ಸ್ನೇಹಿತರ ಸಲಹೆಯಂತೆ ಎಸ್. ಎಲ್. ಭೈರಪ್ಪರವರ ಆವರಣ ಪುಸ್ತಕವನ್ನು ಓದಿದೆ. ಮೂರು ದಿನಗಳಿಂದ ಮಾತುಗಳಿಗಿಂತ ಬರೀ ಮೌನವೇ ಆವರಿಸಿದೆ. ಬಹಳ ಗೊಂದಲಗಳು ಮನಸ್ಸಿನಲ್ಲಿ!!! ಇತಿಹಾಸವನ್ನೊದದೇ ಮಾತನಾಡುವ ನಮ್ಮೆಲ್ಲರ ಮಧ್ಯದಲ್ಲಿ ಎಷ್ಟು ಜ್ಞಾನದ ಅವಶ್ಯಕತೆಯಿದೆ ಎಂದೆನಿಸತೊಡಗಿದೆ.ನಾನೊಬ್ಬ ಸೆಕ್ಯುಲರ್ ಎಂದು ಸುಮ್ಮನೆ ಬಿಂಬಿಸಿಕೊಳ್ಳುವ ಎಷ್ಟೋ ಜನರನ್ನು ಕರೆದು ವಿವರವಾಗಿ ಮಾತನಾಡುವ ಆಸೆಯಿದ್ದರೂ ಅವರ್ಯಾರು ಕೂಡ ನಾ ಹೇಳುವ ಮಾತುಗಳನ್ನು ಒಪ್ಪಲಾರಾರು ಅನ್ನುವ ಒಂದು ವಿಷಯವಾದರೆ ನನಗೆ ಇನ್ನೂ ಅಷ್ಟು ಹಿಡಿತವಿಲ್ಲ ಎನ್ನುವ ಭಾದೆ ಮತ್ತೋ ಈ ಮನಸ್ಸು ಬೇರೆ ನೀನೊಬ್ಬ ಅರ್ದ ತುಂಬಿದ ಕೊಡ ಎಂದು ಕೂಗುತ್ತಿತ್ತು. ಅವರಿಗೆ ತಿಳಿಸುವ ಒಂದೇ ಮಾರ್ಗವೆಂದರೆ ಆವರಣದಂತಹ ಪುಸ್ತಕಗಳನ್ನು ಓದಲು ಸಲಹೆ ನೀಡುವುದು ಎಂದು ಯೋಚಿಸುತ್ತಿದ್ದಾಗ ಮೊನ್ನೆ ನನ್ನ ಸ್ನೇಹಿತ ಪೂರ್ಣಚಂದ್ರ ಮನೆಗೆ ಬಂದಿದ್ದ. ಸಿಕ್ಕಾಗ ಅವನೆಡೆ ರಾಜಕೀಯದ ಆಗು ಹೋಗುಗಳನ್ನು ಚರ್ಚಿಸುವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ. ನಾ ಕೇಳಿದೆ "ಇಲ್ಲಿ ಎಲ್ಲರೂ ಬುದ್ದಿವಂತರೆ ಇರುವಾಗ ಯಾವುದಾದರೂ ಒಂದು ವಿಷಯವನ್ನು ಯಾಕೆ ಪೂರ್ಣ ತಿಳಿಯದೆ ಪ್ರಜಾಪ್ರಭುತ್ವವನ್ನು ಅಣುಕಿಸುವಂತೆ ಹಕ್ಕುಗಳನ್ನು ಪ್ರದರ್ಶನ ಮಾಡುವುದು?". ಅವನು ಸ್ವಲ್ಪ ಬುದ್ದಿಜೀವಿಯ ತರಾ ನನ್ನನ್ನು ಅಣುಕಿಸುವುದು ನನ್ನಗೆ ತಿಳಿದಿದೆ ಎಂದರೂ ಸರಿಯಾದ ಉತ್ತರವನ್ನು ನಾನು ನಿರೀಕ್ಷಿಸುತ್ತಿದ್ದೆ. ಅವನು ಹೀಗುತ್ತರಿಸಿದ "ಇರುವ ಜಂಜಾಟದಲ್ಲಿ ಅಷ್ಟು ಸಮಯವೆಲ್ಲಿದೆ ಎಲ್ಲರಿಗೂ ಆ ನಿನ್ನ ಇತಿಹಾಸವನ್ನೋದಿ ವಿಮರ್ಷೆ ಮಾಡಲು!, ಸಮಯ ಸಿಕ್ಕಾಗ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನೋದಿ ಅವರವರ ಲೋಕಜ್ಞಾನಕ್ಕೆ ತಕ್ಕಂತೆ ವಾದಗಳನ್ನು ಮಂಡಿಸುತ್ತಾರೆ.ಯಾರಾದರೂ ಒಬ್ಬ ಒಳ್ಳೆ ನಾಯಕನು ಒಂದು ತಪ್ಪು ಮಾಡಿದರೆ ಅದನ್ನು ಸಂಪೂರ್ಣವಾಗಿ ವಿಮರ್ಷೆ ಮಾಡಿ ಅದಕ್ಕೆ ಸರಿಯಾದ ಸಲಹೆಗಳನ್ನು ಕೊಡುವ ಜನರೆಷ್ಟಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಹೋಗಬಾರದು. ಹಳೆಯ ಇತಿಹಾಸಗಳನ್ನು ಕೆಣಕುವ ತಾಳ್ಮೆ ಮತ್ತು ಧ್ಯೆರ್ಯ ಎಷ್ಟು ಜನಕ್ಕಿದೆ ಹೇಳು ನೋಡೋಣ" ನನಗೆ ಅವನ ಉತ್ತರ ಸದ್ಯದ ಪರಿಸ್ಥಿತಿಗೆ ಸರಿಯಾಗಿದೆಯೆಂದು ಅನಿಸಿದರೂ ಮತ್ತೆ ಪ್ರಶ್ನಿಸಿದೆ. "ಸರಿ ನೀ ಹೇಳಿದ ಹಾಗೆ ತಾಳ್ಮೆ ಧ್ಯೆರ್ಯವಿಲ್ಲವೆಂದು ಕೊಳ್ಳೋಣ, ನಾವು ಇತಿಹಾಸವನ್ನು ಕೆದಕುವುದು ಬೇಡ ಆದರೆ ಅದನ್ನು ತಿಳಿದಾಗ ಮಾತ್ರವೇ ತಾನೇ ಹಿಂದಿನ ದಿನಗಳಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಸಿಗುವುದು".
ಪೂರ್ಣ ಸ್ವಲ್ಪ ವಿರಾಮ ನೀಡಿ ಮತ್ತೆ ಹೇಳಿದ "ನೋಡು ಈಗ ದಿನಗಳು ಬದಲಾಗಿದೆ, ನೀ ಈಗ ಹೋಗಿ ಹಳೆಯ ವಿಷಯಗಳನ್ನು ಕೆದಕಿಕೊಂಡು ಹೋದರೆ ನಿನ್ನನ್ನು ಮತೀಯವಾದಿ ಎನ್ನುತ್ತಾರೆ, ನಿನ್ನ ವಿಷಯಗಳಲ್ಲಿ ಅವರಿಗೆ ನಂಬಿಕೆಯಿಲ್ಲವೆಂದ ಮೇಲೆ ಮತ್ತೆ ನೀ ಹೇಳುವುದನ್ನು ಅವರೇಕೆ ಕೇಳುತ್ತಾರೆ. ಮತ್ತೆ ಕೆಲವು ಬುದ್ದಿವಾದಿಗಳು ಹೇಳುವ ಪ್ರಕಾರ ನೀ ಹೇಳುವುದು ಸರಿ ಇರದೇ ಇರಬಹುದು ಮತ್ತು ನೀ ಹೇಳಲು ಹೊರಟಿರುವ ಆ ಜನರ ವಿಚಾರಗಳೇ ಸರಿ ಇರಬಹುದಲ್ಲವೇ" ಕೊನೆಗೆ ಅವನ ಮಾತುಗಳಲ್ಲಿ ನನಗೆ ಉತ್ತರ ದೊರಕಿತು, ಆ ಅವಕಾಶವನ್ನು ಬಳಸಿಕೊಂಡ ನಾನು ಹೇಳಿದೆ " ಅದಕ್ಕೆ ನಾನು ಕೂಡ ಹೇಳಿದ್ದು, ವಾದ ಇಲ್ಲಿ ನಾನು ಸರಿ ಎಂದಲ್ಲ ಆದರೆ ಯಾರೇ ವಾದ ಮಾಡುವಾಗ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಗಳು ಇರಬೇಕು. ಅದರಲ್ಲೂ ಇತ್ತೀಚಿನ ದಿನದ ರಾಜಕೀಯವಾಗಿ ಮಾತನಾಡಲು ಹೊರಟರೆ ಇತಿಹಾಸದ ಜ್ಞಾನವಿರಬೇಕಾದ ಅವಶ್ಯಕತೆ ಇದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈಗ ನಿನ್ನನ್ನೇ ನೋಡು ನನಗೆ ಸರಿಯಾಗಿ ಅರ್ಥವಾಗುವಂತೆ ಉತ್ತರಿಸಿದ್ದೀಯವೆಂದರೆ ಕಾರಣ ನೀನು ಓದಿರುವ ಅಷ್ಟೂ ಪುಸ್ತಕಗಳು, ಹೌದಲ್ಲವೇ !?". ಪೂರ್ಣ ಅದನ್ನು ಸಮ್ಮತಿಸುತ್ತ ಮತ್ತಷ್ಟು ಹೇಳಿದ "ತಪ್ಪು ಸರಿ ಯಾವುದು ಎನ್ನುವುದನ್ನು ಯಾರೂ ಹೇಳಲಾಗುವುದಿಲ್ಲ. ಅವುಗಳನ್ನು ತಿಳಿಯಲು ಉತ್ತಮ ಬರಹಗಳನ್ನು ಓದುವ ಅಗತ್ಯವಿದೆ. ಕಳೆದ ಹತ್ತದಿನೈದು ವರ್ಷಗಳಿಂದ ಮಾದ್ಯಮದವರನ್ನು ಅಷ್ಟು ಸುಲಭವಾಗಿ ನಂಬುವುದೇ ಕಷ್ಟ. ಆದ್ದರಿಂದ ಯಾವುದೇ ಒಂದು ವಿಷಯವನ್ನು ಒಂದು ಮಾಧ್ಯಮದಲ್ಲಿ ಓದಿದಾಗ ಅದರ ಬಗ್ಗೆ ಮತ್ತಷ್ಟು ಜ್ಞಾನವನ್ನು ಬೇರೆ ನಂಬಲರ್ಹವಾದ ಮೂಲಗಳಿಂದ ಪಡೆದು, ಸ್ವಂತ ಜ್ಞಾನದಿಂದ ವಿಮರ್ಷೆ ಮಾಡಿ ಸ್ವಹಿತಾಸಕ್ತಿಯಿಲ್ಲದೇ ದೇಶದ ಬಗ್ಗೆ ಯೋಚಿಸಿ ವಾದಗಳನ್ನು ಮಂಡಿಸುವುದು ಎಲ್ಲರೂ ಮಾಡಬೇಕಾದ ಕರ್ತವ್ಯ.ಸಮಯ ಸಿಕ್ಕರೆ ತೇಜಸ್ವಿಯವರ ಮತ್ತು ಭೈರಪ್ಪರವರ ಮತ್ತಷ್ಟು ಪುಸ್ತಕಗಳನ್ನ ಕೂಡ ಓದು".
ಇದೆಲ್ಲ ನಡೆಯುತ್ತಿರುವಾಗಲೇ ಹೊರಗಡೆ ಇದ್ದಕ್ಕಿದ್ದಂತೆ ಮಳೆ ಜೋರಾಗಿ ಸುರಿಯಲು ಶುರುವಾಯಿತು.ನಾವಿಬ್ಬರೂ ಮಾತು ನಿಲ್ಲಿಸಿ ಮಳೆಯನ್ನೇ ನೋಡುತ್ತಾ ಮೌನಕ್ಕೆ ಶರಣಾದೆವು. ಇಪ್ಪತ್ತು ನಿಮಿಷ ಜೋರಾಗಿ ಸುರಿದ ಮಳೆ ಮತ್ತೆ ನಿಂತಾಗ ಹೊರಗಡೆ ಪ್ರಶಾಂತ ವಾತವಾರಣವಿತ್ತು. ಇಬ್ಬರೂ ಒಂದು ಸಲ ನಕ್ಕು ಅಲ್ಲೇ ಫ್ಯಾಶನ್ ಕಾಲೇಜಿನ ಮೂಲೆಯಲ್ಲಿರುವ ಚೆಟ್ಟಾನ ಅಂಗಡಿಯಲ್ಲಿ ಚಹಾ ಹೀರಿದ ನಂತರ ಮತ್ತೆ ಮನೆಗೆ ಬಂದು ಅದೇ ಯೋಚನೆಯಲ್ಲಿ ಕಣ್ಮುಚ್ಚಿದೆ. ಮತ್ತೆ ಆವರಣ ಪುಸ್ತಕ ಕಣ್ಮುಂದೆ ಬರತೊಡಗಿತು. ಇತಿಹಾಸದ ಪುಟಗಳನ್ನು ಕದಡಿ ಎಲ್ಲ ಮೂಲಗಳನ್ನು ಹಿಡಿದು ಬರೆದಿರುವ ಪುಸ್ತಕವನ್ನು ಓದಿದ ನನಗೆ ನನ್ನ ಯೋಚನೆಗಳಲ್ಲಿ ಯಾವುದೇ ಬದಲಾವಣೆಗಳು ಬಂದಿರಲಿಲ್ಲವಾದರೂ ಸತ್ಯದ ಅರಿವಾಗಿದೆಯೇನೋ ಎಂಬ ನಂಬಿಕೆಯುಂಟಾಗಿರುವುದಂತೂ ಸತ್ಯ.ಇಂತಹ ಇತಿಹಾಸವನ್ನೂ ತಿಳಿದು ಸಹ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ನಾವೆಲ್ಲರೂ ಒಂದೆ ಎನ್ನುವನಷ್ಟೇ ನಿಜವಾದ ಸೆಕ್ಯುಲರ್ ಎನಿಸುತ್ತಿದೆ. ಕೊನೆಗೆ ಹಿಂದಿನದನ್ನು ಹಿಂದಿಗೆ ಬಿಟ್ಟು ಮುಂದೆಯಾದರೂ ಈ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಯಾಕೋ ಇಂದು ಆಫೀಸಿಗೆ ರಜ ಹಾಕಿ ಮನೆಯಲ್ಲೇ ಧೀರ್ಘಾಲೋಚನೆ ಮಾಡುತ್ತಿದ್ದಾಗ ಯಾರಲ್ಲಾದರೂ ಮಾತನಾಡೋಣ ಎಂದೆನಿಸಿದಾಗ ನೆನಪಾದದ್ದು ಈ ನನ್ನ ಬ್ಲಾಗ್. ಮನಸ್ಸಿನಲ್ಲಿ ತುಂಬಾ ಗೊಂದಲಗಳಿದ್ದು ವ್ಯಥೆಯಾಗುತ್ತಿದ್ದರೆ ಮಾತೃಭಾಷೆಯಲ್ಲಿ ಮಾತ್ರ ಭಾವನೆಗಳನ್ನು ಹೊರಹಾಕಲು ಸಾಧ್ಯ ಆದ್ದರಿಂದ ನನ್ನ ಮಾತೃಭಾಷೆಯಲ್ಲಿ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ಇಲ್ಲಿ ನಾನು ಯಾರನ್ನು ಬೆಟ್ಟು ಮಾಡಿ ತೋರಿಸುತ್ತಿಲ್ಲ, ಕಾರಣ ಎಲ್ಲರೂ ಅವರವರ ಅರಿವಿನಲ್ಲಿ ಅವರು ಸರಿ ಮಾಡುತ್ತಿದ್ದಾರೆ ಎಂದು ಅಂದುಕೊಂಡಿರುತ್ತಾರೆ ಆದರೆ ನಾವು ಮಾಡುತ್ತಿರುವ ಕೆಲಸದಲ್ಲಿ ದೇಶದ ಹಿತಾಸಕ್ತಿಯನ್ನು ಕಡೆಗಣಿಸದಿದ್ದರೆ ಸಾಕಷ್ಟೆ. ನಾನು ಎಲ್ಲರೂ ಎಂದಾಗ ಅದರಲ್ಲಿ ನಾನೂ ಒಬ್ಬ ಎಂಬ ಅರಿವಿದೆ. ಕೊನೆಯದಾಗಿ ಹೇಳುವುದೆಂದರೆ ಸಮಯ ಸಿಕ್ಕಾಗ ಎಸ್. ಎಲ್. ಭೈರಪ್ಪರವರ ಆವರಣ ಪುಸ್ತಕ ಓದಿ. ಈ ಪುಸ್ತಕದ ಬಗೆಗೆ ನನ್ನ ಗೆಳತಿಯ ಜೊತೆ ಮಾತನಾಡುತ್ತಿದ್ದಾಗ ಅವಳು ತಾನು ಆಗಲೇ ಅದನ್ನು ಓದಿರುವುದಾಗಿ ತಿಳಿಸಿ ಮತ್ತು ನನ್ನ ಮನಸನ್ನು ಅರಿತು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಳು ಅವಳಿಗೆ ನನ್ನ ಧನ್ಯವಾದಗಳು. ಇಂತಹ ಪುಸ್ತಕವನ್ನು ಓದಲು ಪ್ರೇರಪಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಮತ್ತಷ್ಟು ಓದುವ ಆಸೆಯಾಗಿದೆ. ಮತ್ತಷ್ಟು ಒಳ್ಳೆ ಪುಸ್ತಕಗಳನ್ನು ನನಗೆ ತಿಳಿಸಿ, ಓದುವ ಪ್ರಯತ್ನ ಮಾಡುತ್ತೇನೆ!! ಎಲ್ಲರಿಗು ನಮಸ್ಕಾರ, ನಾ ಹೋಗಿ ಬರಲೇ?? ಮತ್ತೆ ಸಿಗೋಣ ಮತ್ತೊ0ದು ಬರಹದ ಜೊತೆ.
ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಈ ಬ್ಲಾಗ್ ನ ಫ಼ೇಸ್ ಬುಕ್ ಪೇಜ್ ನಲ್ಲಿ ಒಂದು ಶೇರ್ ಮಾಡಿ ಮುಂದಿನ ಬರಹಗಳಿಗೆ ಇಲ್ಲಿ ಕ್ಲಿಕ್ಕಿಸಿ>> https://www.facebook.com/LifeAndLeisureBlog

No comments:
Post a Comment