ಚರ್ಚೆಗೆ ವಿಷಯವಿದೆ ಓದಿ ನೋಡಿ.
ಕನ್ನಡಿಗರೇಕೆ ಭಾಷೆಯ ಮೇಲಷ್ಟು ಒಲವು? ಹಿಂದಿಯನ್ನೇಕೆ ಇವರು ಒಪ್ಪುತ್ತಿಲ್ಲಾ? ಹಿಂದಿಯನ್ನು ಹೆಚ್ಚು ಜನ ಮಾತನಾಡುವುದಿಲ್ಲವೇ? ಭಾರತ ಏಕೀಕರಣಕ್ಕೆ ಹಿಂದಿಯಿಂದ ಮಾತ್ರ ಸಾಧ್ಯವೇ?. ಇವೆಲ್ಲ ಹಿಂದಿ ಮಾತನಾಡುವ ಭಾರತೀಯರ ಪ್ರಶ್ನೆಗಳಾಗಿ ಉಳಿದಿವೆ.
ಭಾಷೆಗಳನ್ನಾಧರಿಸಿಯೇ ಸಂವಿಧಾನದ ಪ್ರಕಾರ ರಾಜ್ಯಗಳನ್ನು ವಿಂಗಡಿಸಿರುವುದು ಎಲ್ಲರಿಗೆ ತಿಳಿದಿರುವ ವಿಷಯವೇ ಹೌದು. ಸುಮಾರು 6 ಕೋಟಿಗಿಂತಲು ಹೆಚ್ಚು ಕನ್ನಡ ಮಾತನಾಡುವ ಜನರಿದ್ದು ಅದರಲ್ಲಿ 5 ಕೋಟಿಗಿಂತ ಹೆಚ್ಚು ಜನರಿಗೆ ಕನ್ನಡ ಭಾಷೆ ಬಿಟ್ಟು ಬೇರೆ ಅರ್ಥವಾಗುವುದು ಅಷ್ಟಕ್ಕಷ್ಟೇಯೇ. ಅಂತಹುದರಲ್ಲಿ ಹಳ್ಳಿಗಳೊಳಗೆ ನುಗ್ಗಿ ಹಿಂದಿಯಲ್ಲಿ ನಾಮಫಲಕಗಳನ್ನ ಹಾಕಿದಲ್ಲಿ ಸಾಮಾನ್ಯ ಜನರಿಗೆ ಆಗುವ ಸಮಸ್ಯೆಗಳನ್ನಾದರು ಊಹಿಸಿ.
ತ್ರಿಭಾಷಾ ಸೂತ್ರವು ಹೊಸದೇನಲ್ಲ, ಹಿಂದಿ ಚಿತ್ರಗಳು ಹಾಡುಗಳನ್ನ ನಾವು ಕೇಳದೆ ಇರುವುದೇನಲ್ಲ. ಭಾಷೆಗಳನ್ನ ಕಲಿಯೋಣ ಆದರೆ ನಮಗೆ ಬೇಕಾದಾಗ ಮಾತ್ರ ಕಲಿಯುವ ಸ್ವಾತಂತ್ರವಿರಬೇಕೆನ್ನುವುದು ನಮ್ಮ ವಾದ. ನಮ್ಮ ಭಾಷೆಯನ್ನ ಸಾರಾಸಗಟಾಗಿ ತಳ್ಳಿ ಹಾಕಿ ಹಿಂದಿಯನ್ನು ಹೇರುವುದು ಯಾವ ಸೀಮೆಯ ನ್ಯಾಯ ಹೇಳಿ.
ಕನ್ನಡವೇನು ಇದ್ದಕಿದ್ದಂತೆ ಹುಟ್ಟಿ ಬಂದ ಭಾಷೆಯೇ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಬೃಹತ್ ಇತಿಹಾಸವಿದೆ. ಸಂಸ್ಕೃತ ಬಿಟ್ಟರೆ ನಂತರ ಚಾಲ್ತಿಯಲ್ಲಿದ್ದಿದ್ದು ಕನ್ನಡ ಮತ್ತು ತಮಿಳು ಭಾಷೆಗಳಷ್ಟೇ. ಹಿಂದಿಯೆನ್ನುವುದು ಇನ್ನು ಯಾರ ತಲೆಗಳಲ್ಲೂ ಹುಟ್ಟಿರಲಿಲ್ಲ. ಸಾಹಿತ್ಯದ ವಿಷಯಕ್ಕೆ ಬಂದರೆ ಕನ್ನಡದಲ್ಲಿರುವ ಶ್ರೀಮಂತ ಸಾಹಿತ್ಯಕ್ಕೆ ಯಾವ ಭಾಷೆಯ ಸಾಹಿತ್ಯವು ಸಾಟಿಯಿಲ್ಲದಿರುವುದು ಕಂಡು ಬರುವುದಿಲ್ಲವೇ. ಇದು ರಾಷ್ಟ್ರೀಯ ಮಟ್ಟದಲ್ಲಾಗುತ್ತಿರುವ ಅನ್ಯಾಯವಾದರೆ ರಾಜ್ಯ ಮಟ್ಟದಲ್ಲೇನು ಕನ್ನಡಕ್ಕೆ ಅಂತ ಬೆಲೆಯಿಲ್ಲ ಎನ್ನುವುದನ್ನ ನಾವು ಒಪ್ಪಲೇಬೇಕು.
50 ವರ್ಷಕ್ಕೆ ಹಿಂದೆ ಹೋದರೆ ಅಂದಿಗೆ ಓದುವುದೇ ಒಂದು ದೊಡ್ಡ ಸಾಧನೆ ಆದ್ದರಿಂದ ಕನ್ನಡದಲ್ಲೇ ಓದಿ ಕರ್ನಾಟಕದಲ್ಲೇ ಕೆಲಸ ಮಾಡುತ್ತಿದ್ದಿದ್ದು ಸಾಮಾನ್ಯ. 25 ವರ್ಷಗಳ ಹಿಂದೆ ಹೋಗಿ. ಕನ್ನಡ ಮಾಧ್ಯಮ ಸ್ವಲ್ಪ ಹೊಡೆತ ತಿಂಡಿತ್ತು. ಇಂಗ್ಲಿಷ್ ಮಾಧ್ಯಮ ತಲೆಯೆತ್ತಿತ್ತು. ಜಾಗತೀಕರಣವಾದಂತೆ ಇಂಗ್ಲಿಷ್ ಬಳಕೆಯು ಹೆಚ್ಚಾಗತೊಡಗಿತು. ಷೇರು ಪೇಟೆ, ಕಂಪ್ಯೂಟರ್ ಭಾಷೆಗಳನ್ನ ಕಲಿಯಲು ಇಂಗ್ಲಿಷ್ ಅತ್ಯಗತ್ಯವೆನಿಸತೊಡಗಿತು. 10 ವರ್ಷ ಹಿಂದಕ್ಕೆ ಹೋಗೋಣ. ಎಲ್ಲರಿಗೂ ಇಂಗ್ಲಿಷ್ ಮಾಧ್ಯಮವೇ ಸರಿ ಎನ್ನಿಸತೊಡಗಿತು.
ಕನ್ನಡ ಮಾಧ್ಯಮದಲ್ಲೋದಿ ಸರ್ಕಾರಿ ಕೆಲಸಗಳನ್ನ ಸೇರಲು ಎಲ್ಲರಿಗೂ ಭಯ ಮೂಡತೊಡಗಿತು. ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರ ಜನರನ್ನು ಅಣುಕಿಸುತ್ತಾ ಕೇಕೆ ಹಾಕುವುದನ್ನ ನೋಡಿ, ಜನರಿಗೆ ಸರ್ಕಾರಿ ಕೆಲಸಗಳ ಮೇಲೆ ಅಲಕ್ಷ್ಯ ಹುಟ್ಟಿದ್ದನ್ನು ನಾವುಗಳು ಗಮನಿಸಬಹುದು. ಅದರಲ್ಲಿ ಬೇರೆ ಈ ಸರ್ಕಾರಿ ಕೆಲಸಗಳಲ್ಲಿ ಸಮಾನತೆ ಇಲ್ಲ. ಕಾರ್ಪೊರೇಟ್ ನಲ್ಲಿರುವಂತೆ ಸಮಾನ ವೇದಿಕೆಯಿಲ್ಲ, ಕೆಲಸ ಮಾಡು ಬಿಡು, ಜಾತಿ ಮತ್ತು ವಯಸ್ಸಿನಾಧಾರದ ಮೇಲೆ ಬಡ್ತಿ ನೀಡುವುದು ಇವೆಲ್ಲ ಯಾವುಗಳು ಉತ್ತಮವೆಂದು ಹೇಳಲಾಗುವುದಿಲ್ಲ.
ಕನ್ನಡ ಮಾಧ್ಯಮದಲ್ಲೋದಿ ಮುಂದೆ ಭವಿಷ್ಯವೇ ಇಲ್ಲದಂತೆ ಮಾಡಿಕೊಳ್ಳುವುದಕ್ಕಿಂತ ಇಂಗ್ಲೀಷ್ ಮಾಧ್ಯಮದಲ್ಲೋದಿಸಿ ಮಕ್ಕಳನ್ನು ಇಂಜಿನಿಯರ್ ಅಥವಾ ಡಾಕ್ಟರ್ ಮಾಡಿಬಿಡೋಣ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನ ನಾವು ಅಲ್ಲೆಗೆಳೆಯುವಂತಿಲ್ಲ. ಹಳ್ಳಿಗಳಲ್ಲಿ ಒಂದೊತ್ತು ಊಟ ಬಿಟ್ಟಾದರು ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಹಪಹಪಿಸುತ್ತಿಲ್ಲವೇ.
ತಪ್ಪು ಪೋಷಕರದ್ದಲ್ಲ ಮಕ್ಕಳು ಕನ್ನಡ ಮಾಧ್ಯಮದಲ್ಲೋದಿ , ತಾವುಗಳು ಓದಿದ್ದಕ್ಕೂ ಕೆಲಸ ಮಾಡುವದಕ್ಕೂ ಸಂಬಂಧವಿರದೆ ಸರಿಯಾಗಿ ಜೀವನ ರೂಪಿಸಿಕೊಳ್ಳಲಾಗುವುದನ್ನು ಅವರಿಗೆ ಊಹಿಸಲು ಅಸಾಧ್ಯ. ಪರಿಸ್ಥಿತಿ ಹೇಗಿದೆಯೆಂದರೆ ಕನ್ನಡವನ್ನ ಬಳಸುತ್ತಿರುವುದು ಚಿತ್ರರಂಗದಲ್ಲಿ ಮತ್ತು ಕಲಾ ಕ್ಷೇತ್ರದಲ್ಲಿ ಮಾತ್ರ. ಕನ್ನಡ ಆಡಳಿತ ಭಾಷೆಯಾದರು ಕನ್ನಡ ಮಾಧ್ಯಮ ಕಲಿತವರಿಗೆ ಕೆಲಸ ಗಿಟ್ಟಿಸುವುದು ಸುಲಭದ ಮಾತಲ್ಲ. ಈಗಿನ ಪರಿಸ್ಥಿತಿಯಲ್ಲಿ ಭಾಷೆಯನ್ನು ಬೆಳೆಸಲು ಕಲೆಗೆ ಒತ್ತುಕೊಡುವುದರಿಂದ ಮಾತ್ರ ಸಾಧ್ಯ ಎಂದೆನಿಸುತ್ತಿದೆ. ಅದನ್ನಾದರು ಸರ್ಕಾರಗಳು ಅರಿತು ಅದರ ನಿಟ್ಟಿನಲ್ಲಿ ಕೆಲಸ ಮಾಡುವುದು ಸೂಕ್ತ.
ಇಂಜಿನಿಯರ್ ಗಳು, ವಿಜ್ಞಾನಿಗಳು, ಡಾಕ್ಟರಗಳು, ಎಲ್ಲರೂ ಬೇಕು ಮತ್ತು ಈ ವರ್ಗದವರಿಗೆ ಇಂಗ್ಲೀಷ್ ಬಹು ಮುಖ್ಯ. ಅದರಂತೆ ಕನ್ನಡ ಮಾಧ್ಯಮದಲ್ಲೋದಿದವರೆಗೂ ಉತ್ತಮ ಅವಕಾಶಗಳನ್ನ ಕಲ್ಪಿಸಿಕೊಟ್ಟರೆ ಭಾಷೆಗೆ ಒತ್ತು ಕೊಟ್ಟಂತಾಗುವುದು.
ಡಾ|| ರಾಜ್ ರವರ ಹುಟ್ಟು ಹಬ್ಬದಂದು ಅವರ ಚಿತ್ರಗಳ ಬಗ್ಗೆ ಬರೆಯುವುದಕ್ಕಿಂತ ಅವರು ನಟಿಸಿ, ಪ್ರೀತಿಸಿ ಬೆಳೆಸಿದ ವಸ್ತುವಿನ ಮೇಲೆ ಬರೆಯೋಣವೆಂದೆನಿಸಿದಾಗ ತೋಚಿದ್ದು ಕನ್ನಡ. ಅವರ ಕನ್ನಡಕ್ಕೆ ಮತ್ತೆ ಕಲೆಗೆ ತೋರುತ್ತಿದ್ದ ಪ್ರೀತಿ ಇಂದಿಗೂ ಅವಿಸ್ಮರಣೀಯ. ಬಂಗಾರದ ಮನುಷ್ಯನಿಗೆ ಹುಟ್ಟುಬಹಬ್ಬದ ಶುಭಾಶಯಗಳು.
ಇದು ನನ್ನ ಅಭಿಪ್ರಾಯ. ಎಲ್ಲಾದರೂ ಎಡವಿದ್ದಲ್ಲಿ ತಿಳಿಸಿ. ಚರ್ಚೆ ಮಾಡೋಣ.

No comments:
Post a Comment