ಈಗಿನ ಕಾಲದ ಶಿಕ್ಷಣವೇ ಒಂದು ದೊಡ್ಡ ವ್ಯಾಪಾರ ಮಾಡಿ ಕೊಂಡಿರೋ ಕಾಲೇಜುಗಳಲ್ಲಿ ಓದಿ ಮುಂದೆ ಕಷ್ಟ ಪಟ್ಟು ಕೆಲ್ಸ ಮಾಡಿ ಯಾವನೋ ಹುಟ್ಟಾಕಿರೋ ಕಂಪನೀಲಿ ಕೆಲ್ಸ ಮಾಡಿ ತಿಂಗಳ ಕೊನೆಯಲ್ಲಿ ಆ ಓನರ್ ಕೊಡೋ ಸಂಬಳ ಎಣಿಸಿ ಅದ್ರಲ್ಲಿ 20 % ಟ್ಯಾಕ್ಸ್ ಸರ್ಕಾರಕ್ಕೆ ಕಟ್ಟಿ ಮಿಕ್ಕಿದ್ರಲ್ಲಿ ಏನಾದ್ರು ತಗೊಳೋಣ ಅಂತ ಹೋದ್ರೆ ಅದಕ್ಕೂ 10 % ಟ್ಯಾಕ್ಸ್ ಮತ್ತೆ ಸರ್ಕಾರಕ್ಕೆ ಕಟ್ಟಿ , ಬೇಕಾಗಿರೋದನ್ನ ತಗೊಳೋಕೋ ಆಗ್ದೇ, ಇರೋದ್ರಲ್ಲೇ ಅಡ್ಜಸ್ಟ್ ಮಾಡ್ಕೊಂಡು ಆಮೇಲೆ ಆರೋಗ್ಯ ಕೆಟ್ಟೋದ್ರೆ ಸಾಲ ಮಾಡಿನಾದ್ರು ಹಣ ಕಟ್ಟಿ ಆಸ್ಪತ್ರೆ ಮಾಲೀಕರನ್ನ ಉದ್ದಾರ ಮಾಡಿ , ಬದುಕಿದೆಯಾ ಬಡ ಜೀವವೇ ಅಂತ ಸಮಾಧಾನ ಪಟ್ಕೊಳ್ತಾ , ಅವ್ನು ಏನ್ ಮಾಡಿಲ್ಲ ಅಂದ್ರು ಪರ್ವಾಗಿಲ್ಲ ಆದ್ರೆ ನಮ್ ಜಾತಿಯವನೆ ಗೆಲ್ಬೇಕು ಅಂತ ಅಂದ್ಕೊಂಡು ವೋಟ್ ಮಾಡ್ತಿರಲ್ಲ ಅದಕ್ಕೆ ನಮ್ಮ ರಾಜಕಾರಣಿಗಳು ಜನರನ್ನ ಲೂಟಿ ಮಾಡೋಕೆ ಪ್ರಜಾಪ್ರಭ್ಭುತ್ವ ಅನ್ನೋ ಆಯುಧನ ರೈತನ ನೇಗಿಲ ತರ ಉಪಯೋಗಿಸದೆ ರೌಡಿಗಳ ಲಾಂಗ್ ತರ ಉಪಯೋಗಿಸ್ತಾ ಜನರ ನೆತ್ತರ ಹರಿಸುತ್ತಿರೋದು.
ಇವತ್ತು ಓದಿಲ್ದೆ ಇರೋವರಿಗಿಂತ ಓದಿ ಬುದ್ದಿ ಬೆಳೆಸ್ಕೊಂಡಿರೋರು ಫೇಸ್ಬುಕ್ ವಾಟ್ಸಾಪ್ ಉಪಯೋಗ್ಸೋಕೆ ಬರುತ್ತೆ ಅಂತ ಜಾತಿ ರಾಜಕಾರಣವನ್ನ ಹರಡುತ್ತಿರುವುದು ಎಲ್ರಿಗೂ ಗೊತ್ತಾಗ್ತಾನೆ ಇದೆ ಅಂದ್ರೂ ಯಾವುದೇ ಭಯ ಇಲ್ದೆ ಈ ಕೆಲಸ ಮುಂದುವರೆಸುತ್ತ ಮುಂದಿನ ಭವಿಷ್ಯಕ್ಕೆ ಏನು ಮಾರ್ಗದರ್ಶಿಯನ್ನ ತಯಾರಿಸ್ತಾ ಇದಾರೆ ಅಂತ ನೋಡಿದ್ರೆ ಭಯ ಆಗುತ್ತೆ. ಹಳ್ಳಿ ಕಡೆ ಇನ್ನು ಜಾತಿ ಅನ್ನೋದೇ ಅತಿ ಹೆಚ್ಚಿನ ಮಾನದಂಡ ಆಗಿರೋದು ಯಾರು ಅಲ್ಲೆಗೆಳೆಯುವಂತಿಲ್ಲ, ಯಾರ್ಯಾರೋ ಬೇಡ ಸ್ವಂತ ನಮ್ಮನೆಯಲ್ಲೇ ನಾ ಇನ್ನು ಅದನ್ನ ತೊಡೆದುಹಾಕೋಕೆ ಶತ ಪ್ರಯತ್ನ ಮಾಡ್ತಾ ಇದೀನಿ, ಹಾಗೆ ಎಲ್ರು ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಿದಾಗ ತಮ್ಮ ಮನೆಗಳಲ್ಲಿ ಜಾತಿ ಅನ್ನೋ ಮಾನದಂಡವನ್ನ ಹೊಡೆದುಹಾಕಲು ಯತ್ನಿಸಲೇಬೇಕು. ಜಾತಿ ರಾಜಕಾರಣ ಈ ಸಲ ನಡೆದ ಚುನಾವಣೆಯಲ್ಲಿ ಅನಂತ ರೀತಿಯಲ್ಲಿ ಪ್ರಭಾವ ಬೀರಿದ್ದನ್ನ ಕಣ್ಣಾರೆ ಕಂಡು ಇನ್ನು ಅದನ್ನೇ ಮುಂದುವರೆಸಿದರೆ ನಾವು ಮೂರ್ಖರಿಂದ ಶತ ಮೂರ್ಖರಾಗುವುದರಲ್ಲಿ ಯಾವದೇ ಸಂದೇಹವಿಲ್ಲ. ಗೌಡ್ರು ಎಲ್ಲ ಕುಮಾರ ಸ್ವಾಮಿಗೆ ವೋಟ್ ಹಾಕಿ, ಲಿಂಗಾಯಿತರೆಲ್ಲ ಯಡಿಯೂರಪ್ಪನವರಿಗೆ ವೋಟ್ ಹಾಕಿ, ಅಹಿಂದ ದವರೆಲ್ಲ ಕಾಂಗ್ರೆಸ್ ಗೆ ವೋಟ್ ಹಾಕಿ ಅಂತ ರಾಜಕಾರಣಿಗಳೇ ಬೀಸಿದ ಗಾಳದಲ್ಲಿ ಬಲಿಯಾಗಿ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯಕ್ಕೆ ನಾವೇ ಹೊಣೆ.
ಇನ್ನು ಜಾತಿ ವಿಷಯ ಬಿಡೋಣ, ನೂರರಲ್ಲಿ ಮೂರು ರಾಜಕಾರಣಿ ಹೊರತು ಪಡಿಸಿ ಮಿಕ್ಕವರಲ್ಲಿ ಒಬ್ಬನನ್ನು ಜನಸೇವೆ ಮಾಡಲು ಬಂದಿರುವ ರಾಜಕಾರಣಿಯ ತೋರಿಸಿ ನೋಡೋಣ. ತೊಂಬತ್ತೇಳು ಜನ ರಾಜಕಾರಣಿಗಳು ಅಧಿಕಾರ ಹಣದ ದಾಹದಿಂದ ರಾಜಕಾರಣಕ್ಕೆ ಬಂದ್ರೆ ಮಿಕ್ಕ ಮೂವರು ಸೇರಿ ಸಮಾಜ ಉದ್ದಾರ ಮಾಡಲು ಸಾಧ್ಯವೇ , ಒಮ್ಮೆ ಯೋಚಿಸಿ. ನಮ್ಮ ಕಾಲಕ್ಕೆ ಬಿಡಿ , ನಮ್ಮ ಹಣೆಬರಹವೆ ಇಷ್ಟು. ರಾಜಕಾರಣಿಗಳು ದೂರ ದೃಷ್ಟಿಯಿಂದ(ಕೆಟ್ಟ ದೃಷ್ಟಿ) ಹೆಣೆದ ಬಲೆಯಲ್ಲಿ ಸಿಕ್ಕಿ ನರಳುವುದು ಬಹುತೇಕ ಖಚಿತ, ಕೊನೆ ಪಕ್ಷ ನಮ್ಮ ಮುಂದಿನ ಪೀಳಿಗೆಗಾದರು ಸತ್ಯ ರಾಜಕಾರಣ ಮಾಡುವ ವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದಲ್ಲವೇ. ರಾಜಕಾರಣಿಗಳು ಪದೇ ಪದೇ ಎಸೆಯುತ್ತಿರುವ ಗಾಳಕ್ಕೆ ಇನ್ನೆಷ್ಟು ವರ್ಷ ಬಲಿಯಾಗುವುದು. ಸಾಲ ಮನ್ನಾ ವಿಷಯಕ್ಕೆ ಬರೋಣ. ಮೊನ್ನೆ ಒಂದು ಅಂಕಣ ಓದಿದೆ ಗಣಿತ ವಿವರಗಳು ಹೀಗೆವೆ. ಈಗ ಸದ್ಯಕ್ಕೆ ಸಾಲ ಮನ್ನಾ ಮಾಡಲು 55 ಸಾವಿರ ಕೋಟಿ ಹಣ. ಹಣಕಾಸಿನ ಲೆಕ್ಕಾಚಾರದಲ್ಲೇ ಸರ್ಕಾರದ ಬೊಕ್ಕಸದಲ್ಲಿ ಅಷ್ಟು ಹಣವೇ ಉಳಿದಿರುವುದಿಲ್ಲ ಇನ್ನು ಮಿಕ್ಕ ಹಣವನ್ನ ಮತ್ತೆ ಜನ ಸಾಮಾನ್ಯರ ಮೇಲೆ ತೆರಿಗೆಗಳನ್ನ ಹಾಕಿ ಹಣ ವಸೂಲಿ ಮಾಡಿ ಸಾಲ ಮನ್ನಾ ಮಾಡಬಹುದೇ ಹೊರತು ಮತ್ಯಾವ ದಾರಿಯಿದ್ದಂತೆ ಕಾಣುವುದಿಲ್ಲ. ಆಕಾಸ್ಮಾತ್ ಸಲ ಮನ್ನಾ ಮಾಡಿದರೆ ತೆರಿಗೆ ರೂಪದಲ್ಲಿ ತರ ತರವಾಗಿ ಸರ್ಕಾರಕ್ಕೆ ಹಣ ನೀಡಲು ಸಿದ್ಧರಾಗಿ. ( ಕಾಮೆಂಟ್ ನಲ್ಲಿ ಅಂಕಣ ಲಗತ್ತಿಸಿದ್ದೇನೆ, ಒಮ್ಮೆ ಓದಿ) . ಇದೆಲ್ಲ ಇದ್ದ ಮೇಲೆ ಕುಮಾರಸ್ವಾಮಿ ಯವರು ಯಾವ ಆಧಾರದ ಮೇಲೆ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದ್ದರು ?? ಬರೀ ಆಮಿಷವೊಡ್ಡಿ ಯಾಕೆ ರೈತರನ್ನ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಯೋಚಿಸಿ.ಸಾಲ ಮನ್ನಾ ಮಾಡಿದರು ಅದರಿಂದ ನಷ್ಟವಿದೆ ಎಂಬುದು ಅರಿವಾದರೆ ಮಾತ್ರ ಇದನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ. ಯಡಿಯೂರಪ್ಪನವರು ಒಂದೇ ದಿನ ಮುಖ್ಯ ಮಂತ್ರಿಯಾಗಿದ್ದಾಗ ಘೋಷಿಸಿದ್ದು ನೋಡಿದರೆ ಕುಮಾರಸ್ವಾಮಿಯ ಮೇಲೆ ಒತ್ತಡ ಹೇರುವದಷ್ಟೇ ಉದ್ದೇಶವಾಗಿತ್ತು ಎಂಬುದು ಎದ್ದು ಕಾಣುತ್ತದೆ.
ನಿಜವಾದ ರೈತರ ಸಮಸ್ಯೆ ಬಗೆಹರಿಸವುದು ಯಾರಿಗೂ ಬೇಡವಾದ ವಿಷಯ. ನಿಜವಾದ ಸಮಸ್ಯೆ ಬಗೆಹರಿಸುವವರಾಗಿದ್ದರೆ ಮಂಡಿಯಲ್ಲಿ ಬೆಳಿಗ್ಗೆ ಇಂದ ಸಂಜೆವರೆಗೂ ನಿಂತು ಕಮಿಷನ್ ಏಜೆನ್ಟ್ ಗಳ ಬಾಯಲ್ಲಿ ಮಾತು ಕೇಳಿ ಅವನು ಕೊಟ್ಟ ಪುಡಿ ಹಣವ ಮನೆಗೂ ತೆಗೆದುಕೊಂಡು ಹೋಗಲಾಗದೆ ಸರ್ಕಾರಗಳೇ MRP ದರದಲ್ಲಿ ಸ್ಥಾಪನೆ ಮಾಡಿರುವ ಮಧ್ಯಪಾನ ಅಂಗಡಿಯಲ್ಲಿ ಎರಡು 90 ಹಾಕಿ ಹೆಂಡತಿ ಮಕ್ಕಳನ್ನ ಹಾಳುಗೆಡುವುತ್ತಿರುವುದನ್ನ ತಪ್ಪಿಸಲು ಒಂದೈದು ಸಾವಿರ ಕೋಟಿ ಕೊಟ್ಟು ವ್ಯವಸ್ಥಿತವಾದ e ಮಂಡಿಯನ್ನ ಸ್ಥಾಪಿಸಿದ್ದರೆ ಸಾಕಾಗಿತ್ತು. ಮತ್ತೆ ಕೆಮಿಕಲ್ ಗೊಬ್ಬರಗಳ ಬಳಸುವುದನ್ನ ನಿಲ್ಲಿಸಿ ಸಾವಯವ ಕೃಷಿಗೆ ಉತ್ತೇಜನ ನೀಡಿ ಸಾವಯವ ಮಾರುಕಟ್ಟೆಯನ್ನ ಹುಟ್ಟಿಹಾಕಬಹುದಿತ್ತು. ಮತ್ತೊಂದೈದು ಸಾವಿರ ಕೋಟಿ ಖರ್ಚು ಮಾಡಿ ಅಂತರ್ ರಾಷ್ಟ್ರಿಯ ಮಾರುಕಟ್ಟೆ ಲಿಂಕೇಜ್ ಮಾಡಿಕೊಡಬಹುದಿತ್ತು, ಫುಡ್ ಪ್ರೊಸೆಸಿಂಗ್ ಅನ್ನು ಉತ್ತೇಜನಗೊಳಿಸಿ ಹೆಚ್ಚುವರಿ ಉತ್ಪಾದನೆಯನ್ನ ಫೈನಲ್ ಪ್ರಾಡಕ್ಟ್ ಮಾಡಿಸಿ ರಫ್ತ್ತು ಮಾಡುವಲ್ಲಿ ಸಹಾಕಾರಿಯಾಗಬಹುದಿತ್ತು . ಇವೆಲ್ಲ ಮಾಡುವುದಕ್ಕೆ ಸಮಯ ಬೇಕು ಜೊತೆಗೆ ಮನಸ್ಸು ಬೇಕು ಆದರೆ ನಮ್ಮ ರಾಜಕಾರಣಿಗಳಿಗೆ ಸಮಯವೂ ಮನಸ್ಸೂ ಇದ್ದಂತೆ ಕಾಣುವುದಿಲ್ಲ. ಇಲ್ಲಿ ಯಾರೂ ನಮ್ಮವರಿಲ್ಲ ಎಂದು ಮತ್ತೊಮ್ಮೆ ಹೇಳುವೆ. ರೈತನೇ ದೇಶದ ಬೆನ್ನೆಲುಬು ಎಂದು ಖಾಲಿ ಘೋಷಣೆ ಮಾಡುತ್ತಾ ಆಮಿಷಗಳನ್ನೊಡ್ಡಿ ಅವನ ಬೆನ್ನೆಲುಬನ್ನೇ ಮುರಿದಿರುವ ರಾಜಕಾರಣಿಗಳ ಬಗ್ಗೆ ಒಮ್ಮೆ ಯೋಚಿಸಿ.
ಕೃಷಿ ಹೋಗಲಿ, ಶಿಕ್ಷಣ, ಮಹಿಳಾ ಅಭಿವೃದ್ಧಿ , ಪರಿಸರ, ಸ್ವಚ್ಛತೆ, ಕುಡಿಯುವ ನೀರು, ಕಾಡಿನ ರಕ್ಷಣೆ ಜೊತೆ ನೂರಾರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕರ್ನಾಟಕದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಒಂದು ಸರ್ಕಾರಗಳು ಇಲ್ಲ. ಯೋಜನೆಗಳು ಬರುತ್ತಿವೆ ಹಾಗೆಯೇ ಸರ್ಕಾರದ ಜೊತೆ ಮುಳುಗುತ್ತಿವೆ. ನನ್ನ ಹತ್ತಿರದ ವಿಷಯವನ್ನೇ ಹೇಳುವೆ. ನನ್ನ ತಾಯಿ ಅಂಗನವಾಡಿ ಕಾರ್ಯಕರ್ತೆ. ಚೂರೋ ಪಾರೋ ಅವಳಿಗೆ ನೀಡಿದ ಗೌರವಧನ ನಮ್ಮನ್ನ ಸಾಕಿದೆ ನಿಜ ಆದರೆ ಅವಳ ಗೌರವಧನ ಇಂದಿಗೂ ಸಂಬಳವಾಗಿ ಪರಿವರ್ತನೆಯಾಗಲೇ ಇಲ್ಲ. ಅವಳ ಕೆಲಸ ನೋಡಿದರೆ ಬೆಟ್ಟದಷ್ಟು ಆದರೆ ಅವರಿಗೆ ಇಂದಿಗೂ ನ್ಯಾಯ ದೊರೆತೆ ಇಲ್ಲ. ಇವರಿಗೆ ಸರ್ಕಾರದ ಅಧಿಕಾರಿಗಳೆಂಬ ಮಾನ್ಯತೆಯಿಲ್ಲ. ಸಂಬಳ ಬರುವುದು ಇವತ್ತಿಗೂ ಚೂರು ಪಾರೇ. ಇದನ್ನ ಉಪಯೋಗಿಸಿ ಈ ಕಮ್ಯುನಿಸ್ಟ್ ಪಕ್ಷಗಳು ಲೇಬರ್ ಯೂನಿಯನ್ ಹೆಸರಿನಲ್ಲಿ ಪ್ರತಿ ವರ್ಷ ಅವರಿಂದ ಯೂನಿಯನ್ ಸದಸ್ಯತ್ವ ಪಡೆದು ಎರಡು ಮೂರು ವರ್ಷಕ್ಕೊಮ್ಮೆ ಲಕ್ಷಾಂತರ ಹೆಂಗಳೆಯರನ್ನ ಬೀದಿಗಳಿದು ಪ್ರತಿಭಟನೆ ಮಾಡಿಸಿ ಇನ್ನೇನು ನ್ಯಾಯ ದೊರಕಿತು ಎನ್ನುವಷ್ಟರಲ್ಲಿ ಸರ್ಕಾರಗಳ ಜೊತೆ ಒಪ್ಪಂದಗಳ ನಡೆಸಿ ಪ್ರತಿಭಟನೆಯನ್ನ ಅರ್ಧಕ್ಕೆ ನಿಲ್ಲಿಸಿ ಬರೀ ಎರಡು ಸಾವಿರದ ಆಸೆಯೊಂದಿಗೆ ವಾಪಸ್ ಕಳಿಸಿಬಿಡುವುದುಂಟು. ಇಂದಿಗೂ ನೀವು ಅಥವಾ ನಿಮ್ಮ ಮಕ್ಕಳು ಪೋಲಿಯೋ ಮುಕ್ತರಾಗಿದ್ದೀರಿ ಅಥವಾ ಮತ್ತೊಂದು ಕಾಯಿಲೆಗಳು ಬಂದಿಲ್ಲವೆಂದರೆ ಅಂಗನವಾಡಿಗಳೇ ಕಾರಣ ನೆನಪಿರಲಿ. ಮತ್ತೆ ಮತ್ತೆ ಅವರು ಬೀದಿಗೆ ಬರುವುದನ್ನು ನೀವು ಮುಂದೆಯೂ ನೋಡುವಿರಿ. ಮತ್ತೊಂದು ಸಲ ಅವರು ಬೀದಿಗೆ ಬಂದರೆ ದಯಮಾಡಿ ಅವರ ಜೊತೆ ಸೇರಿ ಅವರಿಗೆ ಶಾಶ್ವತ ನ್ಯಾಯ ಸಿಗುವಂತೆ ಮಾಡುವುದು ನನ್ನ ತಾಯಿಯಂತೆ ಸಾವಿರಾರು ತಾಯಂದಿರ ಋಣ ತೀರಿಸಿದಂತೆ.
ಕ್ರೀಡೆಯನ್ನ ಮರೆತೇಬಿಡಿ, ಈ ಹರ್ಯಾಣ ಸರ್ಕಾರ ಇತ್ತೀಚೆಗೆ ಹೊರಡಿಸಿದ ನೋಟಿಸ್ ನೋಡಿ ನನಗೆ ಆಶ್ಚರ್ಯವೇ ತಂದಿತ್ತು. ಕ್ರೀಡಾಪಟುಗಳು ಅವರಿಗೆ ಬಂದ ಆದಾಯದಲ್ಲಿ 30 % ಹಣವನ್ನ ವಾಪಸ್ ಸರ್ಕಾರಕ್ಕೆ ಪಾವತಿಸಬೇಕೆಂದು ದಿಕ್ತತ್ ನೀಡಿದ್ದು ಆಘಾತಕಾರಿ ವಿಷಯವೇ ಸರಿ , (ವ್ಯಾಪಕವಾಗಿ ದಿಕ್ಕರವಾಗಿದ್ದನ್ನ ಕಂಡು ಈ ನಿರ್ಣಯ ವಾಪಸ್ ಪಡೆದಿದೆ ಎಂದು ಓದಿದೆ, ಇನ್ನು ಸರಿಯಾಗಿ ತಿಳಿದಿಲ್ಲ) ಇಂತಹ ಘೋರ ನಿರ್ಣಯಗಳನ್ನೂ ನೋಡಿ ಒಲಿಂಪಿಕ್ ಪದಕವನ್ನ ಕೇಳುವುದು ಕ್ರೀಡಾಪಟುಗಳಿಗೆ ಅವಮಾನ ಮಾಡಿದಂತೆಯೇ ಸರಿ. ಇಂತ ಕೆಲಸಗಳ ಮಾಡುವವರನ್ನ ಇಟ್ಟುಕೊಂಡು ಒಬ್ಬ ನಾಯಕ ತಾನೇ ಏನು ಮಾಡಲು ಸಾಧ್ಯ ಎನ್ನುವುದ ಯೋಚಿಸಿ. ಇಷ್ಟು ದೊಡ್ಡ ದೇಶ ನಡೆಸಲು ಒಬ್ಬ ನಾಯಕನ ಜೊತೆ ನಾವು ಆರಿಸಿ ಕಳಿಸುವ ಪ್ರತಿಯೊಂದು ವ್ಯಕ್ತಿಯು ಕೆಲಸ ಮಾಡಿದಾಗ ಮಾತ್ರ ಸುವರ್ಣ ಭಾರತವಾಗಲು ಸಾಧ್ಯ. ಚುನಾವಣೆ ಗೆಲ್ಲಲೇ ಬೇಕು ಎಂಬ ಹಠದಲ್ಲಿ ಮತ್ತದೇ ಮುಖಗಳನ್ನ ತಂದು ನಿಲ್ಲಿಸಿ ವೋಟ್ ಹಾಕಿ ಎಂದು ಕೇಳಿದರೆ ಹಾಕುವುದಕ್ಕೆ ನಮಗೂ ಅಸಹ್ಯವಾಗುವದರಲ್ಲಿ ಸಂದೇಹವಿಲ್ಲ. ಆದರೆ ತಪ್ಪು ಅವರ ಜೊತೆ ನಮ್ಮದು ಇದೆ ಎಂದು ತಿಳಿದಾಗ ಮಾತ್ರ ಈ ಕ್ಲಿಷ್ಟ ಸಮಸ್ಯೆಗೆ ಪರಿಹಾರ ಸಾಧ್ಯ. ಅಪ್ಪ ಹಾಕಿದ ಆಲದ ಮರದಂತೆ ಅದೇ ಹಳೆಯ ರಾಜಕಾರಣಿಗಳ ಮುಖ ನೋಡಿ ಜಾತಿಯನ್ನ ಮಾನದಂಡ ಹಿಡಿದು ಮತ ಹಾಕದೆ ಒಳ್ಳೆಯ ರಾಜಕಾರಣಿಗಳನ್ನ ಆರಿಸಿ ತಂದು ನಿಲ್ಲಿಸುವಂತೆ ಪಕ್ಷದ ನಾಯಕರಿಗೆ ತಾಕೀತು ಮಾಡುವುದು ಜನರ ಕೈಲಿದೆ. ಇದನ್ನ ಹಳ್ಳಿಗಳಲ್ಲಿ ಮನದಟ್ಟು ಮಾಡಬೇಕಾಗಿರುವುದು ಇದನ್ನ ಓದುತ್ತಿರುವ ವಿದ್ಯಾವಂತರಾದ ನಿಮ್ಮಂತವರಿಂದ ಮಾತ್ರ ಸಾಧ್ಯ.
ಈಗೆಲ್ಲಾ ಸಾಮಾಜಿಕ ತಾಣದಲ್ಲಿ ಸುಲಭವಾಗಿ ಜನರ ಮಾತನ್ನು ರಾಜಕೀಯ ಪಕ್ಷ ಗಳಿಗೆ ತಿಳಿಸಬಹುದು. ನಿಮ್ಮ ಅಭ್ಯರ್ಥಿ ಹೇಗಿರಬೇಕೆಂದು ನೀವೇ ಅನುಸರಿಸುವ ಪಕ್ಷಗಳಿಗೆ ತಾಕೀತು ಮಾಡಬೇಕಾದ ಅನಿವಾರ್ಯವೂ ಇದೆ. ಬಿಜೆಪಿ ಯಾಗಲಿ, ಕಾಂಗ್ರೆಸ್ ಆಗಲಿ , ಮತ್ತೊಂದಾಗಲಿ ನಿಮ್ಮ ನಿಮ್ಮ ಅಭ್ಯರ್ಥಿಗಳು ಹೀಗಿರಬೇಕೆಂದು ಖಡಾ ಖಂಡಿತವಾಗಿ ಮೊದಲೇ ನಿಮ್ಮ ದನಿಯನ್ನು ತಿಳಿಸಲು ಒಂದು ಮಾಧ್ಯಮದ ಅವಶ್ಯಕತೆಯಿದೆ. ಅಂದರೆ ಜನ ಸಾಮಾನ್ಯರ ದನಿಯಾಗಿ ಈ ಅಭಿಪ್ರಾಯಗಳನ್ನ ಸಂಗ್ರಹಿಸಲು ಮತ್ತು ಪಾರದರ್ಶಕತೆಯಿಂದ ಅಭಿಪ್ರಾಯವನ್ನ ಬಿತ್ತರಿಸಿ ಜನರೇ ಆರಿಸಿದ ಅಭ್ಯರ್ಥಿಯನ್ನ ಪಕ್ಷಗಳು ನೇಮಿಸುವ ಒಂದು ವ್ಯವಸ್ಥೆ ಇಲ್ಲಿ ಬೇಕಾಗಿದೆ. ಅಲ್ಲೆಲ್ಲೋ ದಿಲ್ಲಿಯಲ್ಲಿ ಕೂತ ರಾಹುಲ್ ಗಾಂಧಿಗಾಗಲಿ, ಅಮಿತ್ ಶಾಗಾಗಲಿ, ಮಂಡ್ಯದಲ್ಲಿ ಕೂತ ಗೌಡರಿಗಾಗಲಿ ನಮ್ಮ ಮಧುಗಿರಿಯಲ್ಲಿ ಯಾರು ಶಾಸಕ ಅಥವಾ ಸಂಸತ್ ಸದಸ್ಯ ಅಭ್ಯರ್ಥಿ ಎಂದು ಹೇಗೆ ನಿರ್ಣಯಿಸುತ್ತಾರೆ ಹೇಳಿ. ಉದಾಹರಣೆಗೆ ಮಧುಗಿರಿಯ ಜನರ ಮುಂದೆ ಪಕ್ಷಗಳೇ ಮುಂದೆ ಬಂದು ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ಅವರನ್ನ ಅಭ್ಯರ್ಥಿಯನ್ನಾಗಿ ನೇಮಿಸಬೇಕಾಗಿರುವುದು ಅತ್ಯವಶ್ಯಕ. ಹೀಗೆ ಆಯಾ ಶಾಸಕ ಮತ್ತು ಸಂಸತ್ ಕ್ಷೇತ್ರಗಳಲ್ಲಿ ಜನರೇ ಆರಿಸಿದ ಅಭ್ಯರ್ಥಿಯನ್ನ ನೇಮಿಸಿ ನಂತರ ಅವರು ಚುನಾಯಿತರಾಗಿ ಬಂದರೆ ಸರಿಯಾಗಬಹುದೇನೋ. ಇದನ್ನೆಲ್ಲ ಸರ್ಕಾರಗಳು ಮಾಡುವುದಲ್ಲ, ಪಕ್ಷಗಳು ನಿಜವಾಗಿಯೂ ಜನಸೇವೆ ಮಾಡುವ ಆಸೆಯಿದ್ದರೆ ಇಂತಹ ಒಂದು ಸರ್ವೆಗಳನ್ನ ಮಾಡುವುದು ಅವಶ್ಯಕ ಆದರೆ ಜನಗಳು ಅದಕ್ಕೆ ಸ್ಪಂದಿಸಬೇಕಾದ ಅವಶ್ಯಕತೆಯಿದೆ ಮತ್ತೆ ಆಮಿಷಕ್ಕೆ ಒಳಗಾಗಿ,ಜಾತಿ ಎಂಬ ಕೀಳು ವ್ಯವಸ್ಥೆಗೆ ಬಲಿಯಾಗಿ ಮೂರ್ಖತನ ಪ್ರದರ್ಶಿಸಿದರೆ ಇಂತಹ ನೂರು ವ್ಯವಸ್ಥೆಗಳು ಬಂದರೂ ಏನು ಬದಲಾವಣೆಗಳಾಗುವುದಿಲ್ಲ. ಇಂತಹ ಒಂದು ಮಾಧ್ಯಮ ಕಟ್ಟಲು ಶಕ್ತಿಯಿರುವ ನಾಲ್ಕಾರು
ಆಸಕ್ತರು ಮುಂದೆ ಬರಬೇಕು. ನಾನು ಪ್ರಯತ್ನಿಸುವೆ.
ರಾಜಕೀಯ ಪಕ್ಷಗಳೇ ನಮ್ಮ ಮುಂದೆ ನಿಂತು ನಮ್ಮ ಮಾತನ್ನು ಆಲಿಸುವಂತೆ ಮಾಡಿಕೊಳ್ಳುವ ಒಂದು ಹೊಸ ವಿಧಾನ ಹುಡುಕುವ ಪ್ರಯತ್ನ ಮಾಡಬೇಕಾಗಿರುವುದು ಅನಿವಾರ್ಯ ಮತ್ತು ಅತ್ಯವಶ್ಯಕ. ಇರುವ ಪಕ್ಷಗಳಿರಲಿ, ಇರುವ ನಾಯಕರುಗಳಿರಲಿ ಆದರೆ ಜನರು ಯಾರು ತಮ್ಮ ಸೇವೆ ಮಾಡಬೇಕು ಎಂದು ಆರಿಸಿಕೊಳ್ಳುವ ವ್ಯವಸ್ಥೆ ಬರಲಿ, ನಮ್ಮಿ ಗುಲಾಮತನ ಹೋಗಿ ಪ್ರಜಾಪ್ರಭುತ್ವದ ನಿಜ ಸ್ವರೂಪ ಬಾಳಿ ಬೆಳಗಲಿ , ರಾಜಕಾರಣಿಗಳನ್ನ ಅವಶ್ಯಕತೆಗಿಂತ ಹೆಚ್ಚು ಮೆರೆಸದಿರದ ಪ್ರಜೆಗಳು ನಾವಾಗಲಿ, ಪ್ರಜೆ ರಾಜನಾಗಲಿ, ರಾಜಕಾರಣಿಗಳು ಸೇವಕರಾಗಲಿ ಎಂದು ಆಶಿಸುತ್ತಾ ... !
- ಪುಟ್ಟಾರಾಧ್ಯ ಸಿದ್ದರಾಜ್
No comments:
Post a Comment