ಭಯಾನಕ ಕತ್ತಲು ಆದರೆ ಭಯವಿಲ್ಲ, ಮನಸ್ಸು ಮುರಿದು ಮತ್ತೆ ಜೋಡಿಕೊಂಡಿತ್ತು ಆದರೆ ನೋವಿಲ್ಲ, ಮೊದಲು ಮನಸ್ಸಿಗೆ ನೋವು ತಂದುಕೊಡುತ್ತಿದ್ದ ಸನ್ನಿವೇಶಗಳು ಈಗ ನಗು ತಂದು ಕೊಡುತ್ತಿವೆ, ಭೀಕರ ಸಮಸ್ಯೆಗಳಂತೆ ಕಂಡ ವಿಷಯಗಳೆಲ್ಲ ಇಂದು ಒಂದೆ ಕ್ಷಣದಲ್ಲಿ ಮಾಯವಾಗುತ್ತಿವೆ. ಮನೆಯ ಮುಂದಿನ ರಸ್ತೆಯಲ್ಲಿರುವ ಮರದ ಕೆಳಗೆ ಕೂತು ಸ್ನೇಹಿತನ ಜೊತೆ ಒಂದು ಅರ್ಥಗರ್ಬಿತ ಮಾತುಕತೆಯಲ್ಲಿ ತೊಡಗಿದ್ದವನಿಗೆ ಒಂಥರಾ ಹೇಳ್ಬೇಕಂದ್ರೆ ಮೋಕ್ಷ ಸಿಕ್ಕಿ ಬಿಟ್ಟಿದೆ. ರೀ ಮೋಕ್ಷ ಅಂದ ತಕ್ಷಣ ಬುದ್ದನ್ನ ನೆನ್ಸ್ಕೊಂಡ್ರಾ!? ಇಲ್ಲ ಬಿಡಿ, ಮೋಕ್ಷ ಸಿಕ್ದೋರೆಲ್ಲ ಬುದ್ದ ಆಗ್ಬೇಕು ಅಂತೇನಿಲ್ಲಾ ಮತ್ತೆ ನಂಗೆ ಸನ್ಯಾಸಿ ಆಗೋಕೆ ಸುತಾರಂ ಯೋಚ್ನೆ ಇಲ್ಲ . ಅಪ್ಪ ಅಮ್ಮ ಇಬ್ರು ಸೇರಿ ಮನೆ ಕಟ್ಸಿ ಮದ್ವೆ ಮಾಡ್ಬಿಡ್ಬೇಕು ಅಂತ ಯೋಚ್ನೆ ಮಾಡ್ತಾ ಇದಾರೆ ಅಂತದ್ರಲ್ಲಿ ನೀವ್ ಬೇರೆ ಹಾಗೆಲ್ಲಾ ಯೋಚ್ನೆ ಮಾಡ್ಬಿಟ್ರೇನೋ ಅಂತ ಒಂದ್ಸ್ವಲ್ಪ ಯೋಚ್ನೆ ಆಯಿತು ಅಷ್ಟೇ. ಸಂಸಾರ ಅಂದ್ರೆ ಏನು ಅಂತ ಗೊತ್ತಾದ್ಮೇಲೆ ನೋಡ್ಕಾಂಡ್ರಾಯ್ತು ಬಿಡಿ. ವಿಷಯಕ್ಕೆ ಬರೋಣ, ಸರಿ ಸುಮಾರು ರಾತ್ರಿ ೨ ಘಂಟೆ ಆಗಿತ್ತು ನಮ್ಮ ಮಾತು ಕತೆ ಮುಗ್ಯೋಕೆ, ನಿದ್ದೆ ಬರ್ತಿಲ್ಲ. ನನ್ ತರನೇ ನನ್ನ ಮಿತ್ರ ರಾಕೇಶನು ಕೂಡ ಟಿ.ವಿ ಮುಂದೆ ಬಿದ್ದು ಅದನ್ನೇ ತಿನ್ನುವನಂತೆ ದಿಟ್ಟಿರಿಸಿ ನೋಡುತ್ತಿದ್ದ. ಇಬ್ಬರಿಗೂ ನಿದ್ದೆ ಬರದ ಕಾರಣ ಚಹಾ ಹೀರುವ ಮನಸ್ಸಾಯಿತು. ನಡುರಾತ್ರಿಯಲ್ಲಿ ಹೊರ ಬಿದ್ದು ಚಹಾ ಅಂಗಡಿ ಹುಡುಕುತ್ತಾ ಮೊನ್ನೆ ತಾನೇ ನನ್ನ ಸ್ನೇಹಿತ ಸೋಮ ಹೊಸದಾಗಿ ಖರೀದಿಸಿದ್ದ ಮಾರುತಿ ಕಾರನ್ನೇರಿ ಬಿ ಟಿ ಎಂ ಲೇಔಟ್ ಕಡೆ ಚಲಾಯಿಸಿಕೊಂಡು ಹೋಗಿ ಚಹಾ ಹೀರಿ ಮನೆಗೆ ಬಂದಾಯಿತು. ಅದೇನೊ ಹೇಳ್ತಾರಲ್ಲ, ಕೆಲಸ ಇಲ್ದೆ ಇರೋ ಬಡಗಿ, ಮಗನ್ನೇ ಹಿಡ್ಕೊಂಡು ಅವನ ಮುಖ ಕೆತ್ತಿದ್ನಂತೆ ಹಾಗಾಯಿತು ನಾವು ಮಾಡಿದ ಕೆಲಸ. ಮೊದಲೇ ನಿದ್ರೆ ಬರುತ್ತಿರಲಿಲ್ಲ ಅದರಲ್ಲಿ ಚಹಾ ಕುಡಿದರೆ ಇನ್ನು ನಿದ್ದೆ ಬರಲು ಹೇಗೆ ಸಾದ್ಯ. ಇದು ನನ್ನ ಗೋಳಾದರೆ ರಾಕೇಶ ಮಲಗಲು ಹೋದ. ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ, ನಾನೊಬ್ಬನೇ ಒಂಟಿ ಪಿಶಾಚಿಯಂತೆ ಸಮಯ ಮೂರಾದರೂ ಎದ್ದಿದ್ದೇನೆ ಆಗ ಮೆಲುಕತೊಡಗಿದೆ ಆ ವರ್ಷದ ಕೊನೆಯಲ್ಲಿ ಬಂದ ಸಮಸ್ಯೆಗಳನ್ನು ಮತ್ತು ನಾ ಕಂಡುಕೊಂಡ ಅದ್ಭುತ ಪರಿಹಾರಗಳನ್ನು!!!!
೨೦೧೪ ರ ಶುರುವಿನಲ್ಲಿ ಚೆನ್ನಾಗೇ ಇದ್ರೂ ವರ್ಷದ್ ಕೊನೆಯಲ್ಲಿ ತಲೆ ಹಾಳಾಗಿ, ಮನ್ಸಿಗೆ ಬೇಜಾರಾಗಿ, ಒಂಟಿತನದ ಮೋರೆ ಹೋಗ್ಬಿಟ್ಟಿದ್ದೆ. ಕೆಲವ್ರು ತುಂಬ ಹತ್ರ ಅನ್ಸ್ದೋರು ವಿಷ್ಯ ಗೊತ್ತಿದ್ರು ಮತ್ತೆ ಕೇಳಿದ್ರು ಏನಾಗಿದೆ ಅಂತ!, ಮತ್ತೆ ಕೆಲವ್ರು ಗೊತ್ತಿಲ್ದೆ ಕೇಳಿದ್ರು ಏನಾಗಿದೆ ಅಂತ ! ಗೊತ್ತಿರೋರ್ಗೆ ಹೇಳಿನು ಉಪಯೋಗ ಇಲ್ಲ, ಗೊತ್ತಿಲ್ದೆ ಇರೋರ್ರ್ಗೆ ಹೇಳೋಕೆ ಮನಸಿಲ್ಲ. ವಿದ್ಯಾರ್ಥಿ ಜೀವನವೇ ಆರಾಮ ನೋಡಿ. ಕಾಲೇಜ್ಗೆ ಹೋದಾ, ಹಾಸ್ಟೆಲ್ ಗೆ ವಾಪಸ್ ಬಂದ್ಯಾ, ಹಾಸ್ಟೆಲ್ ನಲ್ಲಿ ಕೊಡೊ ಮುದ್ದೆ ತಿಂದು ಸಾಕಾಗೋ ಅಷ್ಟು ಯಾರ್ನಾದ್ರೂ ಗೋಳು ಹೋಯ್ಕೊಂಡು ಚಾಪೆ ಮೇಲೆ ಬಿದ್ರೆ ಆ ದೇವ್ರೇ ಬರ್ಬೇಕು ಎದ್ದೇಳ್ಸೋಕೆ!! ಅವಾಗೆಲ್ಲ ಜೀವನ ಅಂದ್ರೆ ಇಷ್ಟೆ ನೋಡಿ. ಇವಾಗ ಹಂಗಲ್ಲ, ಈ ಹಾಳಾದ್ ವಯಸ್ಸು ಬೇರೆ, ಯಾವಾಗಲು ಏನಾದ್ರೂ ಒಂದು ಕಿರಿಕ್ ಇದ್ದೇ ಇರುತ್ತೆ. ಮನೆ ಇಂದ ಫೋನ್ ಮಾಡಿ "ಲೋ ಆರಾಧ್ಯ, ಮನೆ ನಮ್ಮನೆ ಬಚ್ಲು ಆ ಕಡೆ ಇರ್ಬಾರ್ದಂತೆ, ವಾಸ್ತು ಸರಿ ಇಲ್ವಂತೆ, ಬರೋ ದುಡ್ಡು ನಿಲ್ಲಲ್ಲ್ವಂತೆ ಕೈನಲ್ಲಿ " ನಾ ಅವರನ್ನು ಮತ್ತೆ ಕೇಳಿದೆ "ಯಾರಮ್ಮಾ ಹೇಳ್ದೋರು ನಿಮ್ಗೆ?" ಅಮ್ಮ ಹೇಳಿದ್ರು "ಹೇ ಮೊನ್ನೆ ತುಮ್ಕೂರಿಂದ ಶ್ರೀನಿವಾಸ್ ಮೂರ್ತಿ ಬಂದಿದ್ರು ಅವ್ರೆ ಹೇಳಿದ್ದು" ನಂಗೆ ಕಳೆದ ಸಲ ಮಾತಾಡಿದ್ದು ಏನೋ ನೆನಪಿಗೆ ಬಂದು ಮತ್ತೆ ಕೇಳ್ದೆ " ಅಮ್ಮ ಮತ್ತೆ ಹೋದ್ಸಲ ಬೆಂಗ್ಲೂರಿಂದ ಗುರು ಶಾಸ್ತ್ರೀ ಅವ್ರು ಬಂದು ಹೇಳಿದ್ಮೇಲೆ ತಾನೇ ಹಳೇ ಬಚ್ಲು ತೆಗ್ಸಿ ಈಗಿರೋದನ್ನ ಕಟ್ಸಿರೋದು, ಮತ್ತೆ ಸಮಸ್ಯೆನ??" ಅಮ್ಮಂಗೆ ಅಷ್ಟಕ್ಕೇ ಸಿಟ್ಟು ಬಂತು ಅನ್ಸುತ್ತೆ. "ಲೋ ಆರಾಧ್ಯ ಈವಾಗ ನೀವು ದೊಡ್ದವ್ರು ಕಣಪ್ಪ, ಅದೇನ್ ಮಾಡಬೇಕು ಅಂತಿದಿರೋ ಮಾಡಿ" ಅಂತ ಹೇಳಿ ಫೋನ್ ಇಟ್ಟೇಬಿಡೊದಾ. ನಾ ಒಂದ್ಸಲ ಮನ್ಸಲ್ಲೇ ನಕ್ಬಿಟ್ಟು ಸರಿ ಇದಕ್ಕೊಂದು ಶಾಶ್ವತ ಪರಿಹಾರ ಕೊಡೋಣ ಅಂದ್ಕೊಂಡು ಮನೇನೆ ಕಿತ್ತಾಕ್ಸಿ ಹೊಸದೇ ಕಟ್ಟಿದ್ದಾಯ್ತು. ಮನೆ ಕಟ್ಸಿದ್ದು ವಾಸ್ತು ಪ್ರಕಾರನೆ ಆದ್ರೆ ದುಡ್ಡು ಮಾತ್ರ ನಿಲ್ತಿಲ್ಲ ನಾನು ಮಕಾಡೆ ಮಲ್ಕೊಳೊ ಹಾಗಾಯ್ತಷ್ಟೆ!!! ಆದ್ರೆ ಸಮಸ್ಯೆ ಮಾತ್ರ ಬಗೆ ಹರಿದಿದೆ, ಈಗ ಮನೇಲಿ ವಾಸ್ತು ವಿಷ್ಯ ಎತ್ತೋ ಮನಸ್ಸು ಯಾರಿಗೂ ಇಲ್ಲ. ಸದ್ಯದ ಪರಿಸ್ಥಿತಿಲಿ ಮನೆ ಕೆಲಸ, ಅದು, ಇದು, ಸಮಸ್ಯೆನೇ ಅಲ್ಲ ಬಿಡಿ ಯಾಕಂದ್ರೆ ಇಂತ ಸಮಸ್ಯೆಗಳ್ಗೆ ಪರಿಹಾರ ತುಂಬಾ ಸುಲಭ. ಆದರೆ ೨೦೧೪ ರ ವರ್ಷದ ಆ ನನ್ನ ಅರ್ಥಪೂರ್ಣ ಒಂಟಿತನದ ಕಾರಣವೇ ಬೇರೆ ಬಿಡಿ. ನಾ ಅದೇನು ಅಂತ ಹೇಳಲಾರೆನಾದರೂ ಸಮಸ್ಯೆ ಮಾತ್ರ ಗಂಭೀರವಾದದ್ದೇ. ಇದೆಲ್ಲ ಯಾಕೆ ಹೇಳ್ತಾ ಇದೀನಿ ಅಂತ ನೀವು ಯೋಚ್ನೆ ಮಾಡ್ತಾ ಇದ್ರೆ, ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಾವಿರ ಪರಿಹಾರಗಳು ಆದರೆ ಗಂಭೀರ ಸಮಸ್ಯೆಗಳಿಗೆ ಮೌನ ಮತ್ತು ತಾಳ್ಮೆ ಬಹು ದೊಡ್ಡ ಪರಿಹಾರಗಳು. ಆಂಗ್ಲದಲ್ಲಿ ಒಂದು ಗಾದೆಯಿದೆ. "Time heals almost Everything, give the Time some time" ಅಂದರೆ "ಸಮಯ ಎಂತಹ ಕಾಯಿಲೆಯನ್ನಾದರೂ ಕೂಡ ಸರಿಪಡಿಸುತ್ತದೆ, ಆದರೆ ಸ್ವಲ್ಪ ಜಾಸ್ತಿ ಸಮಯ ಕೊಡಿ" ಎಂದು. ನೀವೊಮ್ಮೆ ತಿರುಗಿ ನೋಡಿ ಹತ್ತಾರು ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು ಇಂದಿಲ್ಲ, ಆಗ ತೊಂದರೆ ಕೊಟ್ಟ ಜನರೂ ನಿಮ್ಮೊಂದಿಗಿಲ್ಲ, ಹಾಗೆಯೇ ಇಂದು ಆಗುವ ಸಮಸ್ಯೆಗಳು ಸ್ವಲ್ಪ ವರ್ಷಗಳ ನಂತರ ನೆನಪಿಗೇ ಬರುವುದಿಲ್ಲ, ಮತ್ತೆ ಅಂತಹ ಜನರೂ ನಿಮ್ಮೊಂದಿಗಿರುವುದಿಲ್ಲ. ಸಮಯ ಎಲ್ಲವನ್ನೂ ವಾಸಿ ಮಾಡಿ ಬಿಟ್ಟಿರುತ್ತದೆ. ನನಗೆ ತಿಳಿದ ಮಟ್ಟಿಗೆ ಇಂತಹ ತೊಂದರೆ ಕೊಡುವ ಸನ್ನಿವೇಶಗಳು ಜೀವನದ ಒಂದು ಅಂಗವಾಗಿಬಿಡುತ್ತವೆ. ಸಮಸ್ಯೆಯೇ ಇಲ್ಲದ ಜೀವನ ಬಲು ಅಸಾಧ್ಯ ಆದ್ದರಿಂದ ಅವುಗಳಿಗೆ ಅಷ್ಟಾಗಿ ತಲೆ ಕೊಡದೆ ಸಾಧ್ಯವಾದಷ್ಟು ಸಮಾಧಾನವಾಗಿ ಪರಿಹಾರಗಳನ್ನು ಹುಡುಕುವುದು ಒಂದಾದರೆ ಕೆಲವು ಮಾನಸಿಕ ಸಮಸ್ಯೆಗಳಿಗೆ ಸಮಯವೇ ಒಂದು ದೊಡ್ಡ ಪರಿಹಾರ. ಈ ಸನ್ನಿವೇಶ ಅಂದಾಗ ಮತ್ತೊಂದು ಅರ್ಥಗರ್ಬಿತ ಗಾದೆಯೊಂದು ನೆನಪಾಯಿತು "Happiness is in the heart not in the circumstances" ಅಂದರೆ "ಸಂತೋಷವು ನಮ್ಮ ಹೃದಯಲ್ಲಿದೆ ಸನ್ನಿವೇಶಗಳಲ್ಲಲ್ಲ " ಎಂದು. ಎಂತಹ ಸನ್ನಿವೇಶವಾದರೂ ಸಮಾಧಾನವಾಗಿ ಸ್ವಚ ಮನಸ್ಸಿನಿಂದ ಯೋಚಿಸಿ ಬಗೆಹರಿಸಿದರೆ ಸಂತೋಷವು ತಂತಾನೆ ಒಲಿದು ಬರುತ್ತದೆ. ಹೀಗೆ ಯೋಚಿಸುತ್ತಾ ಇದ್ದ ನನಗೆ ಗೊತ್ತೇ ಆಗದೆ ಹಾಗೆಯೇ ನಿದ್ರೆಗೆ ಜಾರಿಬಿಟ್ತಿದ್ದೆ.
ರಾತ್ರಿ ಮಲಗಿದ್ದು ಸ್ವಲ್ಪ ತಡವಾದ್ದರಿಂದ ಅಂತಹ ಸುಖ ನಿದ್ರೆ ಮಾಡುತ್ತಿರಲಿಲ್ಲ, ಅದರಲ್ಲಿ ಬೇರೆ ನನ್ನ ಕೆಲವು ಸ್ನೇಹಿತರು ಜಿಮ್ ಪ್ರಿಯರಾದ್ದರಿಂದ ಬೆಳಗ್ಗೆ ಬೇಗನೆ ಎದ್ದು ಜಿಮ್ ಗೆ ಹೋಗುವ ತಯಾರಿ ನಡೆಸಿತಿದ್ದುದರಿಂದ ಮಂಪರು ನಿದ್ರೆಯಲ್ಲಿದ್ದೆ. ನಿದ್ದೆಯಲ್ಲಿದ್ದವನಿಗೆ ಯಾರೋ ಬಂದು ಎದೆಗೆ ಜೋರಾಗಿ ಅಪ್ಪಳಿಸಿದಂತಾಯಿತು. ಹಠಾತ್ತನೆ ಎದ್ದವನು ಸುತ್ತ ನೋಡಿದರೆ ಮನೆಯಲ್ಲಿ ಇದ್ದ ಒಬ್ಬ ಸ್ನೇಹಿತ ಗಾಢ ನಿದ್ರೆಯಲ್ಲಿದ್ದ. ಉಸಿರು ಬಿಡುತ್ತಾ ಹಾಸಿಗೆ ಮೇಲಿಂದಲೇ ಮೊಬೈಲ್ ಹಿಡಿದೆ. ಮೊಬೈಲ್ ನೋಡಿದರೆ ಈ ವಾಟ್ಸಾಪ್ ಎಂಬ ತಲೆ ನೋವಿನ ಸಂದೇಶದ ಪೆಟ್ಟಿಗೆಯಲ್ಲಿ ೪೩೩ ಸಂದೇಶಗಳು ಬಂದು ಕುಳಿತಿದ್ದವು. ನನ್ನಂತೆಯೇ ಕೆಲಸ ಇಲ್ಲದ ಕೆಲವು ಸ್ನೇಹಿತರು ಒಂದು ಮುನ್ನೂರು ಸಂದೇಶಗಳಲ್ಲಾದರೂ ಗುಡ್ ಮಾರ್ನಿಂಗ್ ಎಂದು ಕಳಿಸಿದ್ದರು. ಇನ್ನು ಮಿಕ್ಕವರು ಅದೇ ಕಳಿಸಿದ್ದ ಹಳೆ ಜೋಕ್ ಗಳು. ಆದರೆ ಒಂದು ಸಂದೇಶ ಮಾತ್ರ ಸ್ವಾಮೀ ವಿವೇಕಾನಂದರ ಭಾವ ಚಿತ್ರವನ್ನು ಹೊತ್ತಿ ಬಂದಿತ್ತು ಕಾರಣ ಇಂದು ರಾಷ್ಟ್ರೀಯ ಯುವಕರ ದಿನವೆಂದು ನೆನಪಿಗೆ ಬಂತು. ಅದರಲ್ಲಿ "ಏಳಿ ಎದ್ದೇಳಿ ಯುವಕರೇ" ಎಂದು ದೊಡ್ಡದಾಗಿ ಬರೆದಿದ್ದನ್ನು ನೋಡಿದೆ. ಅಯ್ಯೋ ವಿವೇಕನಂದರೇ ಬಂದು ನನ್ನ ಎದೆಗೆ ಅಪ್ಪಳಿಸಿದರೇನೋ ಎನ್ನುವ ಭಾಸವಾಯಿತು. ಎದ್ದವನೇ ಅವರನ್ನು ನೆನೆಯುತ್ತಾ ಮಲಯಾಳಿ ಚೇಟ್ಟನ ಅಂಗಡಿಯ ಬಳಿ ಚಹಾ ಹೀರಲು ಹೋದೆ. ಇಂದು ಆಫೀಸಿಗೆ ಹೋಗಲು ಮನಸ್ಸಿರಲಿಲ್ಲ ಆದ್ದರಿಂದ ಹೋಗುವುದು ಬೇಡವೆಂದು ತೀರ್ಮಾನಿಸಿ ರಾತ್ರಿಯಿಂದ ನನ್ನ ತಲೆಯಲ್ಲಿ ನಡೆದ ಯುದ್ದವನ್ನು ನೆನೆಯುತ್ತಿರುವಾಗ ರಸ್ತೆಯಲ್ಲಿ ಒಬ್ಬ ಯುವತಿಯನ್ನು ಗಮನಿಸಿದೆ. ರಸ್ತೆಯಲ್ಲಿ ಸರಿಯಾಗಿ ನಡೆಯುತ್ತಿರಲಿಲ್ಲ ಮತ್ತು ಕೈಯಲ್ಲಿ ಒಂದು ಕೋಲಿತ್ತು. ಸ್ವಲ್ಪ ದೂರದಿಂದಲೇ ಯುವತಿ ಕೂಗಿದ್ದು ಕೇಳಿಸಿತು "ಅಣ್ಣಾ ಇಲ್ಲಿ ಆಟೋ ಸ್ಟ್ಯಾಂಡ್ ಎಲ್ಲಿದೆ ಹೇಳ್ತೀರಾ" ಸುತ್ತಲೂ ನೋಡಿದೆ ಯಾರು ಇಲ್ಲ , ಆಗ ಒಂದು ಕ್ಷಣದಲ್ಲಿ ಅರಿವಾಯಿತು, ಆ ಯುವತಿಗೆ ಎರಡು ಕಣ್ಣಿಲ್ಲ ಆದರೆ ಒಂದು ಅಂದಾಜಿನ ಮೇಲೆ ಯಾರಾದರೂ ಇರಬಹುದೆಂದು ಸಹಾಯವನ್ನು ಕೇಳುತ್ತಿದ್ದಾಳೆ ಎಂದು. ವಿಷಯ ಎಂದರೆ ಆ ರಸ್ತೆಯ ಮೂಲೆಯಲ್ಲಿ ಮಿತ್ರಜ್ಯೋತಿ ಎಂಬ ಅಂಧರ ವಸತಿ ಗೃಹವಿದೆ, ಆಕೆಯು ಅಲ್ಲಿಂದ ತನ್ನ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಳೆಂದು ತಿಳಿಯಿತು. ಸಾಮಾನ್ಯವಾಗಿ ಮಿತ್ರಜ್ಯೋತಿಯಿಂದ ಓಡಾಡುವವರಿಗೆ ರಸ್ತೆಯ ಅರಿವು ಇದೆ, ಬಹಳ ಅಪರೂಪ ಹಾಗೆ ಸಹಾಯವನ್ನು ಕೇಳುವುದು. ಪಾಪ ನನ್ನಂತೆಯೇ ಅವಳು ಯಾವುದೊ ಗೊಂದಲದಲ್ಲಿದ್ದಿರಬಹುದೇನೋ ಅದರಿಂದ ಗಾಬರಿಗೊಂಡಿರಬಹುದು. ಸರಿ ಮತ್ತಷ್ಟು ಯೋಚಿಸದೆ ಆಕೆಯನ್ನು ಅಲ್ಲೇ ೫೦ ಮೀಟರ್ ದೂರದಲ್ಲಿದ್ದ ಆಟೋ ನಿಲ್ದಾಣಕ್ಕೆ ಆಕೆಯನ್ನು ತಲುಪಿಸಿ ವಾಪಸ್ ಮನೆ ಕಡೆ ತಿರುಗಿದೆ. ಮೊನ್ನೆ ನನ್ನ ಕನ್ನಡಕ ಹೊಡೆದು ಹೋಗಿದ್ದರಿಂದ ೩ ದಿನ ಆಫೀಸಿಗೆ ಹೋಗಲು ಬಹಳ ಕಷ್ಟ ಪಟ್ಟಿದ್ದೆ. ಅದರಲ್ಲಿ ಈ ಸಮಸ್ಯೆಗಳು ಬೇರೆ ಇವೆ ಎಂದು ಗೊಣಗಿದ್ದು ನೆನಪಿಗೆ ಬಂತು. ಇದನ್ನೇ ಯುದ್ದ ಎಂದು ಪರಿಗಣಿಸಿದ್ದ ನನಗೆ, ಆಕೆಯ ಪರಿಸ್ತಿತಿಯನ್ನು ನೆನೆದು ಹೊಟ್ಟೆಯಲ್ಲಿ ಸಂಕಟವಾಗಿತ್ತು. ಆಕೆಯದು ಬರೀ ಯುದ್ದವಲ್ಲ ಅದೊಂದು ಮಹಾಯುದ್ದ. ರಸ್ತೆಯಲ್ಲಿ ಯಾರೂ ಇಲ್ಲ, ಪಾಪ ಆಟೋ ನಿಲ್ದಾಣ ಎಲ್ಲಿದೆ ಎಂದು ತಿಳಿಯುತ್ತಿಲ್ಲ ಅದರ ಜೊತೆಗೆ ಇದು ಬರೀ ಈ ಒಂದು ದಿನದ ಕಥೆಯಲ್ಲ. ಜೀವನ ಪೂರ್ತಿ ಆಕೆಗೆ ಪ್ರಪಂಚವೇ ಕತ್ತಲು. ಮೋಕ್ಷ ದೀಕ್ಷೆಗಳಂತಹ ಶಬ್ದಗಳು ಆಕೆಗೆ ಬಲು ದೂರ. ಸಮಸ್ಯೆಗಳು ಅವಳಿಗೆ ಜೀವನದಲ್ಲಿ ಸಾಮಾನ್ಯವಷ್ಟೇ ಅಲ್ಲ ಅವಳ ದಿನ ನಿತ್ಯ ಜೀವನವೇ ಒಂದು ಸಮಸ್ಯೆ. ನಮಗೆ ಬಂದ ಸಮಸ್ಯೆಗಳಿಗೆ ಪರಿಹಾರವಿದೆ ಪಾಪ ಅವಳಿಗೆ ಪರಿಹಾರವೇ ಇಲ್ಲದಂತಹ ಸಮಸ್ಯೆಗಳು. ಇಂತಹ ಎಲ್ಲವನ್ನು ಮೆಟ್ಟು ಆಕೆಯು ಎಲ್ಲವೂ ಸರಿಯಿರುವ ನಮಗಿಂತ ಮುಂಚೆ ಎದ್ದು ಅವಳ ಕೆಲಸ ಕಾರ್ಯಗಳನ್ನು ಮುಗಿಸಲು ಆ ಕತ್ತಲ ಪ್ರಪಂಚಕ್ಕೆ ದಿಟ್ಟ ಹೆಜ್ಜೆ ಇಡುತ್ತಿರುವುದನ್ನ ನೋಡಿ ನನಗೆ ನನ್ನ ಸಮಸ್ಯೆಗಳೆಲ್ಲ ಒಂದು ಕ್ಷಣ ಶೂನ್ಯವೆನಿಸತೊಡಗಿದವು. ವಿವೇಕಾನಂದರು ಹೇಳಿದ್ದು ಇದನ್ನೇ "ಮಾನವನ ಸ್ವಭಾವದಲ್ಲಿ ಶಕ್ತಿಪೂರ್ಣವಾದದ್ದು, ಸಾತ್ವಿಕವಾದದ್ದು ಮತ್ತು ತೇಜೋವಂತವಾದದ್ದು ಏನೇನಿದೆಯೋ ಅದೆಲ್ಲವೂ ಅವನ ಅಂತರ್ಯದಲ್ಲಿರುವ ದಿವ್ಯತೆಯಿಂದ ಒಳಮೂಡಿದ್ದು. ಆ ದಿವ್ಯತೆಯೂ ಕೆಲವರಲ್ಲಿ ಸುಪ್ತವಾಗಿ ಇರುವಂತೆ ಕಂಡರೂ, ಪ್ರತಿಯೊಬ್ಬರಲ್ಲಿ ಅದು ಏಕಪ್ರಕಾರವಾಗಿರುವುದಂತೂ ದಿಟ. ಇಲ್ಲಿ ಎಲ್ಲರೂ ದಿವ್ಯ ಸ್ವರೂಪಿಗಳೇ" ಇದನ್ನು ಯೋಚಿಸಿದ ಮರುಕ್ಷಣವೇ ಆಫೀಸಿಗೆ ಹೊರಡಲು ತಯಾರಾಗಿ, ಮತ್ತೊಂದು ಘಂಟೆಯೊಳಗೆ ಆಫೀಸಿಗೆ ಬಂದಿಳಿದೆ.
ಬರೆದಿರುಹುದೆಣಿಕೆಯಲಿ ಬಂದಿಹುದು ಮರೆಯದಿರು |
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬರೆನೆಂಬುದನು ಬಿಡು |
ಹರುಷಕದೇ ದಾರಿಯಲೋ - ಮಂಕುತಿಮ್ಮ ||
ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಈ ಬ್ಲಾಗ್ ನ ಫ಼ೇಸ್ ಬುಕ್ ಪೇಜ್ ನಲ್ಲಿ ಒಂದು ಶೇರ್ ಮಾಡಿ ಮುಂದಿನ ಬರಹಗಳಿಗೆ ಇಲ್ಲಿ ಕ್ಲಿಕ್ಕಿಸಿ>> https://www.facebook.com/LifeAndLeisureBlog
ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಈ ಬ್ಲಾಗ್ ನ ಫ಼ೇಸ್ ಬುಕ್ ಪೇಜ್ ನಲ್ಲಿ ಒಂದು ಶೇರ್ ಮಾಡಿ ಮುಂದಿನ ಬರಹಗಳಿಗೆ ಇಲ್ಲಿ ಕ್ಲಿಕ್ಕಿಸಿ>> https://www.facebook.com/LifeAndLeisureBlog

No comments:
Post a Comment