Thursday, 29 June 2017

ನಮ್ಮೂರು , ಸಿಂಗ್ರಾವುತನಹಳ್ಳಿ

ನಮ್ಮೂರು -  ಸಿಂಗ್ರಾವುತನಹಳ್ಳಿ .

ಮೊಬೈಲ್ ನೆಟ್ವರ್ಕ್ ಗೆ ಮೂಡ್ ಇದ್ರೆ ಮಾತ್ರ ಕಡ್ಡಿ ತೋರ್ಸೋದು ಇಲ್ಲ ಅಂದ್ರೆ ಜಪ್ಪಯ್ಯ ಅಂದ್ರು ಕಡ್ಡಿ ಏರಲ್ಲ. ಬೆಳಿಗ್ಗೆ ಎದ್ದೊವ್ನೆ ಮನೆ ಮುಂದೆ ರಸ್ತೇಲಿ ನಿಂತ ನನಗೆ ಅದ್ಭುತ ಪ್ರಪಂಚಾನೆ ಕಾಣಿಸ್ತು. ಒಂದು ಲೋಟ ಸ್ಟೀಲ್ ಕಪ್ನಲ್ಲಿ ಕಾಫಿ ಹಿಡ್ಕೊಂಡು, ಮಂಡಿ ಮುಚ್ಚೋ ಚಡ್ಡಿ ಹಾಕ್ಕೊಂಡು ಬೆಳಿಗ್ಗೆ ಬೀಳೋ ಬಿಸ್ಲು ಕಾಯ್ಸ್ತಾ ಮನೆ ಮುಂದಿರೋ ಸೇತ್ವೇ ಮೇಲೆ ಕೂತ್ಕೊಂಡೆ.
----------------------------- 1----------------------------------

ಸಿ ಡಿ 100 (ಸಿ ಡಿ ಹಂಡ್ರೆಡ್ ಅಂತ ಹೇಳ್ಕಳಿ):

ಹೀರೊ ಹೊಂಡ ಕಂಪೆನಿಯವ ಉದ್ದಾರ ಆದ ಮಾಡೆಲ್ ಇದು. ಎಷ್ಟೋ ಜನಕ್ಕೆ ಸಿ ಡಿ ಹಂಡ್ರೆಡ್ ಅಂದ್ರೆ ಗೊತ್ತೇ ಆಗಲ್ಲ ಬರೀ ಹೀರೊ ಹೊಂಡ ಅಂದ್ರಷ್ಟೇ ಅರ್ಥ ಆಗೋದು. ಸೋಮಣ್ಣ ನಮ್ಮೂರ್ ಗ್ರಾಮ ಪಂಚಾಯಿತಿ ಸದಸ್ಯ ಸ್ವಲ್ಪ ಮಟ್ಟಿಗೆ ದೊಡ್ಡ ಕುಳ , ರಾಜಕೀಯ ವ್ಯಕ್ತಿ. ಇಬ್ರತ್ರ ಮಾತ್ರ ಬೈಕ್ ಇದ್ದಿದ್ದು ಅವಾಗ ನಮ್ಮೂರಲ್ಲಿ. ಅಂತದ್ರಲ್ಲಿ ನಮ್ಮ ಸೋಮಣ್ಣನ ಹತ್ರ ಒಂದು ಹೀರೋ ಹೊಂಡ ಇತ್ತು, ಅದೇ ಬೈಕ್ ನಲ್ಲೇ ಇಡೀ ಊರೇ ಬೈಕ್ ಓಡಿಸೋದು ಕಲ್ತಿದ್ದು ಅನ್ನಿ. ಕಲ್ಯೊದ್ ಇರ್ಲಿ  ಅದೆಷ್ಟು ಸಲ ಅವ್ರು ಬಿದ್ದು ಬೈಕನ್ನು ಯೆತ್ತಾಕಿದರೋ ಆದ್ರೆ ನಮ್ ಸೋಮಣ್ಣ ಮಾತ್ರ ಯೆರ್ಡ್ ಮಾತು ಬೈದು ಸುಮಕಾಗೈತೆ ಬಿಟ್ರೆ ಇನ್ನೇನು ಮಾಡಿಲ್ಲ.
ನಾ ಓಡಿಸೋಡ್ ಕಲ್ತಿದ್ದು ಅದೇ ಬೈಕ್ ನಲ್ಲೇ. ನಮ್ ಸೋಮಣ್ಣನೆ ಆ ಬೈಕ್ ನ ಸೆಕೆಂಡ್ ಹ್ಯಾಂಡ್ ತಂದಿದ್ದು , ಇವತ್ತಿಗೂ ಅವ್ರ ತಮ್ಮ  ಓಡಿಸ್ತಾ ಇದಾರೆ. ಮೈಲೇಜ್ ಅದ್ಭುತವಾಗೆ ಬರ್ತಾ ಇದೆ.

----------------------------------2---------------------------------

ಕಂತ್ರಿ ನಾಯಿ :

ಅಲ್ಲೇ ಒಂದು ಕಂತ್ರಿ ನಾಯಿ ಬಾಲ ಅಲ್ಲಾಡಿಸ್ಕೊಂಡು ನನ್ನನ್ನೇ ಗುರಾಯಿಸ್ತಾ ಮಲಗಿತ್ತು. ಅದನ್ನ ನೋಡಿದ್ರೆ ಮೊನ್ನೆ ಮೊನ್ನೆ ಮರಿ ಹಾಕಿರೋ ಬಾಣಂತಿ ನಾಯಿ ಇರ್ಬೇಕು ಅನ್ನಿಸ್ತು. ಪಾಪ ಅಂತ ಅನ್ಕೊಂಡು ಕೈಲಿರೋ ಬಿಸ್ಕೆಟ್ ಕೊಟ್ಟೆ ಬಡ್ಡಿಮಗಂದು ಕಂತ್ರಿ ನಾಯಿ ಮೂಸಿ ಕೂಡ ನೋಡ್ಬಾರ್ದಾ ! ಛೇ ಒಂದು ಬಿಸ್ಕೆಟ್ ಹಾಳಾಯ್ತಾಲ್ಲ ಅಂತ ಮನಸಲ್ಲೇ ಗೊಣಗಿ ಕಾಫೀ ಹೀರೋದ್ರಲ್ಲಿ ಮಗ್ನ ಆದೆ. ಆ ನಾಯಿಗೆ ನನ್ನ ನೋಡಿ ಇವನ್ಯಾರೋ ಪೂಜಾರಿ ಇರ್ಬೇಕು ಅನ್ನಿಸ್ತು ಅನ್ಸುತ್ತೆ , ಮುಖದ್ ಮೇಲೆ ಉಗಿಯೂರ್ ತರ ಒಂದ್ಸಲ ಗುರಾಯ್ಸಿ ಎದ್ದೊಯ್ತು. ಐದು ನಿಮಿಷ ಆದ್ಮೇಲೆ ಒಡ್ಕೊಂಡು ಬರ್ತಾ ಇತ್ತು, ವಿಷ್ಯ ಅದಲ್ಲ ಆ ನಾಯಿಂದೆ ನಮ್ಮ ಪಕ್ಕದ್ ಮನೆ ರಾಮಕ್ಕನು ಓಡ್ಕೊಂಡು ಬರ್ತಾ ಇದ್ರು. ಅಯ್ಯೋ ಏನಪ್ಪಾ ಅಂತ ನೋಡಿದ್ರೆ, ನಮ್ ರಾಮಕ್ಕ ಅವ್ರ ಕೋಳಿ ಮರಿ ಈ ಕಂತ್ರಿ ನಾಯಿ ಬಾಯಲ್ಲಿತ್ತು. ಕೋಳಿ ಮರಿ ಜೀವ ಹೋದಂಗೆ ಕಾಣಿಸ್ತು , ರಾಮಕ್ಕನ್ ನೋಡಿ ಬೆಸ್ರ ಆದ್ರೂ ಆ ಬಾಣಂತಿ ನಾಯಿ ನೋಡಿ ಖುಷಿ ಆಯ್ತು. ಪ್ರೊಟೀನ್ ತಿಂದ್ಕೊಂಡು ಎಳೆ ಮಕ್ಳನ್ನ  ಸಾಕ್ಬೇಡವೇ ಆ ನಾಯಿ ಮತ್ತೆ.

------------------------------------3----------------------------
ನಿಂಗಮ್ಮ @ 90:

ನಿಂಗಮ್ಮ, ವಯಸ್ಸು ಅಂದಾಜು 90 ಇರ್ಬಹದು. ಮೂವರು ಮಕ್ಳು ಅವ್ರಿಗೆ- ನಿಂಗಯ್ಯ, ಲಕೋಟಿ (ನವಕೋಟಿ ಅಂತ ಹೆಸರಿಟ್ಟಿರಬಹ್ದು ಆದ್ರೆ ಜನ ಬಾಯ್ತಪ್ಪಿ ಲಕೋಟಿ ಮಾಡ್ಬಿಟ್ಟಿದ್ದಾರೆ ಅನ್ಸುತ್ತೆ) ಮತ್ತೆ ರಂಗಯ್ಯ. ನಿಂಗಮ್ಮನ ಗಂಡ ಬೇಗನೆ ತಿರ್ಕೊಂಡೋಗಿದ್ರಿಂದ ಮೂರು ಮಕ್ಳನ್ನ ಸಾಕೋ ಜವಾಬ್ದಾರಿ ಬಿತ್ತು. ನಮ್ಮೂರಲ್ಲಿ ಹೆಚ್ಚಿನ ಜನ ಹೊಲಗಳಲ್ಲಿ ಕೂಲಿ ಮಾಡಿನೇ ಜೀವನ ನಡಿಸ್ತಾ ಇದ್ದಿದ್ದು. ಕೂಲಿ ಮಾಡಿ ಮಕ್ಳನ್ನ ದೊಡ್ಡವ್ರನ್ನ ಮಾಡಿದ್ ಮೇಲೆ ಮಕ್ಳು ಇವ್ರಿಗೆ ಕೊನೆಗಾಲದಲ್ಲಿ ಚೆನಾಗೆ ನೋಡ್ಕೋತಾ ಇದಾರೆ. ಚೆನ್ನಾಗೇ ಅಂದ್ರೆ ಹೆಗಂತಿರಾ, ಅಜ್ಜಿ ಇವಾಗ ಭಿಕ್ಷೆ ಬೇಡೋದೊಂದೆ ಬಾಕಿ. ಇಬ್ರು ಮಕ್ಳು ಬೆಂಗ್ಳುರ್ನಲ್ಲಿ ಸೈಟು ಮನೆ ಮಾಡ್ಕೊಂಡಿದ್ರು ಅಮ್ಮನ್ನ ಒಬ್ರೇ ಬಿಟ್ಟು ಓಡೋಗಿದ್ದಾರೆ. ನಮ್ ಮನೆ ಪಕ್ಕನೆ ಈ ಅಜ್ಜಿ ಮನೆ, ಹೆಚ್ಚು ಕಮ್ಮಿ ದಿನಾಲೂ ನಮ್ಮನೇಲೆ ಊಟ. ಕಷ್ಟ ನಮಗಲ್ಲ ಆದ್ರೆ ನಿಂಗಮ್ಮಜ್ಜಿಗೆ. ಕಷ್ಟದಲ್ಲೂ ಮಕ್ಳನ್ನ ಸಾಕಿದ್ದು ಕೊನೆಗಾಲದಲ್ಲಿ ಅವ್ರ ಸ್ವಾಭಿಮಾನಕ್ಕೆ ಧಕ್ಕೆಯಾಗ್ತಾ ಇರೋದಕ್ಕೆ ದಿನೇ ದಿನೇ ಸಾಯ್ತಾ ಇದಾರೆ. ಅಜ್ಜಿ ನಮ್ಮನೇವ್ರಲ್ದಿದ್ರು ನಮ್ಮಮ್ಮ ಮಾತ್ರ ಸ್ವಂತ ತಾಯಿ ತರ ನೋಡ್ಕೋತಾ ಇದಾರೆ. ಇಂತ ಸಾಧ್ಯತೆಗಳು ಹಳ್ಳಿಗಳಲ್ಲಿ ಮಾತ್ರ.

--------------------------------4-----------------------------------

ಸ್ತ್ರೀ ಶಕ್ತಿ ಸಂಘ :

ನಮ್ಮೂರಲ್ಲಿ ನಡೆಯೋ ಸ್ತ್ರೀ ಶಕ್ತಿ ಸಂಘಗಳಿಗೆ ಅಮ್ಮನದೇ ನೇತೃತ್ವ ಕಾರಣ ಅಮ್ಮ ಅಂಗಣವಾಡಿ ಟೀಚರ್ ನೋಡಿ. ಸಂಘ ಮಾಡೋದು ನಮ್ಮನೆ ಮುಂದೇನೆ. ಅವತ್ತು ಹಣ ಉಳಿತಾಯದ ಜೊತೆ, ನಮ್ಮೂರಲ್ಲಿ ಶೋಕಿ ಮಾಡೋರ್ ಮಾನ ಹರಜಾಗೋದು ಗ್ಯಾರಂಟಿ. ಸುಮಾರು 15 ಹೆಂಗಸ್ರು ಸೇರ್ಕೊಂಡು ಯಾವನೋ ಶೋಕಿಲಾಲನ್ನಾ ಇಡ್ಕೊಂಡು ಜನ್ಮ ಜಾಲಾಡೋದು ಗ್ಯಾರಂಟಿ. ಹಳ್ಳಿಗಳಲ್ಲಿ ಎಲ್ಲರ್ ಮನೆ ವಿಷ್ಯ ಯಲ್ರಿಗೂ ಗೊತ್ತಿದ್ದೇ ಗೊತ್ತಿರುತ್ತೆ. ಆದ್ರಿಂದ ನಮ್ಮಮ್ಮ ಯಾವಾಗ್ಲೂ ನಂಗೆ ಉಗಿತಾನೆ ಇರುತ್ತೆ ಏನಂತ ಅಂದ್ರೆ "ಸಮಾಜ ಕಣಪ್ಪ ಇದು, ತಗ್ಗಿ ಬಗ್ಗಿ ನಡೀಬೇಕು ಇಲ್ಲಾಂದ್ರೆ ಮೂರ್ ಜನ ನೋಡಿದೋರ್ ಏನಂತಾರೆ " ಅಂತ. ಆ ಮೂರ್ ಜನನ್ನ ಬಾಳ ದಿನದಿಂದ ಹುಡುಕ್ತಾ ಇದೀನಿ ಯಾಕಂದ್ರೆ ಅವ್ರೇನಾದ್ರು ಸಿಕ್ಕಿದ್ರೆ ಬಗ್ಗುಸ್ಕೊಂಡು ಗೂಸಾ ಇಕ್ಕೊಕೆ.ಹಿಂಗೆ ದಿನಕ್ಕೆ ನೂರಾರು ಕಥೆಗಳು ನಮ್ಮೂರಲ್ಲಿ.

ನಮ್ಮೂರು , ಸಿಂಗ್ರಾವುತನಹಳ್ಳಿ.

No comments:

Post a Comment