Friday, 14 July 2017

ಸತ್ಯಾನ್ವೇಷಣೆ - ಬೇಕೋ ಅಥವಾ ಬೇಡವೋ .


------------------------------1-----------------------------------
ಹಠಾತ್ತನೆ ನಿದ್ದೆಯಿಂದಿದ್ದೆ. ಸಮಯ ಬೆಳಗಿನ ಜಾವ ಐದಾಗಿತ್ತು. ಪಕ್ಕದಲ್ಲೇ ಹೆಂಡತಿ ಪ್ರಪಂಚ ತಲೆ ಮೇಲೆ ಬಿದ್ರು ತಲೆ ಕೆಡಿಸ್ಕೊಳ್ದೆ ಇರೋರ್ ತರ ತಣ್ಣಗೆ ನಿದ್ದೆ ಮಾಡ್ತಾ ಇದ್ಲು. ಬೆಡ್ ಲೈಟ್ ಮಂದವಾಗಿ ಉರಿಯುತ್ತಿತ್ತು. ಇದ್ದಕ್ಕಿದ್ದಂತೆ ಮನೆ ಹೊರಗಡೆ ಸದ್ದು ಜೋರಾಗಲು ಶುರುವಾಯಿತು. ಮಂಚದಿಂದ ಆತುರಾತುರವಾಗಿ ನೆಗೆದು ಹೊರಗೋಡಿದೆ. ವಿಮಾನವೊಂದು ತಲೆಯ ನೆತ್ತಿಯ ಹತ್ತಿರದಲ್ಲೇ ಹಾರುತ್ತಿದ್ದ ಅನುಭವವಾಯಿತು. ಸೊಯ್ಯನೆ ಬಂದ ವಿಮಾನ ಭರ್ರನೇ ಹಾರಿ ಹೋಯಿತು. ಒಂದು ಕ್ಷಣಕ್ಕೆ ಗರಬಡಿದಂತಾಯಿತು ಕಾರಣ ಅದು ಯುದ್ಧ ವಿಮಾನ. ಏನಾಗುತ್ತಿದೆಯೆಂದು ತಿಳಿಯದಾಗಿ ಯೋಚಿಸುತ್ತಾ ನಿಂತೆ. ಮತ್ತೆ ಸದ್ದು ಜೋರಾಗತೊಡಗಿತು, ಸುತ್ತಲೂ ನೋಡಿದೆ. ಹಳೇ ಎತ್ತಿನಗಾಡಿಯೊಂದು ನಿಂತಿದೆ, ನಾ ತಿಪಟೂರಿನ ಬಾಗುವಾಳದ ನನ್ನಜ್ಜಿಯ ಮನೆ ಮುಂದೆ ನಿಂತಿದ್ದೇನೆ. ಅಲ್ಲೇ ಪಡಸಾಲೆಯಲ್ಲಿ ನೇತುಹಾಕಿದ್ದ ಕ್ಯಾಲೆಂಡರ್ವೊಂದನ್ನು ದಿಟ್ಟಿಸಿದೆ. 1962 ರ ಜನವರಿ ತಿಂಗಳ 28 ನೇ ತಾರೀಖು ತೋರಿಸುತ್ತಿತ್ತು. ಮತ್ತೆ ಸದ್ದು ಜೋರಾಗತೊಡಗಿತು. ಊರಿನ ಹೊರಗಿನ ಮೈದಾನದತ್ತ ನಡೆಯತೊಡಗಿದೆ. ಅಲ್ಲಿ ಕಂಡದ್ದು ಹತ್ತಾರು ಹೆಲಿಕಾಪ್ಟರ್ ಗಳು ಹಾರಿ ಬರುತ್ತಿದ್ದಿದ್ದು. ಗಾಬರಿಗೊಂಡವನೆ ಮೈದಾನದ ಮೂಲೆಯಲ್ಲಿದ್ದ ಚಿಕ್ಕ ದೇವಸ್ಥಾನದ ನೆರಳಿಗೆಂದಿದ್ದ ಮರದ ಕೆಳಗೆ ಕೂತು ಯೋಚಿಸತೊಡಗಿದೆ. ಮತ್ತೆ ಸದ್ದು ಜೋರಾಗತೊಡಗಿತು. ತಲೆ ಎತ್ತಿದರೆ ಹೆಲಿಕಾಪ್ಟರ್ನಿಂದ ಸೈನಿಕರು ಹಗ್ಗದ ಮೂಲಕ ಕೆಳಗಿಳಿಯುತ್ತಿದ್ದಾರೆ. ಊರಿನ ಜನರೆಲ್ಲ ನುಗ್ಗಿ ಬರುತ್ತಿದ್ದಾರೆ, ನಾ ಬೆವರತೊಡಗಿದೆ. ಇದ್ದಕ್ಕಿದ್ದಂತೆ ಅಜ್ಜಿ ಕೂಗಿದ ಅನುಭವವಾಯಿತು. ಮತ್ತೆ ಎದ್ದು ನೋಡಿದರೆ, ಬೆಡ್ ಮೇಲೆಯೇ ಇದ್ದೇನೆ. ಅಯ್ಯೋ ಕನಸು ಎಂದು ಅರಿವಾಗಿ ಎದ್ದು ಬಂದು ಹೊರಗೆ ಕುಳಿತೆ. ಹೊರಗಡೆ ಸೂರ್ಯ ಕಣ್ಣು ಮುಚ್ಚಾಲೆ ಆಡ ತೊಡಗಿದ್ದ. ನಾವು ಬೆಂಗಳೂರಿನಿಂದ ಬಂದಾಗಲೇ ಮೂರು ದಿನಗಳಾಗಿತ್ತು. ಸಿಕ್ಕಿಂ ಪ್ರವಾಸಕ್ಕೆಂದು ಹೆಂಡತಿಯೊಡನೆ ಬಂದಿರಿವುದು ಅರಿವಾಗಿ ಹಿಂದೆ ಬಗ್ಗಿ ನೋಡಿದೆ. ಹೆಂಡತಿ ಹೋಟೆಲಿನ ರೋಮಿನಲ್ಲಿ ನೆಮ್ಮದಿಯಾಗಿ ಮಲಗಿರುವುದ ನೋಡಿ ನಿಟ್ಟುಸಿರು ಬಿಟ್ಟೆ.

------------------------------2-------------------------------------
ವೆರಾಂಡಾದಲ್ಲಿ ಕೂತಿದ್ದವನಿಗೆ ಹೋಟೆಲಿನ ಹುಡುಗನೊಬ್ಬ ಇಂಗ್ಲಿಷ್ ದಿನಪತ್ರಿಕೆಯ ಹೊತ್ತು ಬಂದ. ಅದರಲ್ಲಿ ಮೊದಲನೆಯ ಪೇಜ್ನಲ್ಲೇ ದೊಡ್ಡದಾಗಿ ಬರೆದಿತ್ತು "ಇಂಡೋ ಚೈನಾ ಬಾರ್ಡರ್ ಟಸಲ್, ವೂ ಇಸ್ ಮೋರ್ ಪೋವರ್ಫುಲ್" . ಆ ಅಂಕಣವನ್ನೊಡತೊಡಗಿದೆ, ಅದರಲ್ಲಿ ಪ್ರಧಾನಮಂತ್ರಿಯವರನ್ನ ನೂರಾರು ಪ್ರಶ್ನೆಗಳನ್ನ ಕೇಳಿ ಬರೆಯಲಾಗಿತ್ತು. ಪ್ರಧಾನಮಂತ್ರಿಯ ತಾಕತ್ತಿನ ಬಗ್ಗೆ ಪ್ರಶ್ನಿಸಲಾಗಿತ್ತು. ಇದರಿಂದಾಗುವ ಪರಿಣಾಮಗಳ ಊಹಿಸಿ ಮೈ ಉರಿದು ಹೋಯಿತು. ಮಾಧ್ಯಮಗಳು ಸ್ವಲ್ಪವಾದರೂ ಸ್ಥಿತಪ್ರಜ್ಞೆಯನ್ನು ತೋರಿಸಬಾರದೆ ಎಂದೆನಿಸಿತು. ಇದೆ ಮಾಧ್ಯಮವನ್ನು ಸಾಮಾನ್ಯ ಜನರು ಓದುತ್ತಾರೆ, ಜನರು ರೊಚ್ಚಿಗೇಳುತ್ತಾರೆ, ರೊಚ್ಚಿಗೆದ್ದು ಸರ್ಕಾರಗಳನ್ನ ದೂಷಿಸುತ್ತಾರೆ. ಯುದ್ಧದ ಪರಿಸ್ತಿಯೇ ಇಲ್ಲದಿದ್ದರೂ ಅಂಥದೊಂದು ಪರಿಸ್ಥಿಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ಈ ರಾಜಕಾರಣಿಗಳು ಪರಿಸ್ಥಿಯನ್ನು ಅರ್ಥ ಮಾಡಿಕೊಳ್ಳದೆ ಯುದ್ಧದ ತಯಾರಿಗಳು ಇಲ್ಲದೆ ಜನ ಮೆಚ್ಚಿಸಲು ಸೈನ್ಯವನ್ನು ಯುದ್ಧದ ಮಡಿಲಿಗೆ ದೂಕಿಬಿಡುತ್ತಾರೆ ಎಂದೆನಿಸಿತು. ಮತ್ತೊಂದು ಮನ ಛೇ ನಾನೇನಾದರೂ ಹೇಡಿಯೇ ಎಂದು ಕೇಳತೊಡಗಿತು, ಆ ಮನಕ್ಕೆ ಮತ್ತೆ ಉತ್ತರಿಸಿದೆ. ಇದು ಧ್ಯೆರ್ಯ ಅಥವಾ ಹೇಡಿಯ ಪ್ರಶ್ನೆ ಬರುವುದಿಲ್ಲ, ಕಾರಣ ನಮಗೆ ಪರಿಸ್ಥಿತಿಯ ಅರಿವಿರುವುದಿಲ್ಲ. ಮೊನ್ನೆ ಸೈನಿಕ ಸಹೋದರನೊಬ್ಬ ಬರೆದ ಮಾತುಗಳು ನೆನಪಾದವು. ಅವನು ಬರೆದ ಮೊದಲ ಸಾಲಿನಲ್ಲೇ "ಸೈನಿಕ ಎಂದೊಡನೆ ನಿಮಗೆ ಬರುವ ಯೋಚನೆಗಳನೇಳಿ?" ಎಂದು ಕೇಳುತ್ತಾನೆ. ಅದಕ್ಕೆ ಸೈನಿಕನೇ ಉತ್ತರಿಸುತ್ತಾ ದೇಶಪ್ರೇಮಿ, ಸಾಹಸಿ, ಗಂಡುಗಲಿ ಮತ್ತಿತರ ಪದಗಳು ಬಂದಿರಬಹುದು ಅದರ ಜೊತೆ ಸೈನಿಕರು ಒಬ್ಬ ಸಾಮಾನ್ಯ ಮನುಷ್ಯ ಅವನಿಗೂ ಕೂಡ ಭಾವನೆಗಳಿವೆ ಎಂಬ ಯೋಚನೆ ಬರುತ್ತಿದೆಯಾ ಎಂದು ಓದುಗರ ಮನವ ಘಾಸಿಗೊಳಿಸುತ್ತಾನೆ. ಮುಂದೆ ಬರೆಯುತ್ತಾ ಅವನ  ಸಾಲುಗಳು ಮೈನವಿರೇಳಿಸುತ್ತವೆ. ಸೈನಿಕನು ಸಾಯಲು ಸದಾ ಸಿದ್ಧನಿರುತ್ತಾನೆ ಅದಕ್ಕೆ ಸಾಮಾನ್ಯ ಜನರಿಗೆ ಅನುಮಾನವೇ ಬೇಡ ಆದರೆ ಅವನಿಗೆ ಇದೆ ಸಾಮಾನ್ಯ ಜನರ ಕಪಟವಾದ ಅನುಕಂಪ ಬೇಡ ಅವನಿಗೆ ಸಾಮಾನ್ಯ ಜನರ ನಿಜ ಪ್ರೀತಿ ಮತ್ತು ನಿಜ ಬೆಂಬಲವೊಂದಿದ್ದರೆ ಸಾಕೆನ್ನುತ್ತಾನೆ. ಇದನ್ನೆಲ್ಲ ನೆನೆಯುತ್ತ ಕುಳಿತಿದ್ದ ನನಗೆ ಇದ್ದಕ್ಕಿದ್ದಂತೆ ಕೇಳಿದ್ದು ಜೋರಾಗಿ ಗುಂಡಿನ ಶಬ್ದ ಕೇಳಲು ಶುರುವಾಯಿತು. ಎಲ್ಲಿದ್ದೇನೆ, ಸಿಕ್ಕಿಂ ನಲ್ಲಿ, ಭಾರತ ಚೈನಾ ಬಾರ್ಡರ್ ಕೂಡ. ಅಯ್ಯೋ ಪರಿಸ್ಥಿತಿ ಕೈ ಮೀರಿ ಹೋಗತೊಡಗಿತೆ. ನೆಮ್ಮದಿಯಿಂದ ಮಲಗಿದ್ದ ಹೆಂಡತಿ ರೂಮಿನಿಂದ ಎದ್ದು ನನ್ನತ್ತ ಓಡಿ ಬರುತ್ತಿದ್ದಾಳೆ. ಹೋಟೆಲ್ ನವರೆಲ್ಲ ಗಾಬರಿಯಾಗಿದ್ದಾರೆ. ಗುಂಡಿನ ಸುರಿಮಳೆಯೇ ಆಗುತ್ತಿದೆ ಆದರೆ ಎಲ್ಲಿಯೆಂದು ತಿಳಿಯುತ್ತಿಲ್ಲ. ಮತ್ತೆ ಮೈ ಅದುರುತ್ತಿದೆ. ಕೈ ನಡುಗುತ್ತಿವೆ, ಸಿಕ್ಕಿಂನ ಚಳಿಯ ಲೆಕ್ಕವಿಲ್ಲದೆ ಹಣೆಯಿಂದ ಬೆವರು ಸುರಿಯುತ್ತಿದೆ. ಏನು ತಿಳಿಯದ ಅಮಾಯಕ ಪರಿಸ್ಥಿತಿ. ಯಾರೋ ಹಿಂದೆಯಿಂದ ಕೈ ಹಿಡಿದು ಎಳೆದಂತಾದರಿಂದ ಹಿಂದೆ ತಿರುಗಲೆತ್ನಿಸಿದೆ. ತಿರುಗಲು ಸಾಧ್ಯವಾಗುತ್ತಿಲ್ಲ ಆದರೂ ಪ್ರಯತ್ನ ಜೋರಾಗಿಯೇ ಮಾಡಿದೆ. ಇದೆಲ್ಲದರ ನಡುವೆ ಹೆಂಡತಿಯ ಕೂಗಿಗೆ ಹಠಾತ್ತಾಗಿ ಮತ್ತೊಂದು ಸಲ ಎದ್ದು ನಿಂತ ಅನುಭವವಾಯಿತು. ಕಣ್ಣು ಬಿಟ್ಟು ನೋಡಿದರೆ ಹಾಸಿಗೆಯಲ್ಲೇ ಇದ್ದೇನೆ. . ಹೆಂಡತಿಯು ಆರಾಮವಾಗೆ ಇದ್ದಾಳೆ. ಮತ್ತೆ ಕನಸೆಂದು ನೆನೆದು ನಿಟ್ಟುಸಿರು ಬಿಟ್ಟೆ. ಮತ್ತೆ ಹೇಳಿಕಾಪ್ಟರ್ಗಳೇಲ್ಲಿ, ಯುದ್ಧ ವಿಮಾನಗಳೆಲ್ಲಿ ಎಂಬುದನ್ನು ನೆನೆಯಲೆತ್ನಿಸಿದೆ. ನಮ್ಮನೆ ಎಚ್ ಎಸ್ ಆರ್ ಲೇ ಔಟ್ ನಲ್ಲಿರುವ ಆರ್ಮಿ ಟ್ರೈನಿಂಗ್ ಸೆಂಟರ್ ನ ಪಕ್ಕದಲ್ಲಿದೆ, ಪ್ರತಿ ಗುರುವಾರ ಬಾಂಬ್ ಸ್ಪೋಟಿಸಿ, ಬಂದೂಕಿನ ಶಸ್ತ್ರಾಭ್ಯಾಸ ಮಾಡುತ್ತಾರೆ. ಅದರ ಸದ್ದು ಜೋರಾಗಿಯೇ ಕೇಳಿಸುತ್ತಿದೆ. ಕನಸಿನೊಳಗೊಂದು ಕನಸು, ಇದೊಳ್ಳೆ ಇನ್ಸೆಪ್ಶನ್ ಕನಸಾಯಿತಲ್ಲ ಎಂದು ಬಗೆದು ಒಂದು ಲೋಟ ನೀರನ್ನು ಒಂದೇ ಸಮನೆ ಕುಡಿದು ಅಲ್ಲೇ ಸೋಫಾ ಮೇಲೆ ಕುಳಿತು ಬಲಕ್ಕೆ ತಿರುಗಿದಾಗ ಕಂಡದ್ದು  ಬ್ರಿಗೇಡಿಯರ್ ಜಾನ್ ಪಿ ದಳವಿಯವರ "ಹಿಮಾಲಯನ್ ಬ್ಲ್ಯಂಡರ್" ಪುಸ್ತಕ.

--------------------------------3----------------------------------

ನಿಜ ಲೋಕಕ್ಕೆ ಬಂದು ಎಲ್ಲವೂ ಶಾಂತವಾಗಿರುವುದನ್ನು ಕಂಡು ನೆಮ್ಮದಿಯೆನಿಸಿತು. ಈ ಕಾಲಕ್ಕೆ ಯುದ್ಧವಾಗುವುದು ಸುಳ್ಳೆಂದು ಅರಿದಿರುವೆ ನಾನು. ಕಷ್ಟ ಪಟ್ಟು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಭದ್ರವಾಗಿ ಕಟ್ಟುಕೊಳ್ಳುವ ನಿಟ್ಟಿನಲ್ಲಿರುವ ಭಾರತ ಮತ್ತು ಚೈನಾಗಳಿಗೆರಡು ದೇಶಕ್ಕೆ ಯುದ್ಧ ಮಾಡುವ ಯಾವುದೇ ಯೋಚನೆಗಳಿರುವುದಿಲ್ಲ. ಸರ್ಕಾರದ ಮೇಲೆ ಸಾಮನ್ಯ ಜನರು ವಿಷಯಗಳ ಅರಿಯದೆ ಅನವಶ್ಯಕವಾಗಿ ಒತ್ತಡ ಹೇರದೆ, ಸರ್ಕಾರದವರು ಸೈನ್ಯಕ್ಕೆ ಒಂದು ಕೈ ಹೆಚ್ಚಿನ ಅಧಿಕಾರ ನೀಡಿದರೆ ಸಮಸ್ಯೆಗಳು ಸಾಮಾನ್ಯವಾಗಿ ಬಗೆ ಹರಿದು ಹೋಗುತ್ತವೆಂದು ಅನಿಸುತ್ತದೆ. ಎಲ್ಲ ಕನಸುಗಳು ನನಸಾಗಲಿ ಎಂದು ಹಾರೈಸುವ ನಾನು ಈ ಕನಸೊಂದು ನನಸಾಗದಿರಲಿ ಎಂದು ಹಾರೈಸುವೆ.

No comments:

Post a Comment