಮಾರನಾಗುವ ಮೂರ್ಖ ಹುಡುಗರ
ಕನಸುಗಳು, ಹೀಗೆ ಎಲ್ಲ ಸೇರಿ ಇಷ್ಟವಾಗದಿದ್ದರೂ ನನ್ನಂತಹ ಮೂವರ ಮೂರ್ಖ ಸ್ನೇಹಿತರ ಜೊತೆಗೂಡಿ ಹತ್ತಿರದ
ಉದ್ಯಾನವನದಲ್ಲಿ ಎರಡು ಕಿಲೋಮೀಟರ್ ಓಡಿದಾಗಲೇ ಅನುಭವವಾದದ್ದು ಆ ಬೆಳಗಿನ ಸುಂದರ ಸ್ವಚ್ಛ
ವಾತಾವರಣದ ವಿಶಿಷ್ಟ ಮೋಡಿ.
ಹೀಗೆ ಅಪರೂಪಕ್ಕೆ ಶುರು ಮಾಡಿದ ಈ ಹವ್ಯಾಸ
ಮನಸ್ಸಿಗೆ ತುಂಬಾ ಹತ್ತಿರವಾಗಲು ಕಾರಣ ಹಲವು. ಎರಡು ಕಿಲೋಮೀಟರ್ ಓಡಿ, ಕೈ ಕಾಲು ಅಲ್ಲಾಡಿಸಿ , ತಿಣುಕಾಡುತ್ತಲೆ
ಜಿಮ್ ಸೇರಿರುವ ಮಿತ್ರರು ಹೇಳಿಕೊಟ್ಟ ಮೂರ್ನಾಲ್ಕು
ವ್ಯಾಯಾಮ ಮಾಡುವಷ್ಟರಲ್ಲಿ ಹಾಕಿದ ಅಂಗಿ ನೆಂದು ನೀರಾಗಿರುತ್ತದೆ.
ಇದೇ ಸುಸ್ತಿನಲ್ಲಿ ಬಂದು ಫ್ಯಾಶನ್ ಕಾಲೇಜಿನ ಮೂಲೆಯಲ್ಲಿರುವ ಮಲೆಯಾಳಿ ಚೇಟ್ಟನ ಜ್ಯೂಸ್ ಅಂಗಡಿಯಲ್ಲಿ
ಒಂದು ತಣ್ಣನೆ ತಾಜಾ ನಿಂಬೂ ರಸ ಕುಡಿದರೆ ಅಲ್ಲಿಗೆ ನಾಲಿಗೆಯಲ್ಲಿರುವ ಅಷ್ಟೂ ರುಚಿ ಮೊಗ್ಗುಗಳಿಗೂ ಮಹದಾನಂದ. ಇದೆಲ್ಲಾ ಮುಗಿಸಿ ಬಂದು ಮನೆಯ ಮುಂದೆ ಬ್ಯಾಡ್ಮಿಂಟನ್
ಆಡುವುದು ಮತ್ತಷ್ಟು ಮನಸ್ಸಿಗೆ ಮುದ ನೀಡುತ್ತದೆ.
ನಾ ಮೇಲೆ ಹೇಳಿರುವಂತೆ ಭಾರತೀಯ ಫ್ಯಾಶನ್ ತಂತ್ರಜ್ಞಾನ ಕಾಲೇಜು ಅಲ್ಲೇ ಇರುವುದರಿಂದ ನಮ್ಮ ಮನೆ ಸುತ್ತ
ಮುತ್ತ ಕಾಲೇಜು ಹುಡುಗರು ಹುಡುಗಿಯರದೇ ಕಾರುಬಾರು.ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಂತೆ
ಪ್ರಮುಖ ವೃತ್ತಿಪರ ಕೋರ್ಸ್ಗಳಾದ ಇಂಜಿನೀಯರಿಂಗ್ ಮತ್ತು ವ್ಯೆದ್ಯಕೀಯ ಶಿಕ್ಷಣವನ್ನು ಆರಿಸದೇ ಇಂತಹ
ವಿಭಿನ್ನ ಶಿಕ್ಷಣವನ್ನು ಆರಿಸಿದ್ದಾರೆ ಎಂದರೆ ಒಂದು ವಿಷಯವಂತೂ ಸತ್ಯ, ಅವರ ಕುಟುಂಬಗಳು ಸಾಮಾನ್ಯವಾಗಿ
ಉತ್ತಮ ವರ್ಗಕ್ಕೆ ಸೇರಿರುತ್ತವೆ. ನಾ ಇದನ್ನ ಉಲ್ಲೇಖಿಸಿದ ಕಾರಣವೇನೆಂದರೆ ಅಂತಹ ವಿಧ್ಯಾರ್ಥಿಗಳಿಗೆ
ಮೊದಲಿನಿಂದಲೂ ಮನೆಯಲ್ಲಿ ನಾಗರೀಕತೆ, ಶಿಸ್ತಿನ ಅನುಭವವಿರುತ್ತದೆ ಎಂದು ತಿಳಿಸಲು. ಈ ನಾಗರೀಕತೆ ಇರುತ್ತದೆಯೋ
ಇಲ್ಲವೋ ಎಂದು ಆಮೇಲೆ ತೀರ್ಮಾನಿಸೋಣ ಬಿಡಿ.
ಅಂದು ದಿನನಿತ್ಯದಂತೆ ವ್ಯಾಯಾಮ ಮುಗಿಸಿ ಬಂದು
ಮನೆ ಮುಂದಿರುವ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಟ ಶುರು ಮಾಡಿದ್ದೆವು. ಕಾಲೇಜು ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ
ಮನೆಯಿಂದ ಆಚೆ ಬಿದ್ದು ಕಾಲೇಜಿಗೆ ಹೋಗತೊಡಗಿದ್ದರು. ಆಗ ನಡೆದ ಘಟನೆಯಿಂದ ನನ್ನ ಮಿತ್ರ ಶಿಸ್ತಿನ ಸಿಪಾಯಿ
ಶಾವಿ ರೊಚ್ಛಿಗೆದ್ದಿದ್ದ. "ಏನ್ ಮಚ್ಚಾ ಇವ್ರು!!
ಓದ್ತಾ ಇದಾರೆ, ಮನೇಲಿ ಅಪ್ಪ ಅಮ್ಮ ಮೊದ್ಲಿಂದನೂ ಶಿಸ್ತು ಹೇಳಿರ್ತಾರೆ. ಒಳ್ಳೆ ಅನಾಗ್ರಿಕ್ರು ತರ ಆಡ್ತಾವ್ರಲ್ಲಾ ಥೂ ಇವರ ಮುಖಕ್ಕೆ " ಕಾರಣ ಪಕ್ಕದ
ಮನೆಯ ಹುಡುಗಿಯೊಬ್ಬಳು ನಾವು ನೋಡು ನೋಡುತ್ತಿರುವಂತೆಯೇ ಅವಳ ಮನೆಯ ಪ್ಲಾಸ್ಟಿಕ್ ಕಸವನ್ನು ನಮ್ಮ ಮನೆಯ
ಮುಂದೆ ಎಸೆದಿದ್ದಳು. ಕೆಳಗೆ ಕಸ ಎಸೆಯಲೆಂದೇ ಜಾಗವಿರುವುದುಂಟು ಅಲ್ಲಿಯಾದರೂ ಎಸೆಯಬಹುದು ಇಲ್ಲದಿದ್ದರೆ
ಅವಳ ಮನೆ ಮುಂದಿನ ಬಾಲ್ಕನಿಯಲ್ಲಿ ಇರುವ ಜಾಗದಲ್ಲಿಯಾದರೂ ಇಡಬಹುದು. ಇವೆರಡು ಮಾಡದೆ ನಮ್ಮ ಮನೆಯ ಮುಂದಿನ
ರಸ್ತೆಗೆ ಎಸೆದರೆ ಇವರನ್ನು ನಾವು ತಿಳುವಳಿಕೆ ಇದ್ದೂ ಇಲ್ಲದಂತೆ ಆಡುವ ಅನಾಗರಿಕರೆನ್ನೋಣವೇ ಇಲ್ಲ, ತಿಳಿಯದೇ ಮಾಡಿದ ಅಮಾಯಕರೆನ್ನಲೇ ನನಗಂತೂ ತಿಳಿಯದು
!!! ನಮಗೆ ಬೇರೆ ಈ ಹುಡುಗಿಯರ ಮೇಲೆ ಉಕ್ಕಿ ಹರಿಯುವಷ್ಟು ಕರುಣೆ ನೋಡಿ ಆದ್ದರಿಂದ ಸರಿ ಬಿಡು ಮೊದಲ
ಸಲವಲ್ಲವೇ ಮತ್ತೆ ಹೀಗೆ ಮಾಡಿದರೆ ನೋಡಣ ಬಿಡು ಎಂದು ಯೋಚಿಸಿ ಅಲ್ಲಿಗೆ ಅದನ್ನು ಬಿಟ್ಟಿದ್ದಾಯಿತು.
ಅಂದು ಸರಿ ಸುಮಾರು ಆರೂವರೆ ಘಂಟೆ, ಬೆಳಗಿನ ಚಳಿಗೆ ಬೆಚ್ಚಗೆ ಮಲಗಿದ್ದ ನಮಗೆ ಎಚ್ಚರವಾಗಿದ್ದು
ಪಕ್ಕದಲ್ಲೇ ಮಲಗಿದ್ದ ಯಾರೋ ಮಿತ್ರನೊಬ್ಬ ಬೈಗುಳ ಶುರು ಮಾಡಿದಾಗ " ಲೇ ಯಾರು ಅವಾಗ್ಲಿಂದ ಹಿಂಗೆ
ಶಬ್ದ ಮಾಡ್ತಿದಿರಾ, ಥೂ ನನ್ಮಕ್ಳ ತಿಂದ್ಮೆಲೆ ಸರ್ಯಾಗಿ ನೀರು ಕುಡಿಬೇಕು ಅಂತ ಗೊತ್ತಾಗಲ್ವಾ; ಈ ಅಲಾರಾಮ್
ಬೇಡವೆ ಬೇಡ ಗುರು ನಿಮ್ಮಂತವ್ರು ಒಬ್ರು ಇದ್ರೆ ಸಾಕು ಮನೇಲಿ". ಎಲ್ಲೋ ದೂರದಲ್ಲಿ ಶಬ್ದ ಕೇಳಿಸುತ್ತಿತ್ತು. ಅದು ಏನು ಎಂದು ಯೋಚನೆ ಮಾಡುವಷ್ಟು ಎಚ್ಚರ
ಇರಲಿಲ್ಲ. ಆದ್ದರಿಂದ ಹಾಗೆ ಒದ್ದಾಡುತ್ತಲೇ ಮಲಗಿದ್ದೆವು.ಆಗ
ನನ್ನ ಸ್ನೇಹಿತ ಅಪ್ಪಿ ಅದನ್ನು ಸರಿಪಡಿಸಿದ "ಲೇ ಥೂ ! ಬೆಳಿಗ್ಗೆ ಬೆಳಿಗ್ಗೆನೆ ಎಂತಾ ಮಾತಾಡ್ತಾ
ಇದಿಯಾ ಸುಮ್ನಿರಪ್ಪ, ಹಿಂದೆ ಇರೋ ಮಿಲ್ಟ್ರಿ ಟ್ರೈನಿಂಗ್ ನಡಿತಾ ಇದೆ ಅಷ್ಟೇ. ಪ್ರತಿ ಗುರುವಾರ ಇರುತ್ತೆ,
ಶೂಟಿಂಗು, ಬಾಂಬ್ ಪ್ರಾಕ್ಟಿಸ್ ಇರುತ್ತೆ. ಏಳು ಸಾಕು
ಹೋಗೋಣ ಓಡೋಕೆ" . ಎಲ್ಲ ಒಂದ್ಸಲ ನಿದ್ದೇಲೆ ನಕ್ಕು ಎದ್ದಿದ್ದಾಯಿತು. ಮತ್ತೆ ಹಿಂದೆಯಿಂದ ಯಾರೋ
ಕೂಗಿದಂತಾಯ್ತು. ನಮ್ಮ ಮನೆ ಹಿಂದೆ ಇರುವುದು ಮಿಲ್ಟ್ರಿ ಟ್ರೈನಿಂಗ್ ಕ್ಯಾಂಪಸ್.
ಪ್ರತಿದಿನ ನಾನಾ ರೀತಿಯ ತರಬೇತಿ ನೀಡುವುದನ್ನು ಕೆಲವು ಸಲ ನಾವೂ ನೋಡಿದ್ದೇವೆ. ನಮ್ಮಸಾಲಿನಲ್ಲಿರುವ
ಮನೆಗಳಿಗೆ ಆ ಕ್ಯಾಂಪಸ್ ಗೋಡೆಯೇ ನಮ್ಮ ಕಾಂಪೌಂಡ್. ಆದ್ದರಿಂದ ಯಾರೋ ಅಲ್ಲಿನ ಅಧಿಕಾರಿಗಳೇ ಕೂಗಿರಬೇಕು
ಎಂದು ಕಿಟಕಿಯಿಂದ ಬಗ್ಗಿ ನೋಡಿದರೆ ಕಂಡದ್ದು ಸಮವಸ್ತ್ರ ಧರಿಸಿದ ಭಾರತೀಯ ಸೈನ್ಯದ ಅಧಿಕಾರಿ. ಪಕ್ಕದ ಮನೆಯ ಹುಡುಗರ ಮನೆಯ ಕೆಳಗೆ
ನಿಂತು ಕೂಗುತ್ತಿದ್ದರು. ಆ ಮನೆಯಲ್ಲಿಯೇ ಯಾರೋ ಮತ್ತೆ ಅದೇ ಅನಾಗರೀಕ ಕೆಲಸ ಮಾಡಿದ್ದರು. ತಮ್ಮ ಮನೆಯ
ಕಸವನ್ನು ಆ ಕ್ಯಾಂಪಸ್ ಒಳಗೆ ಎಸೆದಿದ್ದರಿಂದ ಅಧಿಕಾರಿ ಸ್ವಲ್ಪ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದರು.
" ಮಕ್ಕಳೇ ನಾವಿರುವುದು ನೀವು ಎಸೆಯುವ ಕಸ ಸ್ವಚ್ಚಗೊಳಿಸಲಲ್ಲ ಆದರೆ ದೇಶ ಕಾಯಲು. ಸ್ವಲ್ಪ ಜ್ಞಾನ
ಇರಲಿ!!! ".
ಇಲ್ಲಿ ದೇಶದ ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತಕ್ಕೆ ಕರೆ
ನೀಡುತ್ತಿದ್ದರೆ ನಾಗರೀಕರು, ವಿದ್ಯಾರ್ಥಿಗಳು, ಬುದ್ದಿಜೀವಿಗಳು ಇಂತಹ ಕೆಲಸ ಮಾಡಿದರೆ ಇನ್ನು ಅಮಾಯಕರ
ಕಥೆ ಹೇಗೆ?. ಇಲ್ಲಿ ನಾ ಯಾವ ಒಂದು ಗುಂಪಿನ ಕಡೆ ಬೆಟ್ಟು ಮಾಡಿ ತೋರಿಸುತ್ತಿಲ್ಲ ಕಾರಣ ಹೊಣೆ ಇಲ್ಲಿ
ಎಲ್ಲರದು. ಆ ರಸ್ತೆ ನಮ್ಮದಲ್ಲವೇ? ಆ ಅಧಿಕಾರಿಗಳು ನಮ್ಮನ್ನು ಕಾಯುತ್ತಿಲ್ಲವೇ? ನಾವು ನಿಲ್ಲುವ ಬಸ್
ನಿಲ್ದಾಣಕ್ಕೆ ಮತ್ತೆ ನಾವೆಂದು ಹೋಗುವುದಿಲ್ಲವೇ? ಈ ಭಾರತ ನಮ್ಮದಲ್ಲವೇ? ನಾವೇನೂ ಬುದ್ದಿವಂತರಲ್ಲವೇ?
ಏಕೆ ನಮ್ಮಲ್ಲಿಲ್ಲ ಆ ಸಾಮಾನ್ಯ ಪ್ರಜ್ಞೆ? ಬರಿ ನಾವು, ನನ್ನದು, ನಮ್ಮ ಮನೆ, ನನ್ನ ಜೀವನ ಎಂದರೆ ದೇಶದ
ಗತಿಯೇನು? ದಾರಿಯಲ್ಲಿ ಬರುವಾಗ ಕಂಡ ಕಸವನ್ನು ಎತ್ತಿ ಸರಿಯಾದ ಜಾಗದಲ್ಲಿ ಹಾಕಿದರೆ ತಪ್ಪೇನು? ಸದ್ಯಕ್ಕೆ
ಅಂತಹ ದೊಡ್ಡ ಕೆಲಸ ಮಾಡದಿದ್ದರೂ ಗಲೀಜು ಮಾಡದಿದ್ದರೆ ಸಾಕು, ಆ ಸಾಮಾನ್ಯ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಬಲು ಸಾಕು, ಅದೂ ಕೂಡ ದೊಡ್ಡ
ದೇಶ ಸೇವೆಯೆ. ಸದ್ಯದಲ್ಲೇ ಭಾರತದ ಪ್ರಧಾನ ಮಂತ್ರಿಗಳು ಸ್ವಚ್ಛ ಭಾರತದ ಆಂದೋಲನವನ್ನು ಶುರು ಮಾಡಲಿದ್ದಾರೆ.
ಧರ್ಮ, ಜಾತಿಯ ಭೇಧಭಾವಗಳಿಲ್ಲದೆ ಸಹಕರಿಸೋಣ, ಶುಚಿಯಾದರೆ ಆಗುವುದು ನಮ್ಮ ಕನಸಿನ ಸ್ವಚ್ಛ ಭಾರತ. ಮಹಾತ್ಮ ಗಾಂಧಿಯವರು
ಅಂದೇ ಹೇಳಿದ್ದರು "ಜಗತ್ತಿನಲ್ಲಿ ನೀ ಕಾಣಬೇಕಿರುವ ಬದಲಾವಣೆ ಮೊದಲು ನೀನಾಗು" (BE THE CHANGE YOU WANT TO SEE IN THE WORLD) ಬನ್ನಿ ಬೇರೆಯವರಿಗೆ ಮಾದರಿಯಾಗೋಣ, ಬನ್ನಿ ಭಾರತವನ್ನು ಸ್ವಚ್ಛ
ಮಾಡೋಣ, ಬನ್ನಿ ಪ್ರತಿಜ್ಞೆ ಮಾಡೋಣ, ಬನ್ನಿ ಬದಲಾವಣೆಯನ್ನು ತಂದು ತೋರಿಸೋಣ. ನಾವು ಭಾರತೀಯರು , ನಾವು
ನಾಗರೀಕರು ಎಂದು ಜಗತ್ತಿಗೆ ಕೂಗಿ ಹೇಳೋಣ.
ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಈ ಬ್ಲಾಗ್ ನ ಫ಼ೇಸ್ ಬುಕ್ ಪೇಜ್ ನಲ್ಲಿ ಒಂದು ಶೇರ್ ಮಾಡಿ ಮುಂದಿನ ಬರಹಗಳಿಗೆ ಇಲ್ಲಿ ಕ್ಲಿಕ್ಕಿಸಿ>> https://www.facebook.com/LifeAndLeisureBlog

No comments:
Post a Comment