Thursday, 30 October 2014

ನವೋದಯ ಜೀವನವೊಂದು ಮುಗಿಯದ ಸುಂದರ ಕವನ

ಸುತ್ತಲೂ ಕಾಡು, ಹೊಲ, ದಿಣ್ಣೆಗಳು ಮಧ್ಯದಲ್ಲೊಂದೈವತ್ತು ಎಕರೆಯಲ್ಲಿ ನಿರ್ಮಿತವಾದ ಕಾಂಪೌಂಡ್, ಅಲ್ಲಲ್ಲಿ ಗಟ್ಟಿಯಾಗಿ ನಿಂತಿರುವ ಕಟ್ಟಡಗಳು, ಚಳಿಗಾಲ ಬೇರೆ ಆದ್ದರಿಂದ ಮಂಜು ಮುಸುಕಿದ ವಾತವಾರಣ, ಸಮಯ ಬೆಳಿಗ್ಗೆ ಐದು ಮುಕ್ಕಾಲಿರಬೇಕು, ಕೊರೆಯುವ ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದವನಿಗೆ ಯಾರೋ ಬಂದು ಕೂಗಿದಂತಾಯ್ತು "ಲೇ ಓಡ್ರೋ , ವೇಣು ಅಣ್ಣ ಬರ್ತಾವ್ರೆ!!!". ಕೇಳಿಸಿದರೂ ಕನಸಿರಬೇಕೆಂದು ನಿದ್ರಿಸುತ್ತಿದ್ದ ನನಗೆ ಎಚ್ಚರವಾಗಿದ್ದು ಹಿಂದೆ ಬಿದ್ದ ಒಂದು ಗೂಸದಿಂದಲೇ. "ಥೂ ಈ ಅಣ್ಣಂಗೆ ದೇವ್ರು ಯಾಕೆ ನಿದ್ದೆ ಕೊಟ್ಟಿಲ್ಲಪ್ಪ, ಬೆಳಿಗೆ ಬೆಳಿಗ್ಗೆನೆ ಒದೆ ಕೊಟ್ರಲ್ಲ" ಎಂದು ಗೊಣಗುತ್ತಲೇ ಎದ್ದು ಓಡಿದ್ದೆ. ಈ ವೇಣು ಎಂದೆನಲ್ಲ ಅವರು ಅಂದಿನ ಸ್ಕೂಲ್ ಪೀಪಲ್ ಲೀಡರ್. ಶಿಸ್ತಿನ ಸಿಪಾಯಿಯಂತೆ ಎಲ್ಲರಿಗಿಂತ ಮುಂಚೆ  ಎದ್ದು ಜೂನಿಯರ್ ಹಾಸ್ಟೆಲ್ಗಳಿಗೆ ನುಗ್ಗಿ ಮಲಗಿರುವವರನ್ನೆಲ್ಲ ಏಳಿಸಿ ಆಟದ ಮೈದಾನಕ್ಕೆ ಅಟ್ಟುವುದು ಅವರ ದಿನ ನಿತ್ಯದ ಕೆಲಸ. ಅಲ್ಲಿಗೆ ಓಡಿಸುತ್ತಿದ್ದು ಆಟ ಆಡಲೆಂದಲ್ಲ ಆ ಆಟದ ಮೈದಾನದ ಸುತ್ತ ಓಡಿ ವ್ಯಾಯಾಮ ಮಾಡಲೆಂದು. ಕೆಲವರು ಆಸಕ್ತಿಯಿಂದ ಎದ್ದು ಓಡುತ್ತಿದ್ದರೆ ನನ್ನಂತವರು ಮಾತ್ರ ಒಂದೋ ಎರಡೋ ಒದೆ ತಿಂದೆ ಅವರ ಮಾತುಗಳನ್ನು ಪಾಲಿಸುತ್ತಿದ್ದು ಅಭ್ಯಾಸವಾಗಿಬಿಟ್ಟಿತ್ತು. ಏಳು ವರ್ಷದಲ್ಲಿ ಒಂದು ದಿನವೂ ಆಸಕ್ತಿಯಿಂದ ಎದ್ದವನಲ್ಲವಾದರೂ ಮೊನ್ನೆ ಇಂಟರ್ನೆಟ್ನಲ್ಲಿ ಓದುತ್ತಿದ್ದಾಗ ದಿನಕ್ಕೆ ೨೦ ನಿಮಿಷವಾದರೂ ವ್ಯಾಯಾಮ ಮಾಡಿದರೆ ಆಯಸ್ಸು ಜಾಸ್ತಿಯಾಗುವುದು ಮತ್ತು ದೇಹವು ಹದವಾಗಿರುವುದು ಎಂದು ತಿಳಿದಾಗ ನೆನಪಾಗಿದ್ದು ಕಷ್ಟವೋ ಇಷ್ಟವೋ ಆದರೆ ಪ್ರತಿದಿನ ಬೆಳಿಗ್ಗೆ ಆರಕ್ಕೆ ಎದ್ದು ಅರ್ದ ಮುಕ್ಕಾಲುಘಂಟೆ ದೇಹ ದಂಡಿಸಿದ ದಿನಗಳು.ಇಂತಹ ಅಭ್ಯಾಸ ಕೆಲವು ವರ್ಷ ಕೈ ತಪ್ಪಿದ್ದರೂ ಮತ್ತೆ ರೂಢಿಸಿಕೊಂಡಿರುವದರಲ್ಲಿ ಸಂತೋಷವಿದೆ. ಇಷ್ಟು ಓದಿದ ಮೇಲೆ ನೀವು ಗಮನಿಸಿದ್ದೆ ಆದರೆ ನಾ ಪೀಠಿಕೆ ಇಲ್ಲದೆ ಏನನ್ನೋ ಹೇಳಹೊರಟಿರುವುದು. ಈ ನವೋದಯ ಶಾಲೆಯ ವಿದ್ಯಾರ್ಥಿಗಳೇ ಹೀಗೆ!! ತಮ್ಮ ಶಾಲೆಯ ನೆನಪಾದಾಗ ಒಂದೇ ಸಮನೇ ಒಂದೇ ಉಸಿರಿನಲ್ಲಿ ಅಲ್ಲಿ ನಡೆದ ಘಟನೆಗಳನ್ನು ಹೇಳಿಬಿಡುವುದು. ಶಾಲೆ ಬಿಟ್ಟು ಎಂಟತ್ತು ವರ್ಷಗಳಾದರೂ ಇಂದಿಗೂ ಅಲ್ಲಿ ನಡೆದ ಘಟನೆಗಳು ಕಣ್ಣು ಮುಂದಿವೆ. ಅಪರೂಪಕ್ಕೊಮ್ಮೆ ಸ್ನೇಹಿತರು ಸಿಕ್ಕರೆ ಕಳೆದ ಸರಿ ಸಿಕ್ಕಾಗ ಹೇಳಿದ ಕಥೆಗಳನ್ನೇ ಹೇಳಿ ಮತ್ತೆ ಮತ್ತೆ ನಗುವುದು. ಆ ಮಾತುಗಳಲ್ಲಿ ತಮಾಷೆಯಿರಲೇಬೇಕೆಂದಲ್ಲ, ಆ ಪಾತ್ರಗಳು ನಮ್ಮಲ್ಲಿ ಯಾರದರೊಬ್ಬರಿದ್ದರೆ ಸಾಕು ನಗುವಿನ ಅಲೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
                                                                       ನಾಲ್ಕರವರೆಗೆ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ನನಗೆ ಐದನೇ ತರಗತಿಗೆ ತೇರ್ಗಡೆ ಸಿಕ್ಕಾಗ ಪಕ್ಕದ ಊರಿನ ಶಾಲೆಗೆ ಹೋಗಬೇಕಾಯ್ತು. ಹಳ್ಳಿ ಹುಡುಗರೆಂದರೆ ಕೇಳಬೇಕೆ, ಪ್ರತಿದಿನ ಪ್ರತಿಯೊಂದು ಚೇಷ್ಟೆಗಳು. ಅಂದು ಕೂಡ ಹಾಗೆಯೇ,ಶಾಲೆಯಿಂದ ಊರಿಗೆ ವಾಪಾಸಾಗುವಾಗ ಹನುಮಾನ್ ಬಸ್ ಎಳೆ ಮಾತ್ರದಲ್ಲಿ ತಪ್ಪಿಸಿಹೋಗಿತ್ತು. ಆ ರಸ್ತೆಗಳು ಸರಿ ಇರದೇ ಬಸ್ ವೇಗವೇನು ಅಷ್ಟಿರುತ್ತಿರಲಿಲ್ಲ. ಬಸ್ ಸಿಗದೆ ಅದನ್ನು ಅದರ ಹಿಂದೆಯೇ  ಅಟ್ಟುತ್ತ ಬಂದು ಅದನ್ನು ಬಸ್ಟಾಂಡಿನಲ್ಲಿ ಮುಟ್ಟಿಸಿದ್ದಕ್ಕೆ ವಿಜಯದ ಪತಾಕೆಯನ್ನು ಹಾರಿಸಿದಂತ ಅನುಭವವಾಗಿತ್ತು.ಇದೆಲ್ಲಾ ಮುಗಿಸಿ  ಸ್ವಲ್ಪ ತಡವಾಗಿ ಮನೆಗೆ ತಲುಪಿದಾಗ ಅಮ್ಮ ಬಹಳ ಸಮಾಧಾನದಿಂದ ಕುಳಿತು ಏನೋ ಯೋಚಿಸುತ್ತಿದ್ದಳು. ನನ್ನ ನೋಡಿದ ತಕ್ಷಣ ಅವಳ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಈ ಹಠಾತ್ ಭಾವೋದ್ರೇಕವನ್ನು ನೋಡಿ ಒಂದು ಕ್ಷಣ ವಿಚಲಿತಗೊಂಡಿದ್ದೆ. ಆದರೆ ಅಮ್ಮ ಸಮಾಧಾನದಿಂದಲೇ  ನನ್ನನ್ನು ದೇವರ ಮನೆಗೆ ಕರೆದು ತೋರಿಸಿದ್ದು ನವೋದಯ ಶಾಲೆಗೆ ಸೇರಿಕೊಳ್ಳಲು ಬಂದ ಅನುಮತಿ ಪತ್ರ!! ಈ ಅಮ್ಮಂದಿರೇ ಹೀಗೆ, ಅವಳ ಮಕ್ಕಳಿಗೆ ಶಾಲೆಯಲ್ಲಿ ಸಾಮಾನ್ಯವಾಗಿ ನಡೆದ ಆಟೋಟದಲ್ಲಿ ೧೦೦ ಮೀಟರ್ ಓಡುವಾಗ ಪ್ರಶಸ್ತಿ ಬಂದರೆ ಅವಳಿಗೆ  ತನ್ನ ಮಗು ಒಲಿಂಪಿಕ್ಸ್ ಪದಕ ಗೆದ್ದಂತೆಯೇ ಸರಿ. ಅಂದು ಅವಳಿಗೆ ನಾ ಏನೋ ಬಹಳ ದೊಡ್ಡ ಕೆಲಸ ಮಾಡಿದ ಅನುಭವವಾಗಿತ್ತು. ನವೋದಯ ಶಾಲೆಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದು ಬೆಳಗಾಗುವಷ್ಟರಲ್ಲಿ ಇಡೀ ಊರಿಗೆ ಹಬ್ಬಿಸಿಬಿಟ್ಟಿದ್ದಳು. ಆದರೆ ನನಗೆ ಅದರ ಮಹತ್ವವೇನೆಂಬುದು ನವೋದಯ ವಿದ್ಯಾಲಯ ಶಾಲೆಯ ವ್ಯಾಸಾಂಗ ಮುಗಿದ ಮೇಲೆ ಮಾತ್ರವೇ ತಿಳಿದಿದ್ದು. ಆ ಪರೀಕ್ಷೆಯಲ್ಲಿ ನಾ ಪಾಸಾಗಿದ್ದು ನನ್ನ ಜೀವನದ ಮಹತ್ವ ತಿರುವುಗಳಲ್ಲಿ ಒಂದೆಂದು ನಾ ಪರಿಗಣಿಸುತ್ತೇನೆ. 
                                                                              ಪರೀಕ್ಷೆಯಲ್ಲಿ ಪಾಸಾಗಿದ್ದೇನೋ ಸರಿ, ನಂತರ ಊರು ಬಿಟ್ಟು ನನಗೆ ಗೊತ್ತಿರುವಂತವರು  ಯಾರೂ ಇಲ್ಲದ ಆ ಶಾಲೆಗೆ ಬಿಟ್ಟು ಅಪ್ಪ ಅಮ್ಮ ಇಬ್ಬರೂ ಊರಿಗೆ ವಾಪಸಾಗಿದ್ದರು.ಬಿಟ್ಟು ಹೋಗಿದ್ದ ದಿನ ಮನಸ್ಸಿನಲ್ಲಿ ಏನೋ ಒಂಥರ ಕಳವಳ ಬೇಜಾರು ಇದ್ದರೂ ಮನಸ್ಸಿನಲ್ಲೇ ಅದುಮಿಟ್ಟುಕೊಂಡಿದ್ದೆ. ಅಂದು ರಾತ್ರಿ ಹಾಸ್ಟೆಲ್ನಲ್ಲಿ ಮಲಗಲು ಹೋದಾಗ ಕೆಲವು ನನ್ನ ಸ್ನೇಹಿತರು ಅಪ್ಪ ಅಮ್ಮನ ನೆನೆದು ಅಳುತ್ತಿದ್ದನ್ನು ಕಂಡೆ, ಇಂತಹ ಸನ್ನೀವೇಶಗಳು ಸರ್ವೇ ಸಾಮಾನ್ಯ ಬಿಡಿ. ಹಾಗೂ ಹೀಗೂ ಒಂಬತ್ತನೇ ತರಗತಿಗೆ ತಲುಪಿದ್ದೆ ತಡ ಅಲ್ಲಿಗೆ ಮನೆಯ ದಿಗಿಲು ಪೂರ್ತಿ ಹೋಗಿತ್ತು. ನವೋದಯ ಶಾಲೆಯ ಮೇಲೆ ಒಂಥರಾ ವಿಶೇಷ ಒಲವನ್ನು ಬೆಳೆಸಿಕೊಂಡಿದ್ದೆ. ಕಾರಣಗಳು ಹಲವು, ಅಲ್ಲಿನ ಪರಿಸರವೇ ಅಂತದ್ದು ಜಾತಿ ಧರ್ಮದ ಭೇದಬಾವಗಳಿರುವ ಈ ಹೊರಗಿನ ಸಮಾಜದ ನೆರಳು ಅಲ್ಲಿಲ್ಲ. ಹಣದ ಅವಶ್ಯಕತೆಯಂತೂ ಇಲ್ಲವೇ ಇಲ್ಲ, ಊರಿಂದ ಅಪ್ಪ ಅಮ್ಮ ಬಂದಾಗ ಹತ್ತೋ ಇಪ್ಪತ್ತೋ ದುಡ್ಡು ಕೊಟ್ಟರೆ ಅದೇ ಬಲು ಸಾಕು ಆ ವುಡ್ ಲ್ಯಾಂಡ್ ನ ಕಿಟ್ಟಿ ಅಂಗಡಿಯಲ್ಲಿ ತಿಂಡಿ ತಿನ್ನಲು. ತಿನ್ನಲು ಹೋಗಿ ಸಿಕ್ಕಿಹಾಕಿಕೊಂಡು ಒದೆ ತಿಂದಿರುವ ನೆನಪುಗಳಿಗೇನು ಕಡಿಮೆಯಿಲ್ಲ. ಎಲ್ಲದನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ ಕಾರಣ  ಅವೆಲ್ಲವೂ ಇಲ್ಲಿಗೆ ಸಮಂಜಸವೆನಿಸುವುದಿಲ್ಲ, ಅದೆಲ್ಲ ಅವುಗಳನ್ನು ಅನುಭವಿಸಿದ ಆ ಸ್ನೇಹಿತರ ಮಧ್ಯೆ ಇದ್ದರಷ್ಟೇ ಚೆಂದ. ಬಾಲ್ಯದಿಂದ ಅಲ್ಲಿನ ಶಿಕ್ಷಣ ಮುಗಿಯುವವರೆಗೂ ಏನೂ ಗೊತ್ತಿಲ್ಲದೆ ಎಲ್ಲರೂ ಒಂದೇ ಎನ್ನುವ ಹಾಗೆ ಇದ್ದ ನಮಗೆ ಕೊನೆಯಲ್ಲಿ ಶಾಲೆಯನ್ನು ಬಿಡಲು ಅಷ್ಟು ಸುಲಭವಾಗಿರಲಿಲ್ಲ. ಮೊನ್ನೆ ಇಲ್ಲಿ ಓದುತ್ತಿದ್ದಾಗ  ಒಂದು ವಾಕ್ಯವು ನನ್ನ ಕಣ್ಣಿಗೆ ಬಿದ್ದು ಅದು ಬಲು ಸತ್ಯವೆನಿಸಿತು. "ಒಬ್ಬ ಉತ್ತಮ ಸ್ನೇಹಿತನಿಗೆ ನಮ್ಮ ಕಥೆಗಳೆಲ್ಲ ಗೊತ್ತಿರುತ್ತವೆ ಆದರೆ ಒಬ್ಬ ಅತ್ತ್ಯುತ್ತಮ ಸ್ನೇಹಿತ ಅವುಗಳನ್ನು ನಮ್ಮ ಜೊತೆ ಕೂಡಿಯೇ ನಿರ್ಮಿಸಿರುತ್ತಾನೆ". ಈ ನವೋದಯ ಶಾಲೆ ಒಂದು ದೊಡ್ಡ ಕುಟುಂಬವಿದ್ದಂತೆ. ಆ ಮನುಷ್ಯ ಎಲ್ಲಿಯವನಾಗಿರಬಹುದು ಭಾರತದ ಯಾವ ಮೂಲೆಯವನಾಗಿರಬಹುದು ಆದರೆ ಅವನು ನವೋದಯ ಎಂದಾಗ ಮಾತ್ರ ಮನಸ್ಸಿನಲ್ಲಿ ಅವನು ನಮ್ಮವನೇ ಎಂಬ ಭಾವವು ನಮಗೆ ಗೊತ್ತಿಲ್ಲದೇ ಮೂಡಿಬಿಡುತ್ತದೆ. ಇಂದಿಗೂ ಮತ್ತು ಯಾವತ್ತಿಗೂ ನಾನು ಮತ್ತು ನನ್ನಂತೆಯೇ ನನ್ನ ಸ್ನೇಹಿತರೂ ಕೂಡ  ಅವರವರ ನವೋದಯ ಮಿತ್ರರಿಗೆ, ಹಿರಿಯರಾಗಲಿ ಕಿರಿಯರಾಗಲಿ ಸದಾ ಅವರ ಮನಸ್ಸಿನಲ್ಲಿ  ಒಂದು ವಿಶೇಷ ಸ್ಥಾನಮಾನ ನೀಡಿರುತ್ತಾರೆ. 


ನಾ ಇಲ್ಲಿ ಉಲ್ಲೇಖಿಸಿದ ಘಟನೆಗಳು ನಡೆದಿದ್ದು ನಾನು ಜವಾಹಾರ್ ನವೋದಯ ವಿದ್ಯಾಲಯ ಶಾಲೆಯಲ್ಲಿ ಓದುತ್ತಿದ್ದಾಗ. ಭಾರತ ಸರ್ಕಾರದ ಯೋಜನೆಯಡಿಯಲ್ಲಿ ಜಿಲ್ಲೆಗೊಂದು ಶಾಲೆಯು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳು ಪರೀಕ್ಷೆ ಬರೆದು ಅದರಲ್ಲಿ ೮೦ ಜನರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಮಕ್ಕಳು ಅವರ ಬುದ್ದಿವಂತಿಕೆಯಿಂದಲೇ ಆಯ್ಕೆಯಾಗಿದ್ದರೂ ನಾ ಅವರನ್ನು ಬುದ್ದಿವಂತರೆನ್ನದೆ ಅದೃಷ್ಟವಂತರು ಎಂದು ಕರೆಯಲು ಇಚ್ಛೆ ಪಡುವೆ. ಎಲ್ಲ ಶಾಲೆಗಳಂತೆ ಮಕ್ಕಳನ್ನು ಪುಸ್ತಕದ ಮತ್ತು ಅಂಕಗಳ ದಾಸರನ್ನಾಗಿ ಮಾಡದೆ ಮೌಲ್ಯವರ್ಧಿತ ಶಿಕ್ಷಣವನ್ನು ನೀಡುತ್ತಿರುವ ಕೆಲವೇ ಕೆಲವು ಶಾಲೆಗಳಲ್ಲಿ ಈ ನವೋದಯ ಶಾಲೆಗಳು ಸೇರುತ್ತವೆ. ಹೊರಗಿನ ಸಮಾಜದಲ್ಲಿ ಲಕ್ಷಗಟ್ಟಲೆ ಕೊಟ್ಟು ಮಕ್ಕಳನ್ನು ಸಿ.ಬಿ.ಎಸ್.ಸಿ ಶಾಲೆಗಳಿಗೆ ಸೇರಿಸಿದರೆ ಈ ಶಾಲೆಗಳಲ್ಲಿ ಮುಖ್ಯವಾಗಿ ಗ್ರಾಮೀಣಪ್ರದೇಶಗಳಿಂದ ಪ್ರತಿಭಾವಂತ ಮಕ್ಕಳನ್ನು ಆರಿಸಿ ಉಚಿತ ವ್ಯಾಸಾಂಗ ನೀಡುತ್ತಿರುವುದು ಗಮನಾರ್ಹವಾದ ಸಂಗತಿ. ಶಿಕ್ಷಣ ಎಂದರೆ ಬರೀ ಪುಸ್ತಕವಲ್ಲ ಆದರೆ ಸಮಾಜದ ಹಾಗು ಹೋಗುಗಳನ್ನು ಎದುರಿಸಿ ನಿಲ್ಲುವ ಧ್ಯೆರ್ಯ, ಸಂಯಮ ಮತ್ತು ಜೀವನದ ಬಹು ಮುಖ್ಯ ಪಾಠಗಳು ಇಲ್ಲಿ ಓದಿ ಬೆಳದವರಿಗೆ ಸುಲಭವಾಗಿ ಕರಗತವಾಗುತ್ತವೆ ಎಂದು ನಾ ಅರಿತಿದ್ದೇನೆ. ಇಂತಹ ಶಾಲೆಯಲ್ಲಿ ಓದಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ ಹಾಗೆ ಅಲ್ಲಿ ಓದಲು ಅವಕಾಶ ಸಿಗುವ ಎಲ್ಲರೂ ಅದೃಷ್ಟವಂತರು ಎಂದು ನಾ ಪುನರುಚ್ಚಿಸುತ್ತಾ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಕಾರಣ ಇಲ್ಲಿ ಕಳೆದ ಜೀವನ ಮುಗಿಯದ ಒಂದು ಸುಂದರ ಕವನ. 

                                                    

No comments:

Post a Comment